ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಟೈರ್​ಗಳು

web 2
Published on

ಚಿಕ್ಕಮಗಳೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಐಜಿ ರಸ್ತೆಯ ಎನ್​ಎಂಸಿ ವೃತ್ತದಲ್ಲಿರುವ ಮಲ್ನಾಡ್ ಟೈರ್ಸ್ ಅಂಗಡಿಗೆ ಬೆಂಕಿ ತಗುಲಿ ಟೈರ್​ಗಳು ಹಾಗೂ ಕಟ್ಟಡ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಸೋಮವಾರ ಬೆಳಗ್ಗೆ 4 ಗಂಟೆ ವೇಳೆಗೆ ಟೈರ್ ಅಂಗಡಿಯಲ್ಲಿ ಹೊಗೆಯಾಡುತ್ತಿರುವುದನ್ನು ಗಮನಿಸಿದ ಪಕ್ಕದ ಎಟಿಎಂ ಸೆಕ್ಯೂರಿಟಿ ಗಾರ್ಡ್ ಅಂಗಡಿ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಅಂಗಡಿ ಮಾಲೀಕ ಶಾಜಿ ಪೊಲೀಸ್​ಗೆ ವಿಷಯ ತಿಳಿಸಿ ಅಂಗಡಿಗೆ ಬಂದಿದ್ದಾರೆ. ಪೊಲೀಸ್ ಕಂಟ್ರೋಲ್ ರೂಂ ನಿಂದ ಮಾಹಿತಿ ಪಡೆದು ತಕ್ಷಣ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬೆಂಕಿ ರೌದ್ರಾವತಾರ ಕಂಡ ಅಗ್ನಿಶಾಮಕ ದಳದ ಜಿಲ್ಲಾಧಿಕಾರಿ ಶಶಿಧರ್ ಮುನ್ನೆಚ್ಚರಿಕೆವಹಿಸಿ ಶಿವಮೊಗ್ಗದ ಪ್ರಭಾರ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಅಶೋಕ್​ಕುಮಾರ್​ಗೆ ಮಾಹಿತಿ ನೀಡಿದ್ದಾರೆ.

ಚಿಕ್ಕಮಗಳೂರಿನ 3 ವಾಹನ ಸೇರಿ ಶಿವಮೊಗ್ಗ, ಬೇಲೂರು, ಕಡೂರು, ಮೂಡಿಗೆರೆಯ ಒಟ್ಟು ಏಳು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಿ ಬೆಂಕಿ ನಂದಿಸಲು ಪ್ರಯತ್ನ ನಡೆಸಿದರು. ಟೈರ್​ಗಳು ವ್ಯಾಪಕವಾಗಿ ಉರಿಯುತ್ತಿದ್ದರಿಂದ ಬೆಂಕಿ ಜ್ವಾಲೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿತ್ತು. ವಿಷಯ ತಿಳಿದು ನೂರಾರು ಜನ ಸ್ಥಳಕ್ಕೆ ಅಗಮಿಸಿದರು. ಪ್ರಭಾರ ನಗರ ವೃತ್ತ ನಿರೀಕ್ಷಕ ಸತ್ಯನಾರಾಯಣ, ನಗರ ಠಾಣಾಧಿಕಾರಿ ತೇಜಸ್ವಿ ಜನರನ್ನು ನಿಯಂತ್ರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net