ಅವೆಲ್ಲ ನಮ್ಮ... ಇಲಿಗಳ ಓಡಾಟದ ಬಗ್ಗೆ ಪ್ರಶ್ನಿಸಿದ ಫುಡ್​ ಇನ್ಸ್​ಪೆಕ್ಟರ್​ಗೆ ರೆಸ್ಟೋರೆಂಟ್​ ಓನರ್​ ಕೊಟ್ಟಿದ್ದು ಶಾಕಿಂಗ್​ ಉತ್ತರ! Restaurant

Restaurant
Published on

ಭೋಪಾಲ್​: ರೆಸ್ಟೋರೆಂಟ್ ( Restaurant )​ ಒಂದರ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಅಲ್ಲಿದ್ದ ಇಲಿಗಳು ಮತ್ತು ಕೀಟಗಳ ಗುಂಪನ್ನು ನೋಡಿ ಪ್ರಶ್ನೆ ಮಾಡಿದಾಗ, ರೆಸ್ಟೋರೆಂಟ್​ ಮಾಲಿಕ ಕೊಟ್ಟ ಉತ್ತರ ಕೇಳಿ ಅಧಿಕಾರಿಗಳು ದಂಗಾಗಿದ್ದಾರೆ. ಈ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಆಹಾರ ಸುರಕ್ಷತಾ ಅಧಿಕಾರಿಗಳು ರೆಸ್ಟೋರೆಂಟ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಜ್ಜಿಗೆಯಲ್ಲಿ ಕೀಟಗಳು ತೆವಳುತ್ತಿದ್ದವು. ಅಡುಗೆಮನೆಯಲ್ಲಿ ಇಲಿಗಳು ಆರಾಮಾಗಿ ಓಡಾಡಿಕೊಂಡಿದ್ದವು. ಇನ್ನು ಆಹಾರಗಳನ್ನು ಮುಚ್ಚಿಡಿದ ಪರಿಣಾಮ ನೊಣಗಳು ಮುತ್ತಿಕೊಂಡಿದ್ದವು. ಇದೇನು ಅಡುಗೆ ಮನೆಯೇ? ಅಥವಾ ಚರಂಡಿಯೇ? ಎಂದು ಅನೈರ್ಮಲ್ಯದ ಬಗ್ಗೆ ರೆಸ್ಟೋರೆಂಟ್ ಮಾಲೀಕರನ್ನು ಪ್ರಶ್ನಿಸಿದಾಗ, ಆತ ನೀಡಿದ ಉತ್ತರ ಕೇಳಿ ಅಧಿಕಾರಿಗಳು ಒಂದು ಕ್ಷಣ ದಂಗಾದರು. ಆತನ ಉತ್ತರ ಏನಿತ್ತು ಎಂದರೆ, ಅವೆಲ್ಲ ನಮ್ಮ ಸಾಕುಪ್ರಾಣಿಗಳು ಎಂದು ಹೇಳಿದನು.

ಮಧ್ಯಪ್ರದೇಶದ ಸಾಗರ್‌ನಲ್ಲಿರುವ ಬುಂದೇಲ್‌ಖಂಡ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಎದುರಿನ ರಾಶಿ ರೆಸ್ಟೋರೆಂಟ್ ಮೇಲೆ ಆಹಾರ ಇಲಾಖೆಯ ತಂಡ ದಾಳಿ ನಡೆಸಿತು. ಅಧಿಕಾರಿಗಳ ತಂಡವು ದುರ್ವಾಸನೆಯಿಂದ ಕೂಡಿದ ಕೋಣೆಗೆ ಪ್ರವೇಶಿಸಿದಾಗ ಒಂದು ಕ್ಷಣ ಶಾಕ್​ ಆದರು ಮತ್ತು ಮೂಗು ಮುಚ್ಚಿಕೊಂಡರು. ರೆಸ್ಟೋರೆಂಟ್‌ನ ಅಡುಗೆಮನೆಯಲ್ಲಿ ಕೀಟಗಳು, ನೊಣಗಳು ಮತ್ತು ಇಲಿಗಳು ಆರಾಮಾಗಿ ಓಡಾಡಿಕೊಂಡಿದ್ದವು. ಅದೊಂದು ರೀತಿಯಲ್ಲಿ ಜೀವಿಗಳಿಗೆ ವಿಶ್ರಾಂತಿ ಕೋಣೆಯಾಗಿತ್ತು. ಇದಿಷ್ಟೇ ಅಲ್ಲದೆ, ರೆಸ್ಟೋರೆಂಟ್​ನ ಜಿಡ್ಡಿನ ಗೋಡೆಗಳು ಅಧಿಕಾರಿಗಳಿಗೆ ಇನ್ನಷ್ಟು ಕೋಪ ತರಿಸಿತು.

ಅಲ್ಲಿನ ಅನೈರ್ಮಲ್ಯ ಪರಿಸ್ಥಿತಿ ಮತ್ತು ತುಂಬಿ ತುಳುಕಾಡುತ್ತಿದ್ದ ಕೊಳಕು ಆಹಾರ ಸುರಕ್ಷತಾ ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿತು. ಈ ವೇಳೆ ಆಹಾರ ನಿರೀಕ್ಷಕಿ ( Food Inspector ) ಪ್ರೀತಿ ರೈ ಅವರು ರೆಸ್ಟೋರೆಂಟ್ ಮಾಲೀಕರನ್ನು ಇಲಿಗಳ ಬಗ್ಗೆ ಪ್ರಶ್ನೆ ಮಾಡಿದರು. ಈ ವೇಳೆ ಆತ ಕೊಟ್ಟ ಉತ್ತರ ಪ್ರೀತಿ ರೈ ಅವರನ್ನು ಅಚ್ಚರಿಗೆ ದೂಡಿತು. ಮೇಡಂ, ಈ ಇಲಿಗಳು ನಮ್ಮ ಸಾಕುಪ್ರಾಣಿಗಳು ಎಂದು ಮಾಲೀಕ ಹೇಳಿದನು.

ಇನ್ನು ತನಿಖೆಯಲ್ಲಿ ಗೃಹಬಳಕೆಯ ಅನಿಲ ಸಿಲಿಂಡರ್‌ಗಳ ಅಕ್ರಮ ಬಳಕೆಯೂ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಮಾಲೀಕರು "ಇದು ಗೃಹಬಳಕೆಯ ಸಿಲಿಂಡರ್, ನಾನು ಅದನ್ನು ರೀಫಿಲ್​ಗಾಗಿ ತಂದಿದ್ದೇನೆ ಎಂದು ಸಮಜಾಯಿಷಿ ನೀಡಿದನು. ಇದೇ ವೇಳೆ ತನಿಖಾಧಿಕಾರಿಗಳು ಪರೀಕ್ಷೆಗಾಗಿ ಆಹಾರದ ಮಾದರಿಗಳನ್ನು ಸಂಗ್ರಹಿಸಿ ರೆಸ್ಟೋರೆಂಟ್ ಅನ್ನು ಸೀಲ್ ಮಾಡಲು ಆದೇಶಿಸಿದರು. ಪರೀಕ್ಷಾ ಫಲಿತಾಂಶಗಳು ಬಂದ ನಂತರ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಅಲ್ಲದೆ, ಏಳು ದಿನಗಳಲ್ಲಿ ಲೋಪದೋಷಗಳನ್ನು ಸರಿಪಡಿಸಲು ರೆಸ್ಟೋರೆಂಟ್ ಮಾಲೀಕರಿಗೆ ಸೂಚಿಸಲಾಯಿತು.

ಇನ್ನು ಈ ದಾಳಿಯು ನಗರದ ಇತರ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್ ಮಾಲೀಕರಲ್ಲಿ ಭೀತಿಯನ್ನುಂಟುಮಾಡಿದೆ. ನೈರ್ಮಲ್ಯ ನಿಯಮಗಳನ್ನು ಪಾಲಿಸದಿದ್ದರೆ ಇತರ ಸ್ಥಳಗಳಲ್ಲಿ ತಪಾಸಣೆ ಮಾಡಿ, ಪರವಾನಗಿಗಳನ್ನು ರದ್ದುಗೊಳಿಸುವುದಾಗಿ ಆಹಾರ ಇಲಾಖೆ ಖಡಕ್​ ಎಚ್ಚರಿಕೆ ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net