

ಗೋಲಾಘಾಟ್: ಮೃತರ ಕುಟುಂಬದವರು ಆಯೋಜಿಸಿದ್ದ ತಿಥಿ ಕಾರ್ಯಕ್ರಮಕ್ಕೆ ಹೋದ ಸುಮಾರು 200ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥಗೊಂಡಿದ್ದು, ಇದೀಗ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಒಳಗಾಗಿದ್ದಾರೆ. ಶ್ರದ್ಧಾಂಜಲಿ ಸಲ್ಲಿಸಿದ ನಂತರ ಊಟ ಸವಿದ ಜನರು, ಅಲ್ಲಿ ನೀಡಲಾಗಿದ್ದ ತಿಂಡಿಯೊಂದನ್ನು ಸೇವಿಸಿದ ಪರಿಣಾಮ ಸದ್ಯ ಆಸ್ಪತ್ರೆ (Food Poison) ಪಾಲಾಗಿದ್ದಾರೆ. ಈ ಘಟನೆ ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ವರದಿಯಾಗಿದೆ.
ಸರುಪಥರ್ ಪ್ರದೇಶದ ಉರಿಯಮ್‌ಘಾಟ್‌ನ ಪಾಸ್ಗೋರಿಯಾ ಗ್ರಾಮದಲ್ಲಿ ಪ್ರದೀಪ್ ಗೊಗೊಯ್ ಎಂಬುವವರ ತಾಯಿಯ ಸ್ಮರಣಾರ್ಥದ ಹಿನ್ನಲೆ ಆಯೋಜಿಸಲಾಗಿದ್ದ ತಿಥಿ ಕಾರ್ಯದಲ್ಲಿ ಕುಟುಂಬಸ್ಥರು ಮತ್ತು ಅಕ್ಕ-ಪಕ್ಕದ ಊರಿನವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಊಟ ಸವಿದ ಜನರು, ಸಮಾರಂಭದಲ್ಲಿ ನೀಡಲಾದ 'ಜಲ್ಪಾನ್' ಸೇವಿಸಿದ್ದಾರೆ. ಇದನ್ನು ತಿಂದ ತಕ್ಷಣವೇ ಹೊಟ್ಟೆ ನೋವು, ತಲೆನೋವು, ವಾಂತಿಯಿಂದ ತೀವ್ರ ಅಸ್ವಸ್ಥಗೊಂಡಿದ್ದಾರೆ.
"ಮೊದಲಿಗೆ 53 ಜನರನ್ನು ತಕ್ಷಣವೇ ಸರುಪಥರ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಮತ್ತು ಉರಿಯಮ್‌ಘಾಟ್‌ನಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಅವರಲ್ಲಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೋರ್ಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಯಿತು" ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).