

ಕಳೆದ ವರ್ಷ ರಾಜ್ಯದಲ್ಲಿ ಮುಂಗಾರು ಅಬ್ಬರಿಸಿ ಸಾಕಷ್ಟು ಜಿಲ್ಲೆಗಳು ನೆರೆಗೆ ತತ್ತರಿಸಿದ್ದವು. ಸಾವಿರಾರು ಕುಟುಂಬಗಳು ಮನೆ ಕಳೆದುಕೊಂಡಿದ್ದವು. ಸಾವಿರಾರು ಹೆಕ್ಟೇರ್ ಬೆಳೆ ನಾಶಗೊಂಡು ರೈತರು ಕಂಗಾಲಾಗಿದ್ದರು. ಸರ್ಕಾರದ ಆಸ್ತಿ-ಪಾಸ್ತಿಯೂ ಹಾನಿಗೊಂಡಿದ್ದವು. ಸಂತ್ರಸ್ತರ ನೆರವಿಗೆ ಸರ್ಕಾರ ಸಾಕಷ್ಟು ಪರಿಹಾರ ಘೋಷಿಸಿತ್ತು. ಆದರೆ, ಸಂತ್ರಸ್ತರ ಪಾಲಿಗೆ ಪರಿಹಾರ ಸಂಪೂರ್ಣವಾಗಿ ಸಿಕ್ಕಿಲ್ಲ. ಈಗ ಮತ್ತೆ ಮುಂಗಾರು ಬರುತ್ತಿದೆ. ಕಳೆದ ಬಾರಿ ಆದ ಹಾನಿಯ ದುರಸ್ತಿಯೇ ಮುಗಿದಿಲ್ಲ. ಮತ್ತೆ ನೆರೆ ವಕ್ಕರಿಸಿದರೆ ಏನು ಮಾಡಬೇಕೆಂಬ ಮುನ್ನೆಚ್ಚರಿಕೆ ಕ್ರಮಗಳು ಸಮರ್ಪಕವಾಗಿ ನಡೆದಿಲ್ಲ. ಒಂದೆಡೆ, ಕರೊನಾ ಆತಂಕ. ಇನ್ನೊಂದೆಡೆ, ಮಳೆ ಆರ್ಭಟ. ಈ ಎಲ್ಲದರ ಕುರಿತು ‘ವಿಜಯವಾಣಿ’ ನಡೆಸಿದ ‘ರಿಯಾಲಿಟಿ ಚೆಕ್’ನ ಸಂಪೂರ್ಣ ವರದಿ ಇಲ್ಲಿದೆ.
ಬಳ್ಳಾರಿ
ಜಿಲ್ಲೆಯಲ್ಲಿ 2019ರ ಆಗಸ್ಟ್ನಲ್ಲಿ ಪ್ರವಾಹದಿಂದಾಗಿ 952 ಮನೆಗಳು ಭಾಗಶಃ ಹಾಗೂ 91 ಮನೆಗಳು ತೀವ್ರ ಪ್ರಮಾಣದಲ್ಲಿ ಕುಸಿದಿದ್ದವು.
ಹೂವಿನ ಹಡಗಲಿ ತಾಲೂಕಿನಲ್ಲಿ 630, ಹರಪನಹಳ್ಳಿ-387, ಹಗರಿಬೊಮ್ಮನಹಳ್ಳಿ-15, ಸಂಡೂರು-5, ಹೊಸಪೇಟೆ-4, ಕಂಪ್ಲಿ, ಕೂಡ್ಲಿಗಿ ತಾಲೂಕಿನಲ್ಲಿ ತಲಾ ಒಂದು ಮನೆ ಜಖಂಗೊಂಡಿದ್ದವು.
ಸರ್ಕಾರದಿಂದ 1,043 ಮನೆಗಳ ಮಾಲೀಕರಿಗೆ ತಲಾ 25 ಸಾವಿರ ರೂ. ಪರಿಹಾರ ನೀಡಲಾಗಿದೆ.
ತೀವ್ರವಾಗಿ ಕುಸಿದಿರುವ ಮನೆಗಳ ಮಾಲೀಕರು ಸರ್ಕಾರದಿಂದ ಘೊಷಿತ ಪರಿಹಾರ ಸಿಗದ್ದರಿಂದ ಸಾಲ ಮಾಡಿ ಮನೆ ಕಟ್ಟಿಕೊಳ್ಳುತ್ತಿದ್ದಾರೆ.
ಹಡಗಲಿ ತಾಲೂಕಿನ ಅಂಗೂರ, ಕೋಟ್ಯಾಳ, ಬ್ಯಾಲಹುಣ್ಸೆ ಗ್ರಾಮಗಳ ಸ್ಥಳಾಂತರ ಕಾರ್ಯ ನಡೆದಿಲ್ಲ. ಜಮೀನು ಗುರುತಿಸಲಷ್ಟೇ ಪ್ರಕ್ರಿಯೆ ಸೀಮಿತವಾಗಿದೆ.
ಜಿಲ್ಲೆಯಲ್ಲಿ 3,507 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು. ಎಲ್ಲ ರೈತರಿಗೂ ಪೂರ್ಣಪ್ರಮಾಣದಲ್ಲಿ ಪರಿಹಾರ ತಲುಪಿಲ್ಲ.
ಬಾಗಲಕೋಟೆ
ಜಿಲ್ಲೆಯಲ್ಲಿ 195 ಗ್ರಾಮಗಳು ಜಲಾವೃತವಾಗಿದ್ದವು. ಏಳು ಮಂದಿ, 301 ಜಾನá-ವಾರá-ಗಳ ಸಾವು ಸಂಭವಿಸಿತ್ತು.
ಸುಮಾರು 7531 ಮನೆಗಳು ಹಾನಿಯಾಗಿದ್ದಲ್ಲದೆ, ಅಂದಾಜು 40 ಸಾವಿರ ರೈತರ ಒಟ್ಟು 71,750 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿತ್ತು. ಶಾಲೆ, ಕಾಲೇಜು, ದೇವಸ್ಥಾನಗಳು ನೆಲಸಮವಾಗಿದ್ದವು.
ಗ್ರಾಮೀಣ ಭಾಗದಲ್ಲಿ 701 ಕಿಮೀ ರಸ್ತೆ, 19 ಸೇತá-ವೆಗಳಲ್ಲದೆ ನಗರ ಪ್ರದೇಶದಲ್ಲೂ ಕೆಲ ರಸ್ತೆ, ಸೇತá-ವೆಗಳು ಹಾನಿಗೀಡಾಗಿದ್ದವು. 154 ಶಾಲೆಗಳ ಕಟ್ಟಡ ಸಂಪೂರ್ಣ ನಾಶವಾಗಿದ್ದವು. ರಸ್ತೆ, ಸೇತá-ವೆಗಳ ಕಾಮಗಾರಿ ಕೆಲವೆಡೆ ಇಂದಿಗೂ ಪೂರ್ಣಗೊಂಡಿಲ್ಲ.
ಹಾನಿಯಾದ ಮನೆಗಳಿಗೆ ಸರ್ಕಾರ 3 ಲಕ್ಷ ರೂ. ಪರಿಹಾರ ಘೊಷಿಸಿದ್ದರೂ ಈವರೆಗೆ ಎರಡನೇ ಕಂತಿನ ಪರಿಹಾರ ಬಂದಿಲ್ಲ. ಮನೆಗಳ ಸಮೀಕ್ಷೆಯಲ್ಲಿ ಲೋಪದೋಷದ ಆರೋಪ ಕೇಳಿಬಂದಿದೆ.
ಮತ್ತೆ ಪ್ರವಾಹ ಬಂದಲ್ಲಿ ಜನರ ರಕ್ಷಣೆಗೆ ಜಿಲ್ಲಾಡಳಿತ ಬೋಟ್, ಜನರ ಪುನರ್ವಸತಿಗೆ ಪರಿಹಾರ ಕೇಂದ್ರಗಳ ಸ್ಥಾಪನೆ ಕುರಿತು ಮುನ್ನೆಚ್ಚರಿಕೆ ವಹಿಸಿಲ್ಲ. ಗ್ರಾಮಗಳ
ಸ್ಥಳಾಂತರಕ್ಕೂ ಯೋಜನೆ ರೂಪಿಸಿಲ್ಲ.
ಜಿಲ್ಲೆಯ 40 ಸಾವಿರ ಕೃಷಿಕರಿಗೆ ಅಂದಾಜು 80 ಕೋಟಿ ರೂ.ವರೆಗೆ ಪರಿಹಾರ ಬಂದಿದೆ. ಆದರೆ ನಷ್ಟವಾದ ಶೇ.25 ಪರಿಹಾರ ಕೂಡ ದೊರಕಿಲ್ಲ ಎಂಬುದು ಅನ್ನದಾತರ ಅಳಲು.
ಮಂಡ್ಯ
ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ತಾಲೂಕುಗಳ ಕೆಲವೆಡೆ ನೆರೆಯಿಂದ ಬೆಳೆ ಹಾಳಾಗಿತ್ತು.
ನಷ್ಟ ಅನುಭವಿಸಿದವರ ಪೈಕಿ ಬಹುತೇಕರಿಗೆ ಪರಿಹಾರ ನೀಡಲಾಗಿದೆ. ಇನ್ನು ನೆರೆ ಹಾವಳಿಯಿಂದ ಗ್ರಾಮಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ.
ಇದನ್ನೂ ಓದಿ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಟೈರ್ಗಳು
ವಿಜಯಪುರ
ಜಿಲ್ಲೆಯಲ್ಲಿ 9 ಕಿಮೀ ರಾಜ್ಯ ಹೆದ್ದಾರಿ, 271.3 ಕಿಮೀ ಗ್ರಾಮೀಣ ರಸ್ತೆಗಳು ಹದಗೆಟ್ಟಿವೆ. 23 ಸೇತುವೆಗಳಿಗೆ ಹಾನಿಯಾಗಿದ್ದು, 44 ಶಾಲೆ ಕಟ್ಟಡ, 23 ಸರ್ಕಾರಿ ಕಟ್ಟಡ, 57 ಮನೆಗಳು ನಾಶವಾಗಿದ್ದವು. ಹಾನಿಗೊಳಗಾಗಿ ವರ್ಷ ಕಳೆದರೂ ದುರಸ್ತಿ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಭಾಗಶಃ ಮನೆ ಹಾನಿಯಾದವರಿಗೆ 25 ಸಾವಿರ ರೂ.ನಂತೆ ಪರಿಹಾರ ವಿತರಿಸಲಾಗಿದೆ.
ಕಬ್ಬು ಸೇರಿ ಇನ್ನಿತರ ಒಟ್ಟು 23,283 ಹೆಕ್ಟೇರ್ ಬೆಳೆ ನಾಶವಾಗಿದೆ. ಸಂತ್ರಸ್ತರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಸಿಕ್ಕಿಲ್ಲ.
ಚಾಮರಾಜನಗರ
ಜಿಲ್ಲೆಯಲ್ಲಿ 118 ಮನೆಗಳು ಹಾನಿಗೊಳಗಾಗಿದ್ದವು. ನೂರಾರು ಹೆಕ್ಟೇರ್ ಪ್ರದೇಶದ ಕಬ್ಬು, ರಾಗಿ, ಭತ್ತ, ಈರುಳ್ಳಿ, ತೆಂಗು, ಜೋಳದ ಬೆಳೆಗಳು ನಾಶಗೊಂಡಿದ್ದವು.
ಹರಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 32 ಮನೆಗಳು ಸಂಪೂರ್ಣ ಕುಸಿದಿದ್ದು, ಮರುನಿರ್ವಣಕ್ಕೆ ಸರ್ಕಾರ 2 ಕಂತಿನಲ್ಲಿ 2 ಲಕ್ಷ ರೂ. ಬಿಡುಗಡೆ ಮಾಡಿದ್ದು, ಉಳಿಕೆ 3 ಲಕ್ಷ ರೂ. ನೀಡದ್ದರಿಂದ ನಿರ್ಮಾಣ ಕಾರ್ಯಗಳು ಅರ್ಧಕ್ಕೆ ನಿಂತಿವೆ.
ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದ್ದ 73 ಮನೆಗಳನ್ನು ರಿಪೇರಿ ಮಾಡಿಸಿಕೊಳ್ಳಲು ಸರ್ಕಾರ ತಲಾ 25 ಸಾವಿರ ರೂ. ನೀಡಿದ್ದು, ಅವರೆಲ್ಲರೂ ಮನೆ ದುರಸ್ತಿಗೊಳಿಸಿಕೊಂಡಿದ್ದಾರೆ. ಅಲ್ಲದೆ, ಕೊಳ್ಳೇಗಾಲ ಪಟ್ಟಣ-ದಾಸನಪುರ ಗ್ರಾಮದ ಸಂಪರ್ಕ ರಸ್ತೆ ಇನ್ನೂ ದುರಸ್ತಿಗೊಂಡಿಲ್ಲ.
ದಕ್ಷಿಣ ಜಿಲ್ಲೆಯಲ್ಲಿ ಅತ್ಯಧಿಕ ಹಾನಿಯಾಗಿದ್ದು ಬೆಳ್ತಂಗಡಿ ತಾಲೂಕಿನ ಚಾರ್ವಡಿ, ದಿಡುಪೆ ಭಾಗದಲ್ಲಿ. 17 ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿ, ಸೇತುವೆಗಳ ಸಹಿತ ಅಪಾರ ಹಾನಿ ಆಗಿತ್ತು. ಕೃಷಿ ಚಟುವಟಿಕೆ ಪುನರಾರಂಭಗೊಂಡಿದ್ದು, ಸೇತುವೆಗಳ ದುರಸ್ತಿ ನಡೆದಿದೆ.
289 ಮನೆಗಳಿಗೆ ಹಾನಿಯಾಗಿದ್ದು, 5.45 ಕೋಟಿ ರೂ. ಪರಿಹಾರವೂ ಬಿಡುಗಡೆಯಾಗಿದೆ. ಇದುವರೆಗೆ 18 ಮನೆಗಳ ಕಾಮಗಾರಿಯಷ್ಟೇ ಪೂರ್ಣಗೊಂಡಿದೆ. 195 ಮನೆಗಳು ತಳಪಾಯ ಹಂತದಲ್ಲಿದ್ದರೆ, 130 ಮನೆಗಳ ಗೋಡೆ, 27 ಮನೆಗಳ ಛಾವಣಿ ಪೂರ್ಣಗೊಂಡಿದೆ.
ನದಿಗಳಲ್ಲಿ ಭಾರಿ ಪ್ರಮಾಣದಲ್ಲಿ ಬಂಡೆ ಕಲ್ಲು, ಮಣ್ಣು, ಬೃಹತ್ ಮರಗಳು ಕೊಚ್ಚಿಕೊಂಡು ಬಂದಿದ್ದು, ಇನ್ನೂ ತೆರವು ಪೂರ್ಣಗೊಂಡಿಲ್ಲ. ತೆರವು ಮಾಡದಿದ್ದರೆ ಈ ಬಾರಿಯೂ ಹೆಚ್ಚು ನೀರು ಬಂದಾಗ ಜನವಸತಿ ಪ್ರದೇಶಗಳಿಗೆ ನುಗ್ಗಬಹುದು.
ಚಾರ್ವಡಿ ಘಾಟ್ ಪ್ರದೇಶದಲ್ಲಿ ಮಂಗಳೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಭೂಕುಸಿತ ಉಂಟಾಗಿದ್ದರಿಂದ ಪ್ರಸಕ್ತ ಘನವಾಹನ ಸಂಚಾರವಿಲ್ಲ. ತಾತ್ಕಾಲಿಕ ಕಾಮಗಾರಿಯಷ್ಟೇ ನಡೆದಿರುವುದರಿಂದ ಮಳೆಗಾಲದಲ್ಲಿ ಹೆದ್ದಾರಿ ಬಂದ್ ಆಗುವ ಸಾಧ್ಯತೆಯೇ ಹೆಚ್ಚು.