ಮತ್ತೆ ನೆರೆ ಬಂದ್ರೆ ದೇವರೇ ಗತಿ!

flood-2
Published on

ಕಳೆದ ವರ್ಷ ರಾಜ್ಯದಲ್ಲಿ ಮುಂಗಾರು ಅಬ್ಬರಿಸಿ ಸಾಕಷ್ಟು ಜಿಲ್ಲೆಗಳು ನೆರೆಗೆ ತತ್ತರಿಸಿದ್ದವು. ಸಾವಿರಾರು ಕುಟುಂಬಗಳು ಮನೆ ಕಳೆದುಕೊಂಡಿದ್ದವು. ಸಾವಿರಾರು ಹೆಕ್ಟೇರ್ ಬೆಳೆ ನಾಶಗೊಂಡು ರೈತರು ಕಂಗಾಲಾಗಿದ್ದರು. ಸರ್ಕಾರದ ಆಸ್ತಿ-ಪಾಸ್ತಿಯೂ ಹಾನಿಗೊಂಡಿದ್ದವು. ಸಂತ್ರಸ್ತರ ನೆರವಿಗೆ ಸರ್ಕಾರ ಸಾಕಷ್ಟು ಪರಿಹಾರ ಘೋಷಿಸಿತ್ತು. ಆದರೆ, ಸಂತ್ರಸ್ತರ ಪಾಲಿಗೆ ಪರಿಹಾರ ಸಂಪೂರ್ಣವಾಗಿ ಸಿಕ್ಕಿಲ್ಲ. ಈಗ ಮತ್ತೆ ಮುಂಗಾರು ಬರುತ್ತಿದೆ. ಕಳೆದ ಬಾರಿ ಆದ ಹಾನಿಯ ದುರಸ್ತಿಯೇ ಮುಗಿದಿಲ್ಲ. ಮತ್ತೆ ನೆರೆ ವಕ್ಕರಿಸಿದರೆ ಏನು ಮಾಡಬೇಕೆಂಬ ಮುನ್ನೆಚ್ಚರಿಕೆ ಕ್ರಮಗಳು ಸಮರ್ಪಕವಾಗಿ ನಡೆದಿಲ್ಲ. ಒಂದೆಡೆ, ಕರೊನಾ ಆತಂಕ. ಇನ್ನೊಂದೆಡೆ, ಮಳೆ ಆರ್ಭಟ. ಈ ಎಲ್ಲದರ ಕುರಿತು ‘ವಿಜಯವಾಣಿ’ ನಡೆಸಿದ ‘ರಿಯಾಲಿಟಿ ಚೆಕ್’ನ ಸಂಪೂರ್ಣ ವರದಿ ಇಲ್ಲಿದೆ.

ಹಾಸನ

ಜಿಲ್ಲೆಯ ಬೇಲೂರು, ಅರಕಲಗೂಡು, ಸಕಲೇಶ ಪುರದಲ್ಲಿ ಹಾನಿ ಸಂಭವಿಸಿ ವರ್ಷ ಕಳೆದರೂ ಇದುವರೆಗೂ ಪರಿಹಾರ ಕಾರ್ಯ ಕೈಗೊಂಡಿಲ್ಲ.

ಸಕಲೇಶಪುರ ತಾಲೂಕಿನ ಹಿಜ್ಜನಹಳ್ಳಿ ಗ್ರಾಮದಲ್ಲಿ ಬಿರುಕು ಉಂಟಾಗಿ 60 ಮನೆಗಳು ಕುಸಿಯುವ ಆತಂಕ ಎದುರಾಗಿತ್ತು. ಗ್ರಾಮದಿಂದ ಸೋಮವಾರಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಭಾರಿ ಪ್ರಮಾಣದಲ್ಲಿ ಕುಸಿದು ಅಪಾರ ನಷ್ಟ ಉಂಟಾಗಿತ್ತು. ಮಳೆ ನಿಂತ ಬಳಿಕ ಗ್ರಾಮ ಸಂರ್ಪಸಲು ನೂತನ ರಸ್ತೆ ಮಾಡಲಾಗಿದೆ.

ಹಿಜ್ಜನಹಳ್ಳಿ ಗ್ರಾಮವನ್ನು ಸಂಪೂರ್ಣ ಸ್ಥಳಾಂತರಿಸುವುದಾಗಿ ನೀಡಿದ್ದ ಭರವಸೆ ಇಲ್ಲಿವರೆಗೆ ಈಡೇರಿಲ್ಲ. ಮತ್ತೆ ನಿರಂತರ ಮಳೆಯಾದರೆ ಗ್ರಾಮಸ್ಥರ ಪರಿಸ್ಥಿತಿ ಬಿಗಡಾಯಿಸುವುದು ಖಚಿತ.

ಕಾವೇರಿ ನದಿ ಉಕ್ಕಿ ಅರಕಲಗೂಡು ತಾಲೂಕು ರಾಮನಾಥಪುರದಲ್ಲಿ 150ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದವು. ಜನ ನಿರಾಶ್ರಿತರ ಕೇಂದ್ರಗಳಲ್ಲಿ ವಾಸ್ತವ್ಯ ಮಾಡಿದ್ದರು. ನದಿ ಪಕ್ಕದ ನಿವಾಸಿಗಳಿಗೆ ಬೇರೆ ಕಡೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದ ಸರ್ಕಾರ ಮರೆತು ಬಿಟ್ಟಿದೆ.

ಬೇಲೂರು ತಾಲೂಕು ಅರೇಹಳ್ಳಿ, ಜಂಡೆಹಳ್ಳಿ ವ್ಯಾಪ್ತಿ ವಿಪರೀತ ಮಳೆಯಾಗಿ ರಸ್ತೆ, ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿತ್ತು. ತಾತ್ಕಾಲಿಕವಾಗಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. 18 ಮನೆ ಕುಸಿದಿದ್ದು ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ.

ಶಿವಮೊಗ್ಗ

ಸಾಗರ ತಾಲೂಕಿನಲ್ಲಿ 5,960 ಎಕರೆ ಪ್ರದೇಶ ಮುಳುಗಡೆ ಆಗಿದ್ದು, 2 ಸಾವಿರ ರೈತ ಕುಟುಂಬಗಳ 2,600 ಎಕರೆಗೂ ಹೆಚ್ಚು ಬೆಳೆ ನಷ್ಟವಾಗಿದೆ. ಆನ್​ಲೈನ್​ನಲ್ಲಿ ವಿವರ ಸಲ್ಲಿಸಿದ್ದರೂ ಪರಿಹಾರ ಸಿಕ್ಕಿಲ್ಲ.

ಸಾಗರ ತಾಲೂಕಿನ ನೆರೆಹಾವಳಿಯಿಂದ ಭಾಗಶಃ ಬಿದ್ದಿರುವ 85 ಮನೆಗಳಿಗೆ 45 ಲಕ್ಷ ರೂ. ಪರಿಹಾರ ನೀಡಲಾಗಿದ್ದು, ಸಂಪೂರ್ಣ ಬಿದ್ದ ಮನೆಗಳನ್ನು ರಾಜೀವ್ ಗಾಂಧಿ ವಸತಿ ಯೋಜನೆಯಡಿ ಕಟ್ಟಿಕೊಡಲಾಗಿದೆ.

ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿ ಬಟಾಣಿಜೆಡ್ಡು ಗ್ರಾಮದ ಕುಣುಬಿ ಜನಾಂಗಕ್ಕೆ ಸೇರಿದ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರವಾಗಿ ಸರ್ಕಾರದಿಂದ 10 ಸಾವಿರ ರೂ. ಬಿಟ್ಟರೆ ಈತನಕ ಯಾವುದೇ ಮನೆ, ಇನ್ನಿತರ ಯಾವುದೇ ಸೌಕರ್ಯ ಸಿಕ್ಕಿಲ್ಲ.

ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿಯ ರೈತರು ಸರ್ವಸ್ವವನ್ನೂ ಕಳೆದುಕೊಂಡಿದ್ದು, ಖುದ್ದು ಸಿಎಂ ಯಡಿಯೂರಪ್ಪ ಅವರೇ ಬಂದು ವೀಕ್ಷಿಸಿದ್ದರೂ ಈ ಸಂತ್ರಸ್ತರಿಗೆ ಇದುವರೆಗೆ ತಲಾ 35 ಸಾವಿರ ರೂ. ಮಾತ್ರ ಬಂದಿದೆ.

ತೀರ್ಥಹಳ್ಳಿ ತಾಲೂಕಿನಲ್ಲಿ ಹಾನಿಯಾಗಿರುವ ಮನೆಗಳ ಸಂಖ್ಯೆ 214. ಇದರಲ್ಲಿ ‘ಎ’ ಮತ್ತು ‘ಬಿ’ ಗ್ರೇಡ್ ಮನೆಗಳಿಗೆ ಮಂಜೂರಾಗಿರುವ ತಲಾ 5 ಲಕ್ಷ ರೂ. ಪೈಕಿ ತಲಾ 1 ಲಕ್ಷ ರೂ. ಮಾತ್ರ ಬಂದಿದೆ. 2 ಸಾವಿರಕ್ಕೂ ಹೆಚ್ಚು ಸಸಿಮಡಿಗಳು ಕೊಚ್ಚಿ ಹೋಗಿದ್ದು ತಾಂತ್ರಿಕ ಕಾರಣಗಳಿಂದ ಕೆಲವರಿಗೆ ಈವರೆಗೂ ಪರಿಹಾರ ದೊರಕಿಲ್ಲ.

ಕೊಡಗು

ಜಿಲ್ಲೆಯಲ್ಲಿ 2018ರ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಎಲ್ಲ ಸಂತ್ರಸ್ತರಿಗೆ ಇನ್ನೂ ಮನೆ ಸಿಕ್ಕಿಲ್ಲ. 2019ನೇ ಸಾಲಿನ ಯಾವೊಬ್ಬ ಸಂತ್ರಸ್ತರಿಗೂ ಸರ್ಕಾರದ ನೆರವಿನಿಂದ ಮನೆ ನಿರ್ವಿುಸಲು ಸಾಧ್ಯವಾಗಿಲ್ಲ. ಭಾಗಶಃ ಮನೆ ಹಾನಿಗೆ 25 ಸಾವಿರ ರೂ. ಪರಿಹಾರ ನೀಡಲಾಗಿದೆ.

ಸಂಪೂರ್ಣ ಮನೆ ಕಳೆದುಕೊಂಡ ನಿವೇಶನರಹಿತರಿಗೆ ನಿವೇಶನ ನೀಡಲು ಜಾಗ ಗುರುತಿಸಲಾಗಿದೆ. ಅಭ್ಯತ್​ವುಂಗಲದಲ್ಲಿ ಒತ್ತುವರಿ ಜಾಗ ತೆರವುಗೊಳಿಸಿದ್ದು, ನಿವೇಶನ ಆಗಿ ಪರಿವರ್ತಿಸಿಲ್ಲ. ಬಿ.ಶೆಟ್ಟಿಗೇರಿ ದೂರ ಎಂಬ ಕಾರಣಕ್ಕೆ ಸಂತ್ರಸ್ತರು ಅಲ್ಲಿಗೆ ತೆರಳಲು ನಿರಾಕರಿಸಿದ್ದಾರೆ.

ಜಾಗ ಇರುವವರಿಗೆ ಮನೆ ನಿರ್ವಿುಸಲು ಮೊದಲ ಕಂತಿನ ಹಣ ಬಿಡುಗಡೆ ಆಗಿದೆ. ನಂತರ ಹಣ ಬಿಡುಗಡೆ ಮಾಡಿಲ್ಲ. ಕೆಲವರಿಗೆ 5 ತಿಂಗಳ ಮಾಸಿಕ ಬಾಡಿಗೆ ಸಂದಾಯ ಮಾಡಲಾಗಿದ್ದು, ಇನ್ನೂ 5 ತಿಂಗಳ ಬಾಡಿಗೆ ಬಾಕಿ ಇದೆ.

ಸರ್ಕಾರ ಮನೆ ನಿರ್ವಣಕ್ಕೆ ನಿವೇಶನ ಹಂಚಿಕೆ ಮತ್ತು ಹಣ ಬಿಡುಗಡೆ ಮಾಡದ್ದರಿಂದ ಸಂತ್ರಸ್ತರು ಮನೆ ಕಳೆದುಕೊಂಡ ಸ್ಥಳದಲ್ಲೇ ಶೆಡ್ ನಿರ್ವಿುಸಿಕೊಂಡಿದ್ದಾರೆ.

ಚಿತ್ರದುರ್ಗ

ಜಿಲ್ಲೆಯಲ್ಲಿ 769 ಮನೆಗಳಿಗೆ ಹಾನಿಯಾಗಿದ್ದು, ದುರಸ್ತಿಗೆ -ಠಿ;3.32 ಕೋಟಿ ಬಿಡುಗಡೆ ಮಾಡಿದೆ.

ಹೊಸದುರ್ಗ ತಾಲೂಕು ಕೆಲ್ಲೋಡು ಸೇತುವೆ ಕೊಚ್ಚಿ ಹೋಗಿ, ನೀಲಗುಂದ ಕೆರೆ, ಮಾಡದ ಕೆರೆಗೆ ಹಾನಿ ಆಗಿತ್ತು. ಹೊಸದುರ್ಗ ಗ್ರಾಮೀಣ ರಸ್ತೆ-ಚರಂಡಿಗಳ ನಿರ್ವಣಕ್ಕೆ 18 ಕೋಟಿ ರೂ. ಬಿಡುಗಡೆ ಆಗಿದೆ.

ದೊಡ್ಡಘಟ್ಟದಿಂದ ದೇವಪುರದವರೆಗಿನ 15 ಕಿಮೀ ಉದ್ದದ ಹಿರೇಹಳ್ಳವನ್ನು ವಿಸ್ತರಿಸಲಾಗಿದೆ. -ಠಿ;1 ಕೋಟಿ ವೆಚ್ಚದಲ್ಲಿ 15 ಕಿಮೀ ಹಳ್ಳ ಅಭಿವೃದ್ಧಿಪಡಿಸಲಾಗಿದೆ.

ಹೊಳಲ್ಕೆರೆ ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇಗುಲ ಬೆಟ್ಟ ಕುಸಿದಿದ್ದು, ದುರಸ್ತಿ ಕೈಗೆತ್ತಿಕೊಳ್ಳಲಾಗಿದೆ.

ಹೊಳಲ್ಕೆರೆ ತಾಲೂಕು ಸಿದ್ದರಾಮನ ಬಡಾವಣೆ, ಹೊಸದುರ್ಗದ ಆಲದಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದಾಗಿ ಅನೇಕ ಕುಟುಂಬಗಳನ್ನು ಕೆಲಕಾಲ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿತ್ತು.

ಧಾರವಾಡ

ಜಿಲ್ಲೆಯಲ್ಲಿ 21,089 ಮನೆಗಳು ಹಾನಿಗೀಡಾಗಿವೆ.

5 ಲಕ್ಷ ರೂ. ಪರಿಹಾರಕ್ಕೆ ಅರ್ಹವಾದ ಎ ಕೆಟಗರಿಯ 118 ಮನೆ ಅಧಿಕೃತಗೊಳಿಸಲಾಗಿದೆ.

ಬಿ ಕೆಟಗರಿಯಲ್ಲಿ 1986 ಮನೆ ಹಾಗೂ ಸಿ ಕೆಟಗೇರಿ 19,170 ಮನೆಗಳನ್ನು ಗುರುತಿಸಲಾಗಿದೆ.

ಬಿ ವರ್ಗದವರು ಅರ್ಧ ಬಿದ್ದ ಮನೆಗಳನ್ನು ಸಂಪೂರ್ಣ ತೆರವುಗೊಳಿಸಿ ಪುನರ್ ನಿರ್ವಿುಸಿಕೊಂಡರೆ ಮಾತ್ರ -ಠಿ;5 ಲಕ್ಷ, ಹಾನಿಯಾದ ಮನೆ ದುರಸ್ತಿ ಮಾಡಿಕೊಂಡರೆ 3 ಲಕ್ಷ ರೂ. ಪರಿಹಾರ ಘೊಷಿಸಲಾಗಿತ್ತು. ಇದರಿಂದಾಗಿ ಫಲಾನುಭವಿ ಖಾತೆಗೆ ಪರಿಹಾರದ ಹಣ ಜಮೆ ವಿಳಂಬವಾಗಿ, ಮನೆಗಳ ನಿರ್ವಣವೂ ಮಂದಗತಿಯಲ್ಲಿ ಸಾಗಿದೆ.

ಉತ್ತರ ಕನ್ನಡ

ಜಿಲ್ಲೆಯಲ್ಲಿ 3128 ಮನೆಗಳಿಗೆ ಹಾನಿಯಾಗಿದ್ದು, ಇದುವರೆಗೂ 78 ಮನೆಗಳ ನಿರ್ಮಾಣ ಮಾತ್ರ ಪೂರ್ಣಗೊಂಡಿದೆ. 50 ಕುಟುಂಬಗಳು ಶೆಡ್​ನಲ್ಲಿ, 65 ಕುಟುಂಬಗಳು ಬಾಡಿಗೆ ಮನೆಯಲ್ಲಿವೆ.

2 ಸಾವಿರಕ್ಕೂ ಹೆಚ್ಚು ಜನರು ಮನೆ ತಳಪಾಯ ನಿರ್ಮಾಣ ಮಾಡಿದರೂ ಕರೊನಾ ಹಾಗೂ ಅಧಿಕಾರಿಗಳ ವಿಳಂಬ ಧೋರಣೆಗೆ 2ನೇ ಹಂತ ಅನುದಾನ ಬಿಡುಗಡೆಯಾಗಿಲ್ಲ.

ನೆರೆಯಿಂದ ಹಾನಿಯಾದ ಅಂಕೋಲಾ ತಾಲೂಕಿನ ರಾಮನಗುಳಿ, ಡೋಂಗ್ರಿ ತೂಗು ಸೇತುವೆಗಳ ನಿರ್ಮಾಣ ಕಾರ್ಯ ಆರಂಭವಾಗಿಲ್ಲ.

ನೆರೆ ಪರಿಹಾರಕ್ಕಾಗಿ ಬಂದ ಹಣ ಖರ್ಚಾಗದೆ ಸರ್ಕಾರಕ್ಕೆ ವಾಪಸಾಗಿದೆ.

ರಾಯಚೂರು

ಜಿಲ್ಲೆಯ 36 ಗ್ರಾಮಗಳ 6 ಸಾವಿರ ಜನರನ್ನು ಸ್ಥಳಾಂತರಿಸಲಾಗಿತ್ತು.

ಗ್ರಾಮಗಳ ಸ್ಥಳಾಂತರಕ್ಕೆ ಆಸರೆ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡಲಾಗಿದ್ದರೂ ಹಲವು ಗ್ರಾಮಗಳ ಜನರು ಸ್ಥಳಾಂತರ ಸ್ಥಳಕ್ಕೆ ತೆರಳದೆ ಗ್ರಾಮದಲ್ಲೇ ವಾಸವಾಗಿದ್ದಾರೆ.

ರಾಯಚೂರು ತಾಲೂಕಿನ ಕುರ್ವಕಲಾ, ಕುರ್ವಕಲಾ, ಅಗ್ರಹಾರ ನಡುಗಡ್ಡೆಗಳ ಜನರ ಸ್ಥಳಾಂತರಕ್ಕೆ ಮನೆಗಳನ್ನು ನಿರ್ವಿುಸಲಾಗಿದ್ದರೂ ಜನರು ನಡುಗಡ್ಡೆ ಬಿಟ್ಟು ಬರುತ್ತಿಲ್ಲ.

ಪ್ರವಾಹಪೀಡಿತ 52 ಗ್ರಾಮಗಳ ಸ್ಥಳಾಂತರಕ್ಕಾಗಿ ಜಿಲ್ಲೆಯಲ್ಲಿ ಆಸರೆ ಯೋಜನೆಯಡಿ 11 ಸಾವಿರ ಮನೆಗಳನ್ನು ನಿರ್ವಿುಸಲಾಗಿದೆ.

ಲಿಂಗಸುಗೂರು ತಾಲೂಕಿನಲ್ಲಿ ಕೃಷ್ಣಾನದಿ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ಶೀಲಹಳ್ಳಿ ಸೇತುವೆ ನಿರ್ವಿುಸಿದ್ದು ಬಿಟ್ಟರೆ ಹೊಸದಾಗಿ ಗ್ರಾಮಗಳ ಸ್ಥಳಾಂತರಕ್ಕೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net