

ಹಾವೇರಿ: ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣಕ್ಕೆಂದು ನಿರ್ಮಿಸಿದ್ದ ಕಟ್ಟೆಯನ್ನು ಕಿಡಿಗೇಡಿಗಳು ಒಡೆದು ಹಾಕಿದ ಪ್ರಸಂಗವೊಂದು ನಡೆದಿದೆ. ಹಾವೇರಿ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಹಾವೇರಿ ತಾಲೂಕಿನ ಬಸಾಪುರ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಅಮೃತ ಸರೋವರ ಕೆರೆ ದಡದಲ್ಲಿ ನಿರ್ಮಿಸಿದ ಧ್ವಜ ಕಟ್ಟೆಯನ್ನು ಒಡೆದು ಹಾಕಲಾಗಿದೆ. ಆ. 15ರಂದು ಧ್ವಜಾರೋಹಣಕ್ಕಾಗಿ ಈ ಧ್ವಜ ಕಟ್ಟೆಯನ್ನು ನಿರ್ಮಿಸಲಾಗಿತ್ತು.
ಆದರೆ ಧ್ವಜಾರೋಹಣದ ಹಿಂದಿನ ದಿನವೇ ಈ ಕಟ್ಟೆಯನ್ನು ಒಡೆದು ಹಾಕಲಾಗಿದೆ. ಸುಂದರವಾಗಿ ನಿರ್ಮಿಸಿದ್ದ ಫ್ಲ್ಯಾಗ್ ಕಟ್ಟೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ತಹಸೀಲ್ದಾರ್, ಎಸ್ಪಿ, ಡಿಸಿಗೆ ಮನವಿ ಮಾಡಿದ್ದಾರೆ. ಧ್ವಜ ಕಟ್ಟೆ ಕಟ್ಟುವ ಕುರಿತು ಪಂಚಾಯತ್ ಮಟ್ಟದಲ್ಲಿ ನಿರ್ಧಾರ ಮಾಡುತ್ತಾರೆ ಎಂದು ಡಿಸಿ ರಘುನಂದನ ಮೂರ್ತಿ ತಿಳಿಸಿದ್ದಾರೆ.