ಶಾಲೆಗಳ ದುರವಸ್ಥೆ ಸರಿಪಡಿಸಿಕೊಳ್ಳಿ

kdp meeting
ಹೊಸನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದರು. ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ತಹಸೀಲ್ದಾರ್ ರಶ್ಮಿ ಹಾಲೇಶ್, ಇಒ ನರೇಂದ್ರಕುಮಾರ್ ಇದ್ದರು.
Published on

ಹೊಸನಗರ: ತಾಲೂಕಿನಲ್ಲಿರುವ ಶಾಲೆಗಳ ಸ್ಥಿತಿ ಸುಧಾರಣೆಯಾಗಬೇಕು. ಶಾಲೆಗಳ ದುರಸ್ತಿ ಕಾರ್ಯ ತಕ್ಷಣ ನಡೆಯಬೇಕು. ತಾಲೂಕಿನ ಶಾಲೆಗಳ ಮಾಹಿತಿಯನ್ನು ಕಾಲ ಕಾಲಕ್ಕೆ ನನಗೆ ನೀಡಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಹರಿದ್ರಾವತಿ. ಕಚ್ಚಿಗೆಬೈಲು ಶಾಲೆ ಕಟ್ಟಡ ದುಸ್ಥಿತಿಯಲ್ಲಿವೆ. ನಾನೇ ಖುದ್ದು ಬೇಟಿ ಮಾಡಿದ್ದೇನೆ. ಇಲ್ಲಿಯವರೆಗೆ ಯಾವ ಮಾಹಿತಿಯೂ ನಮಗೆ ಬರುತ್ತಿಲ್ಲ. ಅಲ್ಲಿನ ಬಿಆರ್‌ಸಿ, ಸಿಆರ್‌ಪಿಗಳು ಏನು ಮಾಡುತ್ತಿದ್ದಾರೆ? ಅಂತಹ ಬೇಜವಾಬ್ದಾರಿ ಅಧಿಕಾರಿಗಳನ್ನು ತೆಗೆದುಹಾಕಿ ನಿಷ್ಠಾವಂತರನ್ನು ನೇಮಿಸಿಕೊಳ್ಳಿ ಎಂದರು.
ಮಳೆಗಾಲದಲ್ಲಿ ಮಕ್ಕಳು ಓಡಾಡಲೂ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಕಾಲುಸಂಕ ಬೇಕಿದ್ದರೆ ಅವಶ್ಯವಾಗಿ ಮಾಡಿಸೋಣ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ ಎಚ್.ಆರ್.ಕೃಷ್ಣಮೂರ್ತಿ, ತಾಲೂಕಿನಲ್ಲಿ 122 ಶಿಕ್ಷಕರ ಕೊರತೆಯಿದೆ. ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. ಆದರೂ 22 ಶಿಕ್ಷಕರ ಕೊರತೆ ಇದೆ. ದುಸ್ಥಿತಿಯಲ್ಲಿರುವ ಶಾಲೆಗಳ ದುರಸ್ತಿ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು. ಹಳ್ಳಿಗಾಡಿನ ಪ್ರದೇಶವಾದ ತಾಲೂಕಿನಲ್ಲಿ ವಿದ್ಯುತ್ ಇಲ್ಲವಾದರೆ ಕಷ್ಟವಾಗುತ್ತದೆ. ಕೆಲಸ ಮಾಡದ ಲೈನ್‌ಮನ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಜೆಜೆಎಂ ಕುಡಿಯುವ ನೀರು ಯೋಜನೆಗೆ ಅರಣ್ಯ ಕಾನೂನು ಅಟ್ಟಿಯಾಗುತ್ತಿವೆ. ಕೆಲವೆಡೆ ಅರಣ್ಯ ಇಲಾಖೆ ಅಧಿಕಾರಿಗಳು ಬೇಕೆಂದೇ ತೊಂದರೆ ನೀಡುತ್ತಿದ್ದಾರೆ. ಇದು ಹೀಗೆ ಮುಂದುವರಿಯಬಾರದು. ಕುಡಿಯುವ ನೀರಿಗೆ ಯಾರು ತೊಂದರೆ ನೀಡಬಾರದು. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಎಲೆ ಚುಕ್ಕೆ ರೋಗ ಬಾಧೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರಿಗೆ ಅಗತ್ಯ ಔಷಧ ಸರಬರಾಜು ಮಾಡಬೇಕು. ಮಳೆಗಾಲದಲ್ಲಿ ಅಧಿಕಾರಿಗಳು ರೈತ ಸ್ನೇಹಿಯಾಗಿ ನಡೆದುಕೊಳ್ಳಬೇಕು. ಸದಾ ಉಪಯುಕ್ತ ಸೂಚನೆ ನೀಡಬೇಕು ಎಂದರು.
ಬೀದಿ ಬದಿ ಅಂಗಡಿಗೆ ಬದಲಿ ಜಾಗ: ಪಟ್ಟಣದ ಬೀದಿಬದಿ ಅಂಗಡಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕಾಗಿದೆ. ಸದ್ಯದಲ್ಲೇ ಅವರಿಗೆ ಬದಲಿ ಜಾಗ ನೀಡಲಾಗುವುದು. ನಾನೇ ಈ ವಿಚಾರದಲ್ಲಿ ಖುದ್ದು ಆಸಕ್ತಿ ವಹಿಸಿ ಬೀದಿಬದಿ ಅಂಗಡಿ ಮಾಲೀಕರ ಹಿತಕಾಯಲಾಗುವುದು ಎಂದು ಗೋಪಾಲಕೃಷ್ಣ ಬೇಳೂರು ಭರವಸೆ ನೀಡಿದರು.
ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ತಹಸೀಲ್ದಾರ್ ರಶ್ಮಿ ಹಾಲೇಶ್, ಇಒ ನರೇಂದ್ರಕುಮಾರ್, ಮಂಜು ಸಣ್ಣಕ್ಕಿ, ಎನ್.ಇ.ಸ್ವಾಮಿ ನೇರಲೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net