

ಮುಂಬೈ: ಇಂದು ಭಾರತೀಯ ಚಿತ್ರೋದ್ಯಮದಲ್ಲಿ ಸಾಲು ಸಾಲು ಸಿನಿಮಾಗಳು ತೆರೆಗೆ ಅಪ್ಪಳಿಸಲು ಸಜ್ಜಾಗುತ್ತಿವೆ. ಅದರಲ್ಲೂ ಪ್ರತಿವಾರ ರಿಲೀಸ್ ಆಗಲು ಭರ್ಜರಿ ಪೈಪೋಟಿಗೆ ಇಳಿಯವ ಪ್ರಮುಖ ಭಾಷೆಯ ಚಿತ್ರಗಳು, ಒಂದಕ್ಕಿಂತ ಒಂದು ಭರ್ಜರಿ ಮನರಂಜನಾ ವಿಷಯಗಳನ್ನು ಹೊತ್ತು ಪ್ರೇಕ್ಷಕರ ಮುಂದೆ ಹಾಜರಾಗುತ್ತವೆ. ಈ ಪೈಕಿ ಚಿತ್ರಮಂದಿರದಲ್ಲಿ ಅಬ್ಬರಿಸಿ ಅಥವಾ ಫ್ಲಾಪ್ ಆದ ಸಿನಿಮಾಗಳು ಅಂತಿಮವಾಗಿ ಒಟಿಟಿ ಸೇರುವುದು ನಮಗೆಲ್ಲ ತಿಳಿದಿರುವ ಸಂಗತಿಯೇ. ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುವಲ್ಲಿ ವಿಫಲವಾಗಿದ್ದಲ್ಲದೇ, ಅತ್ಯಂತ ಸಾಧಾರಣ ಗಳಿಕೆಯನ್ನು ಕೂಡ ಕಾಣದ ಚಿತ್ರಗಳನ್ನು ಒಟಿಟಿ ಪ್ಲಾಟ್ಫಾರ್ಮ್ಗಳು ತಿರುಗಿಯೂ ನೋಡುವುದಿಲ್ಲ. ಇಂತಹ ಚಿತ್ರಗಳನ್ನು ಖರೀದಿ ಮಾಡಲು ಸಂಪೂರ್ಣವಾಗಿ ನಿರಾಕರಿಸುತ್ತವೆ. ಸದ್ಯ ಈ ಸಾಲಿಗೆ ಸೇರಿರುವುದು ಬಾಲಿವುಡ್ ಚಿತ್ರರಂಗದ ಸ್ಟಾರ್ ನಟನ ಸಿನಿಮಾ (Flop Cinema).
ನಟ ಅರ್ಜುನ್ ಕಪೂರ್ ಮತ್ತು ಭೂಮಿ ಪಡ್ನೇಕರ್ ಮುಖ್ಯಭೂಮಿಕೆಯಲ್ಲಿ ಅಭಿನಯದ 'ದಿ ಲೇಡಿ ಕಿಲ್ಲರ್' ಎಂಬ ಹಿಂದಿ ಸಿನಿಮಾ. ಕಳೆದ ವರ್ಷ ನವೆಂಬರ್ 03ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಕಂಡ ಈ ಚಿತ್ರ, ಅಂದು ಬಹುತೇಕ ಥಿಯೇಟರ್ಗಳಲ್ಲಿ ತೆರೆ ಕಾಣಬೇಕಿದ್ದ ಈ ಚಿತ್ರ ದೇಶವ್ಯಾಪಿ ಕೇವಲ 50 ಪರದೆಯಲ್ಲಿ ಮಾತ್ರ ಬಿಡುಗಡೆಗೊಂಡಿತು. 500 ವೀಕ್ಷಕರಿಂದ ನೋಡಲ್ಪಟ್ಟ ಈ ಸಿನಿಮಾ ಮೊದಲ ದಿನ ಗಳಿಸಿದ್ದು 38 ಸಾವಿರ ರೂ. ಅಷ್ಟೇ. ಸೆಕ್ಷನ್ 375 ಖ್ಯಾತಿಯ ಅಜಯ್ ಭಾಯ್ ನಿರ್ದೇಶನದಿಂದ ದಿ ಲೇಡಿ ಕಿಲ್ಲರ್ ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಅತ್ಯಂತ ಕಳಪೆ ಮಟ್ಟದ ಪ್ರದರ್ಶನ ನೀಡಿದ ಸಿನಿಮಾ ಎಂಬ ಸಾಲಿಗೆ ಸೇರಿದ್ದು, ಇಂದಿಗೂ ಚಿತ್ರತಂಡಕ್ಕೆ ಮರೆಯಲಾಗದ ಸಂಗತಿ ಎಂದೇ ಹೇಳಬಹುದು.
ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾ ಆದ ಕಾರಣ, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತದೆ ಎಂದು ಆರಂಭದಲ್ಲಿ ನಿರೀಕ್ಷಿಸಿದ್ದ ಚಿತ್ರತಂಡ ನಂತರದಲ್ಲಿ ಸಿನಿಮಾ ಅತ್ಯಂತ ಹೀನಾಯ ಸೋಲನ್ನು ಕಂಡಿದ್ದಕ್ಕೆ ಅತೀವ ಬೇಸರ ಹೊರಹಾಕಿತ್ತು. ರಿಲೀಸ್ ಆದ ಮೊದಲ ದಿನ ದೇಶವ್ಯಾಪಿ 293 ಟಿಕೆಟ್‌ಗಳು ಮಾತ್ರ ಮಾರಾಟವಾಗಿದ್ದು, ಚಿತ್ರ ನೇರವಾಗಿ ಫ್ಲಾಪ್ ಸಾಲಿಗೆ ಸೇರಿಕೊಂಡಿತು. ಪ್ರಾರಂಭದಲ್ಲಿ ತಮ್ಮ ಡಿಜಿಟಲ್ ಹಕ್ಕುಗಳನ್ನು ನೆಟ್ಫ್ಲಿಕ್ಸ್ಗೆ ಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಚಿತ್ರತಂಡ ಸಿನಿಮಾ ರಿಲೀಸ್ಗಾಗಿ ಕಾದಿತ್ತು. ಆದರೆ, ಫಿಲಂ ಅತ್ಯಂತ ಕಳಪೆ ಪ್ರದರ್ಶನ ತೋರಿದ ಬೆನ್ನಲ್ಲೇ ನೆಟ್ಫ್ಲಿಕ್ಸ್ ಖರೀದಿಸಲು ನಿರಾಕರಿಸಿತು. ಇವರೊಂದಿಗೆ ಇತರೆ ಒಟಿಟಿ ಪ್ಲಾಟ್ಫಾರ್ಮ್ಗಳು ಕೂಡ 'ದಿ ಲೇಡಿ ಕಿಲ್ಲರ್' ಚಿತ್ರವನ್ನು ಖರೀದಿಸಲು ಹಿಂದೇಟು ಹಾಕತೊಡಗಿತು.
ಅಂತಿಮವಾಗಿ ತಮ್ಮ ಸಿನಿಮಾದ ಡಿಜಿಟಲ್ ಹಕ್ಕನ್ನು ಖರೀದಿ ಮಾಡಲು ಯಾವ ಫ್ಲಾಟ್ಫಾರ್ಮ್ಗಳು ಮುಂದೆ ಬಾರದ ಹಿನ್ನಲೆ ಚಿತ್ರತಂಡ ನೇರವಾಗಿ ಯೂಟ್ಯೂಬ್ನಲ್ಲಿ ಪ್ರಸಾರ ಮಾಡಿತು. ಈ ಚಿತ್ರವನ್ನು ಉಚಿತವಾಗಿ ಯೂಟ್ಯೂಬ್ ಪ್ಲಾಟ್ಫಾರ್ಮ್ನಲ್ಲಿ ವೀಕ್ಷಿಸಿದ ಅನೇಕರು ಚಿತ್ರ ಚೆನ್ನಾಗಿದೆ, ಒಮ್ಮೆಯಾದರೂ ನೋಡಬಹುದು ಎಂದು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿದ್ದಾರೆ,(ಏಜೆನ್ಸೀಸ್).