

ಶೃಂಗೇರಿ: ಗಿಣಿಗಿಣಿ, ಹೆಮ್ಮನೆ, ಸರ್ಕಾರಿ ಆಸ್ಪತ್ರೆ ಸಮೀಪ ವಿದ್ಯುತ್ ತಂತಿಗಳು ಜೋತುಬಿದ್ದಿವೆ. ಕಂಬಗಳು ವಾಲಿವೆ. ಹೆಮ್ಮನೆಯಲ್ಲಿ ಧರೆಯ ಸಮೀಪ ವಿದ್ಯುತ್ ಕಂಬವಿದೆ. ಧರೆಕುಸಿದರೆ ಅಪಾಯವಾಗುವ ಸಾಧ್ಯತೆ ಇದೆ. ಕೂಡಲೇ ಕಂಬಗಳನ್ನು ಸರಿಪಡಿಸಿ, ತಂತಿಗಳನ್ನು ಮೇಲೆತ್ತಬೇಕು ಎಂದು ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ ಒತ್ತಾಯಿಸಿದರು.
ಪಟ್ಟಣದ ಮೆಸ್ಕಾಂ ಕಚೇರಿ ಆವರಣದಲ್ಲಿ ಶುಕ್ರವಾರ ಮೆಸ್ಕಾಂ ಉಪವಿಭಾಗದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ಪದೇಪದೆ ವಿದ್ಯುತ್ ಕಡಿತವಾಗುತ್ತದೆ. ಜಂಗಲ್ ಕಟಿಂಗ್‌ಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಸದಸ್ಯ ಮಂಜುನಾಥ್ ಮಾತನಾಡಿ, ಗೃಹಜ್ಯೋತಿ ಯೋಜನೆ ಸೌಲಭ್ಯ ಗ್ರಾಹಕರಿಗೆ ನೀಡಲಾಗುತ್ತಿದೆ. ಉಚಿತ ಯೋಜನೆಯನ್ನು ಬೀದಿದೀಪಕ್ಕೂ ವಿಸ್ತರಿಸಬೇಕು. ಏಕೆಂದರೆ ವಿದ್ಯುತ್ ಬಿಲ್ ಪಾವತಿ, ನಿರ್ವಹಣೆಗೆ ಗ್ರಾಪಂನಲ್ಲಿ ಅನುದಾನ ಇಲ್ಲ ಅಳಲು ತೋಡಿಕೊಂಡರು.
ಕೃಷಿಕ ದೇವೇಂದ್ರ ಕಾವಡಿ ಮಾತನಾಡಿ, ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳು ಅಹವಾಲು ಸ್ವೀಕರಿಸುತ್ತಾರೆ. ಆದರೆ ಸಮಸ್ಯೆಗಳಿಗೆ ಪರಿಹಾರ ದೊರಕಲು ಸಿಬ್ಬಂದಿ ಕೂಡಲೇ ಸ್ಪಂದಿಸಬೇಕಿದೆ. ಜಮೀನಿನ ಮಧ್ಯೆ ವಿದ್ಯುತ್ ತಂತಿ ಹಾದು ಹೋಗಿರುತ್ತದೆ. ತೆರವಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಕಿಗ್ಗಾ ಗ್ರಾಪಂ ಅಧ್ಯಕ್ಷ ಮಹೇಶ್ ಹೆಗ್ತೂರು ಮಾತನಾಡಿ, ತಾಲೂಕಿನ ಬಂಕನಕೂಡಿಗೆಯಲ್ಲಿ ರಸ್ತೆಗೆ ಹೊಂದಿಕೊಂಡಂತೆ ವಿದ್ಯುತ್ ಕಂಬವಿದ್ದು ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಮನವಿ ಮಾಡಿದರು.
ಮೆಸ್ಕಾಂ ಕೊಪ್ಪ ಕಾರ್ಯಪಾಲಕ ಅಭಿಯಂತ ಸಿದ್ದೇಶ್ ಮಾತನಾಡಿ, ಇಲಾಖೆ ವ್ಯಾಪ್ತಿಗೆ ಬರುವ ಕೆಲಸವನ್ನು ನಾವು ಉಚಿತವಾಗಿ ನಿರ್ವಹಿಸುತ್ತೇವೆ. ಆದರೆ ಗ್ರಾಹಕರು ತಮ್ಮ ಅನುಕೂಲಕ್ಕಾಗಿ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಬದಲಿಸಬೇಕಾದ್ದಲ್ಲಿ ಇಲಾಖೆಗೆ ಹಣ ಪಾವತಿಸಬೇಕು ಎಂದು ತಿಳಿಸಿದರು.
ರೈತ ಸಂಘದ ಮಾಜಿ ಅಧ್ಯಕ್ಷ ಕೆಲವಳ್ಳಿ ಗುಂಡಪ್ಪ ಮಾತನಾಡಿ. ಜನಸಂಪರ್ಕ ಸಭೆ ನಡೆಸುವಾಗ ಮೆಸ್ಕಾಂ ಗುತ್ತಿಗೆದಾರರು ಕಡ್ಡಾಯವಾಗಿ ಹಾಜರಿರಬೇಕು ಎಂದರು.
ಉಳ್ಳುವಳ್ಳಿ ಸಮೀಪ ವೋಲ್ಟೇಜ್ ಸಮಸ್ಯೆಯಿಂದ ಮನೆಯ ನೀರು ಎತ್ತುವ ಯಂತ್ರ ಹಾಗೂ ವಿದ್ಯುತ್ ಉಪಕರಣಗಳು ಪದೇಪದೆ ಹಾನಿಗೀಡಾಗುತ್ತಿವೆ. ಉಳ್ಳುವಳ್ಳಿ ಗ್ರಾಮಕ್ಕೆ ಹೊಸ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಿಕೊಡಿ ಎಂದು ನಾಗೇಶ್ ಕೋರಣಕೂಡಿಗೆ ಮನವಿ ಮಾಡಿದರು.
ಅಡ್ಡಗದ್ದೆ ಗ್ರಾಪಂ ಉಪಾಧ್ಯಕ್ಷೆ ವಿನೋದಾ ಆಚಾರ್ ಮಾತನಾಡಿ, ಚಿತ್ರೋಳ್ಳಿ, ಬಾಚಿನಕೊಪ್ಪ, ದಂಡಿನಘಟ್ಟ ಇತ್ಯಾದಿ ಕಡೆ ವೋಲ್ಟೇಜ್ ಸಮಸ್ಯೆ ನಿರಂತರವಾಗಿದೆ. ಹೊಸ ಸ್ಥಾವರ ಅಳವಡಿಸಿ ಕೊಡಿ ಎಂದು ಮನವಿ ಮಾಡಿದರು.
ಶೃಂಗೇರಿ ಮೆಸ್ಕಾಂ ಎಇಇ ದೀಪಕ್ ಮಾತನಾಡಿ, ತಾಲೂಕು ಭೌಗೋಳಿಕವಾಗಿ ಅತಿ ದೊಡ್ಡದಾಗಿದ್ದರೂ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರಂತರವಾಗಿ ಗ್ರಾಹಕರ ಸಮಸ್ಯೆಗಳಿಗೆ ಒತ್ತು ನೀಡಿ ಪರಿಹಾರ ನೀಡುತ್ತಿದ್ದೇವೆ. ಮಳೆಗಾಲದಲ್ಲೂ ವಿದ್ಯುತ್ ಸಂಪರ್ಕದ ಕೊರತೆ ನೀಗಿಸುವಲ್ಲಿ ಇಲಾಖೆ ಶ್ರಮಿಸುತ್ತಿದೆ. ಯಾವುದೇ ಸಮಸ್ಯೆ ಇರಲಿ ಕಚೇರಿಯನ್ನು ಸಂಪರ್ಕಿಸಿದ್ದರೆ ಪರಿಹಾರ ನೀಡುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.
ರೈತ ಸಂಘದ ಅಧ್ಯಕ್ಷ ಕಾನುವಳ್ಳಿ ಚಂದ್ರಶೇಖರ್, ಪದಾಧಿಕಾರಿಗಳಾದ ಜಿ.ಅನಂತಯ್ಯ, ಪೂರ್ಣೇಶ್ ಗೌಡ, ಗ್ರಾಪಂ ಉಪಾಧ್ಯಕ್ಷೆ ವಿನೋದಾ ಆಚಾರ್, ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರಾದ ರಾಮಚಂದ್ರ, ಹೊನ್ನೂರಪ್ಪ, ಧನಂಜಯ ಉಪಸ್ಥಿತರಿದ್ದರು.