ಬೀದಿಬದಿ ವ್ಯಾಪಾರಿಗಳಿಗೆ ನೋಟಿಸ್ :  ಆಹಾರ ಗುಣಮಟ್ಟ ಕಾಯ್ದುಕೊಳ್ಳದ ಆರೋಪ

Food safety
Published on

ಬೆಂಗಳೂರು: ರಾಜ್ಯಾದ್ಯಂತ 1,557 ಬೀದಿಬದಿ ಆಹಾರ ಮಾರಾಟ ಘಟಕಗಳನ್ನು ಪರಿಶೀಲನೆ ನಡೆಸಿದ್ದು, ಕಳಪೆ ಗುಣಮಟ್ಟದ ಆಹಾರ ವಿತರಣೆ ಹಾಗೂ ಶುಚಿತ್ವ ಕಾಯ್ದುಕೊಳ್ಳದ 406 ಮಾರಾಟಗಾರರಿಗೆ ಆಹಾರ ಸುರಕ್ಷತಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಗುಣಮಟ್ಟ, ನೈರ್ಮಲ್ಯ ಕಾಯ್ದುಕೊಳ್ಳದ ಬೀದಿಬದಿ ಆಹಾರ ಮಾರಾಟಗಾರರಿಗೆ ಒಟ್ಟು 44,500 ರೂ. ದಂಡ ವಿಧಿಸಲಾಗಿದ್ದು, 866 ಬೀದಿ ಘಟಕಗಳಿಗೆ ಇಲಾಖೆಯಡಿ ಉಚಿತ ನೋಂದಣಿ ಒದಗಿಸಲಾಗಿದೆ. ಆಹಾರದ ಗುಣಮಟ್ಟ ಕಾಯ್ದುಕೊಳ್ಳುವಿಕೆ, ಕೌಶಲ ವೃದ್ಧಿಗೆ ಸಂಬಂಧಿಸಿದಂತೆ 1,240 ಆಹಾರ ಮಾರಾಟಗಾರರಿಗೆ ತರಬೇತಿ ಒದಗಿಸಲಾಗಿದೆ ಎಂದು ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ರಾಜ್ಯದಾದ್ಯಂತ 184 ಬಸ್ ನಿಲ್ದಾಣಗಳಲ್ಲಿ, 871 ಆಹಾರ ಮಳಿಗೆಗಳನ್ನು ಪರಿಶೀಲನೆ ನಡೆಸಲಾಗಿದೆ. ನಿಗದಿತ ಮಾನದಂಡ ಪಾಲಿಸದ 216 ಮಳಿಗೆಗಳಿಗೆ ನೋಟಿಸ್ ನೀಡಿದ್ದು, 55 ಸಾವಿರ ರೂ. ದಂಡ ವಿಧಿಸಲಾಗಿದೆ. 95 ಆಹಾರ ಮಾದರಿಗಳನ್ನು ವಿಶ್ಲೇಷಣೆ ನಡೆಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಆಹಾರ ಸುರಕ್ಷತೆ, ಗುಣಮಟ್ಟ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ 720 ಹೋಟೆಲ್/ರೆಸ್ಟೋರೆಂಟ್‌ಗಳನ್ನು ಪರಿಶೀಲಿಸಲಾಗಿದ್ದು, ಗುಣಮಟ್ಟ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡದ 183 ಹೋಟೆಲ್‌ಗಳಿಗೆ ನೋಟಿಸ್‌ಗಳನ್ನು ನೀಡಿ, 21,500 ದಂಡ ವಿಧಿಸಲಾಗಿದೆ. 234 ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಣೆ ನಡೆಸಲು ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ. 604 ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, 541 ಆಹಾರ ಮಾದರಿಗಳನ್ನು ವಿಶ್ಲೇಷಣೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಔಷಧ ಮಳಿಗೆ ಪರವಾನಗಿ ಸಸ್ಪೆಂಡ್

ಕಳೆದ ಜೂನ್‌ನಲ್ಲಿ 2,544 ಔಷಧ ಮಳಿಗೆಗಳನ್ನು ಪರಿಶೀಲಿಸಿದ್ದು, 133 ಔಷಧ ಮಳಿಗೆಗಳ ಪರವಾನಗಿ ಅಮಾನತು ಮಾಡಲಾಗಿದೆ. 20 ಮಳಿಗೆಗಳ ಪರವಾನಗಿ ರದ್ದುಪಡಿಸಲಾಗಿದೆ. ಔಷಧ ಪ್ರಯೋಗಾಲಯಗಳಲ್ಲಿ 1,333 ಔಷಧ ಮಾದರಿಗಳನ್ನು ವಿಶ್ಲೇಷಿಸಲಾಗಿದ್ದು, ಇವುಗಳಲ್ಲಿ 41 ಔಷಧ ಮಾದರಿಗಳು ಕಳಪೆ ಗುಣಮಟ್ಟ ಹೊಂದಿವೆ ಎನ್ನುವುದು ದೃಢಪಟ್ಟಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net