ಜಾತಿ ನಿಂದನೆ ಪ್ರಕರಣ; ನಟ ಉಪೇಂದ್ರಗೆ ರಿಲೀಫ್​ ನೀಡಿದ ಹೈಕೋರ್ಟ್​

Upendra HC
Published on

ಬೆಂಗಳೂರು: ನಟ, ನಿರ್ದೇಶಕ ಉಪೇಂದ್ರ ವಿರುದ್ಧದ ಜಾತಿ ನಿಂದನೆ(Attrocity) ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ FIRಗೆ ರಾಜ್ಯ ಹೈ ಕೋರ್ಟ್​ ಮಧ್ಯಂತರ ತಡೆ ನೀಡಿದೆ. ತಮ್ಮ ವಿರುದ್ಧ ದಾಖಲಾಗಿರುವ FIR ರದ್ದುಪಡಿಸುವಂತೆ ಕೋರಿ ನಟ ಉಪೇಂದ್ರ ಹೈಕೋರ್ಟ್​ ಮೆಟ್ಟಿಲೇರಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್​ ಚಂದನ್​ಗೌಡರ್​ ಅವರಿದ್ದ ಏಕಸದಸ್ಯ ಪೀಠವು ನಟ ಉಪೇಂದ್ರ ವಿರುದ್ಧ ದಾಖಲಾಗಿದ್ದ FIRಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ.

ನಟ ಉಪೇಂದ್ರ ಪರ ವಾದ ಮಂಡಿಸಿದ ವಕೀಲ ಉದಯ್​ ಹೊಳ್ಳ ತಮ್ಮ ಕಕ್ಷಿದಾರರು ತಾವು ಆಡಿರುವ ಮಾತುಗಳಿಗೆ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಆ ವಿಡಿಯೋವನ್ನು ಸಹ ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕಿದ್ದಾರೆ. ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶದಿಂದ ಆಡಿದ ಮಾತು ಅದಾಗಿರಲಿಲ್ಲ.

ಈ ಪ್ರಕರಣದಲ್ಲಿ ಎಸ್ಸಿ-ಎಸ್ಟಿ‌ ಕಾಯ್ದೆ ಅನ್ವಯಿಸದ ಕಾರಣ ಎಫ್ಐಆರ್ ದಾಖಲಿಸಿ ತನಿಖೆ ಮಾಡುತ್ತಿರುವುದು ಸರಿಯಲ್ಲ. ಕೇವಲ ಗಾದೆ ಮಾತನ್ನು ಉಲ್ಲೇಖ ಮಾಡಿದ್ದಾರೆ. ಬೇರೆ ಯಾವುದೋ ವಿಚಾರವನ್ನು ಹೇಳಬೇಕಾದರೆ ಗಾದೆ ಮಾತನ್ನು ಬಳಸಿದ್ದಾರೆ. ಈ ಪ್ರಕರಣದಲ್ಲಿ ದುರುದ್ದೇಶ ಕಾಣುತ್ತಿದ್ದು, ಪೊಲೀಸ್​ ಅಧಿಕಾರಿಗಳು ಮನೆ ಮಹಜರ್​ ಹೆಸರಿನಲ್ಲಿ ತಮ್ಮ ಕಕ್ಷಿದಾರರಿಗೆ ಕಿರುಕುಳ ನೀಡುತ್ತಿದ್ದಾರೆ.

ಹೀಗಾಗಿ ಪ್ರಕರಣಕ್ಕೆ ತಡೆ ನೀಡಬೇಕೆಂದು ಕೋರಿ ನಟ ಉಪೇಂದ್ರ ಪರ ವಕೀಲ ಉದಯ್​ ಹೊಳ್ಳ ವಾದ ಮಂಡಿಸಿದ್ದಾರೆ. ನಟ ಉಪೇಂದ್ರ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳು ಪ್ರಕರಣ ಸಂಬಂಧ ದಾಖಲಾಗಿರುವ FIRಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net