ಭಾರಿ ಮಳೆಯಿಂದಾಗಿ ಕೃಷ್ಣಾ ನದಿಪಾತ್ರದಲ್ಲಿ ಮತ್ತೆ ಪ್ರವಾಹ ಭೀತಿ

nation-2
Published on

ರಾಯಚೂರು/ಆಲಮಟ್ಟಿ: ಮಹಾರಾಷ್ಟ್ರ ಹಾಗೂ ಕೃಷ್ಣಾ ಮೇಲ್ದಂಡೆ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯಕ್ಕೆ ಹರಿದು ಬರುತ್ತಿದ್ದು, 45 ಸಾವಿರ ಕ್ಯೂಸೆಕ್ ನೀರನ್ನು ಬಸವಸಾಗರ ಜಲಾಶಯಕ್ಕೆ ಬಿಡಲಾಗುತ್ತಿದೆ. ಇದರಿಂದಾಗಿ ನಾರಾಯಣಪುರ (ಬಸವ ಸಾಗರ) ಜಲಾಶಯ ಬಹುತೇಕ ಭರ್ತಿಯಾಗಿದ್ದು, 30 ಟಿಎಂಸಿ ನೀರು ಸಂಗ್ರಹವಾಗಿದೆ.

ಭಾನುವಾರ ಮಧ್ಯಾಹ್ನ ಬಸವ ಸಾಗರದಿಂದ 22 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ. 45 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಹೆಚ್ಚುವರಿ ನೀರನ್ನು ನದಿಗೆ ಹರಿಸಿದಲ್ಲಿ ಪ್ರವಾಹ ಸಾಧ್ಯತೆ ದಟ್ಟವಾಗಿದೆ. ಇದರಿಂದ ಹಲವು ನಡುಗಡ್ಡೆಗಳ ಸಂಪರ್ಕ ಕಡಿತಗೊಳ್ಳಲಿವೆ. ಮ್ಯಾದರಗಡ್ಡಿ, ಕರಕಲಗಡ್ಡಿ ಮತ್ತು ವೆಂಕಮ್ಮನಗಡ್ಡಿಗಳಲ್ಲಿ ಹತ್ತಾರು ರೈತ ಕುಟುಂಬಗಳು ಕೃಷಿ ಮಾಡುತ್ತಿವೆ. ಅಗತ್ಯ ವಸ್ತುಗಳನ್ನು ಖರೀದಿಸಬೇಕೆಂದರೆ ಈಜುತ್ತಾ ಅಥವಾ ತೆಪ್ಪ ಬಳಸಬೇಕು. ಪ್ರವಾಹ ಹೆಚ್ಚಾದರೆ ಇದೂ ಕಷ್ಟಸಾಧ್ಯ. ಈ ಸಮಸ್ಯೆ ಪ್ರತಿವರ್ಷ ಪುನರಾವರ್ತನೆ ಆಗುತ್ತಲೇ ಇದ್ದರೂ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಆರೋಪ ಇದೆ.

ಆಲಮಟ್ಟಿಯಲ್ಲಿ 91.928 ಟಿಎಂಸಿ ನೀರು: 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಆಲಮಟ್ಟಿ ಜಲಾಶಯದಲ್ಲಿ 91.928 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಕರಾವಳಿಯಲ್ಲಿ ಬಿಸಿಲು: ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾನುವಾರ ಬಿಸಿಲಿನ ವಾತಾವರಣವಿತ್ತು. ಬಿಟ್ಟು ಬಿಟ್ಟು ಒಂದೆರಡು ಕಡೆ ಸಾಮಾನ್ಯ ಮಳೆ ಸುರಿದಿದೆ. ಇನ್ನೆರಡು ದಿನ ಹೆಚ್ಚಿನ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net