ನೇಕಾರಿಕೆಗೆ ಮಾರುಕಟ್ಟೆ ಏರಿಳಿತ, ವಿದ್ಯುತ್ ದರ ಹೆಚ್ಚಳದ ಬಿಸಿ; ಯಾಂತ್ರಿಕ ಮಗ್ಗಗಳ ಕೆಲಸಕ್ಕೆ ಅನ್ಯ ರಾಜ್ಯದವರ ಲಗ್ಗೆ!

Power Loom
ವಿದ್ಯುತ್​ ಮಗ್ಗದಲ್ಲಿ ನೇಕಾರರ ಕೆಲಸ
Published on

| ಡಿ.ಎಂ.ಮಹೇಶ್ ದಾವಣಗೆರೆ

ಆಕರ್ಷಕ ರೇಷ್ಮೆ ಸೀರೆ, ವಿನ್ಯಾಸದ ಬಟ್ಟೆ ನೀಡಿ ಜನರಿಗೆ ಸುಂದರ ಬದುಕಿತ್ತ ನೇಕಾರರ ಜೀವನ ಅಭದ್ರತೆಯಲ್ಲಿದೆ. ನೇಕಾರಿಕೆ ಅವಲಂಬಿತ 5 ಲಕ್ಷ ಮಂದಿಯ ಸ್ಥಿತಿ ಬದಲಾಗಿಲ್ಲ. ಉದ್ಯಮ ಕತ್ತಲಿಂದ ಹೊರಬಂದಿಲ್ಲ.

ಆರ್ಥಿಕ ಮುಗ್ಗಟ್ಟು, ಮಾರುಕಟ್ಟೆಯ ಅಸ್ಥಿರತೆ, ನಿಗದಿಯಾಗದ ವೈಜ್ಞಾನಿಕ ಬೆಲೆ ಇದೆಲ್ಲದರ ಜತೆಗೆ ವಿದ್ಯುತ್ ದರ ಹೆಚ್ಚಳದ ಸುಳಿಗೆ ನೇಕಾರರು ಸಿಲುಕಿದ್ದಾರೆ. ವರ್ಷದಿಂದ ವರ್ಷಕ್ಕೆ ಮಗ್ಗಗಳ ಸಂಖ್ಯೆ ಇಳಿಕೆಯಾಗುತ್ತಿದ್ದರೆ ನೇಕಾರಿಕೆ ನಂಬಿದ ಕುಟುಂಬಗಳು ಹೊಸ ಕೆಲಸ ಹುಡುಕುವ ಧಾವಂತದಲ್ಲಿವೆ. ಸಾಲದ ಕಂತು ಕಟ್ಟಲಾಗದೆ ಅನೇಕರು ಮಗ್ಗಗಳನ್ನು ಮಾರುತ್ತಿದ್ದಾರೆ. ಜಿಎಸ್​ಟಿ, ನೋಟ್ ಬ್ಯಾನ್, ಅತಿವೃಷ್ಟಿ ಎಲ್ಲದರ ನಡುವೆ ನಜ್ಜುಗುಜ್ಜಾದ ಮಗ್ಗಗಳ ಆರ್ಥಿಕತೆ ಇನ್ನೂ ಮೇಲೆದ್ದಿಲ್ಲ.

ಬೆಳಗಾವಿ ಇನ್ನಿತರ ಗಡಿ ಜಿಲ್ಲೆಗಳ ನೇಕಾರರಿಗೆ ಪಕ್ಕದ ಮಹಾರಾಷ್ಟ್ರದಲ್ಲಿ ಮಾರುಕಟ್ಟೆ ಸೌಲಭ್ಯ ಸಿಕ್ಕರೆ ಜೀವನ ಸಲೀಸು. ಉಳಿದಂತೆ ನೇರ ಮಾರುಕಟ್ಟೆಗೆ ರಾಜ್ಯದಲ್ಲಿ ಅವಕಾಶ ಸಿಗದಿರುವ ಕಾರಣ ಅನೇಕರು ಇದರಿಂದ ವಿಮುಖರಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಕೋಟ್ಯಂತರ ರೂ. ವ್ಯವಹಾರವಾದರೂ ಮಧ್ಯವರ್ತಿಗಳು, ದಾಸ್ತಾನು ಮಾಡಿದವರಿಗೆ ಲಾಭ ಸಿಗುತ್ತಿದೆ.

ವಿದ್ಯುತ್ ಮಗ್ಗಗಳ ಬಳಿಕ ರೇಪಿಯರ್, ಆಟೊ ರೇಪಿಯರ್ ಏರ್​ಜೆಟ್ ಮೊದಲಾದ ಯಾಂತ್ರಿಕ ಲೂಮ್ಳು ಕಾಲಿಟ್ಟಿದ್ದು ಕ್ಷರ್ಣಾರ್ಧದಲ್ಲೇ 1100 ಆರ್​ಪಿಎಂ ವೇಗದಲ್ಲಿ ಹೆಚ್ಚು ವಿಸ್ತಾರದಲ್ಲಿ ಬಟ್ಟೆ ನೇಯಲಿವೆ. ಬಟ್ಟೆ

ಉತ್ಪಾದನೆಗೆ ಇಲ್ಲಿಗೆ ಬರುವ ಬೇಡಿಕೆ ಹೆಚ್ಚು. ಈ ಯಂತ್ರಗಳಿಗೆ ತಕ್ಕಂತೆ ನೇಕಾರರೂ ಅಪ್​ಡೇಟ್ ಆಗಬೇಕಿದೆ. ಸ್ಥಳೀಯರು ನೇಕಾರಿಕೆ ಬಿಟ್ಟ ಬಳಿಕ ಬಿಹಾರ್, ವಾರಾಣಸಿ, ಗುಜರಾತ್ ಮೊದಲಾದ ಅನ್ಯ ರಾಜ್ಯದವರು ಯಂತ್ರಾಧಾರಿತ ಕೆಲಸ ಮಾಡಲು ಕರ್ನಾಟಕಕ್ಕೆ ಬರುತ್ತಿದ್ದಾರೆ! ಒಂದು ಮಗ್ಗ ನಡೆದರೆ ಇದನ್ನೇ ನಂಬಿದ್ದ ಕುಟುಂಬದ ನಾಲ್ವರ ಜೀವನ ನಿರ್ವಹಣೆಯಾಗುತ್ತದೆ. ದಿನಕ್ಕೆ ತಲಾ ಕುಟುಂಬ 500 ರೂ. ಕಂಡರೂ ಪವಾಡ. ಕೋನು, ಭೀಮ್ ಲಡಿ ಸುತ್ತುವಿಕೆ, ಖಂಡಿಕೆ ಸುತ್ತುವುದು. ಮಗ್ಗದ ತಾಂತ್ರಿಕ ದುರಸ್ತಿಯ ಜಾಬ್ ವರ್ಕ್, ವೈಪಿನ್, ಟೈಲರಿಂಗ್ ಹೀಗೆ ಅನೇಕರಿಗೆ ಉದ್ಯೋಗಾವಕಾಶ ಆಗುತ್ತದೆ. ಒಂದು ಸೀರೆ ನೇಯ್ದು, ಕೂಲಿ ಮೊತ್ತ ತೆಗೆದರೂ 50- 100 ರೂ. ಲಾಭ ಸಿಗುವುದು ಕಷ್ಟ ಎಂಬುದು ನೇಕಾರರ ಮಾತು.

ಅನೇಕ ಮಗ್ಗಗಳು ಅವಸಾನದ ಅಂಚಿನತ್ತ ಸಾಗಿವೆ. ಸಾಲ ತೀರಿಸಲಾಗದೆ ಮೂರು ವರ್ಷದಲ್ಲಿ 42 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಚುನಾವಣೆಗೂ ಮುನ್ನ ಘೊಷಿಸಿದಂತೆ ನೇಕಾರರಿಗೆ ಉಚಿತ ವಿದ್ಯುತ್ ನೀಡಬೇಕು. ಜತೆಗೆ ಅವಶ್ಯವಿರುವೆಡೆ ಮಳಿಗೆ ಕಲ್ಪಿಸಬೇಕು. | ಶಿವಲಿಂಗ ಜಿ.ಟಿರಕಿ ಅಧ್ಯಕ್ಷ, ರಾಜ್ಯ ನೇಕಾರ ಸೇವಾ ಸಂಘ

ಉಚಿತ ವಿದ್ಯುತ್​ಗೆ ಮನವಿ

ಇದುವರೆಗೆ 20 ಎಚ್​ಪಿವರೆಗೆ ಯೂನಿಟ್ ಒಂದಕ್ಕೆ 1.25 ರೂ. ಶುಲ್ಕವಿತ್ತು. ಈಗಿದು 2.55 ರೂ. ಆಗಿದೆ. ಜತೆಗೆ ನಿಗದಿತ ಶುಲ್ಕ, ಸರ್ವೀಸ್ ಶುಲ್ಕವನ್ನೂ ಭರಿಸಬೇಕಿದೆ. ಇದರಿಂದ ವಿದ್ಯುತ್ ಚಾಲಿತ ಮಗ್ಗಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಸರ್ಕಾರ, ವಾರ್ಷಿಕ 75 ಕೋಟಿ ರೂ. ವರೆಗೆ ವಿದ್ಯುತ್ ಸಬ್ಸಿಡಿ ಭರಿಸುತ್ತಿದೆ. 20 ಅಶ್ವಶಕ್ತಿವರೆಗೆ ಉಚಿತ ವಿದ್ಯುತ್ ನೀಡಿದರೆ 50 ಕೋಟಿ ರೂ. ಹೊರೆ ಆಗಬಹುದು ಎಂಬುದು ನೇಕಾರ ಸಂಘಗಳ ಅಭಿಮತ. ಸರ್ಕಾರದ ಸೌಲಭ್ಯಗಳನ್ನು ನೀಡಬೇಕು, ಸಾಲಮನ್ನಾ ಮಾಡಬೇಕು, ಬಸ್, ರೈಲು, ವಿಮಾನ ನಿಲ್ದಾಣಗಳಲ್ಲಿ ನೇಕಾರರ ಮಳಿಗೆಗಳಿಗೆ ಅವಕಾಶ ನೀಡಬೇಕು. ಎಲ್ಲ ಇಲಾಖೆಗಳಲ್ಲೂ ನೇಕಾರರ ಉತ್ಪನ್ನಗಳ ಬಳಕೆಗೆ ಸರ್ಕಾರ ಉತ್ತೇಜಿಸಬೇಕು. ಜವಳಿ ಮತ್ತು ಕೈಮಗ್ಗ ಇಲಾಖೆಗೆ ಸರ್ಕಾರ ನೀಡುವ ಅನುದಾನ ಹೆಚ್ಚಿಸಬೇಕೆಂಬ ಕೂಗು ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net