

ಸಾಗರ: ಇಂದಿನ ಕಾಲದಲ್ಲಿ ವ್ಯಾಸಂಗಕ್ಕೆ ಮಕ್ಕಳಿಗೆ ಹೆಚ್ಚು ಸವಾಲುಗಳಿಲ್ಲ. ಸೌಕರ್ಯಗಳ ಕೊರತೆಯೂ ಇಲ್ಲ. ಹಾಗಾಗಿ ಓದಿನ ಬಗ್ಗೆ ಹೆಚ್ಚು ಆಸಕ್ತಿವಹಿಸಬೇಕು ಎಂದು ಇಕ್ಕೇರಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಟಿ.ರತ್ನಾಕರ್ ಹೇಳಿದರು.
ತಾಲೂಕಿನ ಎಡಜಿಗಳೇಮನೆಯ ಇಕ್ಕೇರಿ ಪ್ರೌಢಶಾಲೆಯಲ್ಲಿ ಸೋಮವಾರ ಬೆಂಗಳೂರಿನ ಕೆನರಾ ಬ್ಯಾಂಕ್ ಜ್ಯುಬಿಲಿ ಎಜುಕೇಷನ್ ಂಡ್ ಸಂಸ್ಥೆಯಿಂದ ಎಸ್.ಆರ್.ಪ್ರಭು ಸ್ಮರಣಾರ್ಥ ಉಚಿತವಾಗಿ ನೋಟ್‌ಬುಕ್‌ಗಳನ್ನು ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಚಿತ್ತವನ್ನು ಅಪಹರಿಸುವ ಹಲವು ಸಾಧನ, ಆಮಿಷಗಳು ಎದುರಾಗುತ್ತವೆ. ಸ್ವಲ್ಪ ಎಡವಿದರೂ ಅಂಕ ಗಳಿಕೆಯಲ್ಲಿ ಹಿಂದೆ ಉಳಿಯಬೇಕಾಗುತ್ತದೆ. ಇಂತಹ ಸಂಸ್ಥೆಗಳು ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚು ಸೌಕರ್ಯ ಒದಗಿಸುತ್ತಿವೆ. ಇಕ್ಕೇರಿ ಪ್ರೌಢಶಾಲೆಗೆ ಸಂಸ್ಥೆಯ ಸಹಕಾರ ಸದಾ ಸಿಕ್ಕಿದೆ. ಅವರ ಬೆಂಬಲಕ್ಕೆ ಪ್ರತಿಯಾಗಿ ಎಸ್‌ಎಸ್‌ಎಲ್‌ಸಿ ಮಕ್ಕಳು ಶೇ.100ರಷ್ಟು ಅಂಕ ಗಳಿಸಿ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಕೆಬಿಜೆಇಎಫ್ ಸ್ಥಳೀಯ ಕಾರ್ಯಕರ್ತ ಮಾ.ವೆಂ.ಸ.ಪ್ರಸಾದ್ ಮಾತನಾಡಿ, ಕೆನರಾ ಬ್ಯಾಂಕ್ ಆಶ್ರಯದ ಸಂಸ್ಥೆಯಾಗಿ ಕೆನರಾ ಬ್ಯಾಂಕ್ ಜ್ಯುಬಿಲಿ ಎಜುಕೇಷನ್ ಸಂಸ್ಥೆ ತಾಲೂಕಿನ ವಿದ್ಯಾರ್ಥಿಗಳಿಗೆ ಕಳೆದ 18 ವರ್ಷಗಳಿಂದ ನೆರವು ನೀಡುತ್ತಿದೆ. ಇಕ್ಕೇರಿ ವಿದ್ಯಾಸಂಸ್ಥೆಯ ಮಕ್ಕಳಿಗೆ ನೋಟ್‌ಬುಕ್ ನೀಡುವ ಯೋಜನೆ ಕಳೆದ ವರ್ಷವೇ ದಶಕ ಪೂರೈಸಿತ್ತು. ಈ ಬಾರಿ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ನೋಟ್‌ಬುಕ್ ವಿತರಣೆ ಮಾಡುವ ಮೂಲಕ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಇಕ್ಕೇರಿ ವಿದ್ಯಾಸಂಸ್ಥೆ ಪ್ರಧಾನ ಕಾರ್ಯದರ್ಶಿ ಜೆ.ಆರ್.ವೆಂಕಟೇಶ್, ಪ್ರಭಾರ ಮುಖ್ಯ ಶಿಕ್ಷಕ ಉಮೇಶ್, ಮಮತಾ, ಸಂಕೇತ್, ರಾಮಚಂದ್ರ ಹೆಗಡೆ, ಶ್ರೀಕಾಂತ್ ಇತರರಿದ್ದರು.