

ಭದ್ರಾವತಿ(ಶಿವಮೊಗ್ಗ): ಸೂರ್ಯೋದಯಕ್ಕೂ ಒಂದು ಗಂಟೆ ಮುನ್ನ ಪೂರ್ವ ದಿಕ್ಕಿನತ್ತ ದಿಟ್ಟಿಸಿ ನೋಡಿದರೆ ಖಗೋಳ ಕೌತುಕವೊಂದು ನಿಮಗೆ ಗೋಚರವಾಗಲಿದೆ. ಬರಿಗಣ್ಣಿಗೆ 5 ಗ್ರಹಗಳು ಸರಳ ರೇಖೆಯಲ್ಲಿ ಗೋಚರಿಸಲಿದ್ದು, ಈ ವಿಸ್ಮಯವನ್ನು ಈಗ ಕಣ್ತುಂಬಿಕೊಳ್ಳಲು ಸಾಧ್ಯವಾಗದಿದ್ದರೆ ಮತ್ತೆ 18 ವರ್ಷ ಕಾಯಬೇಕು!
ಹೌದು. ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಪರೇಡ್ ನಡೆಸುವ ರೀತಿ ಗೋಚರಿಸಲಿದ್ದು, ಈ ಗ್ರಹಗಳ ಪರೇಡ್ ವೀಕ್ಷಣೆಗೆ ಒಂದು ಖಚಿತ ಸೂತ್ರವೂ ಇದೆ. ಯಾವುದೋ ದಿಕ್ಕಿನಲ್ಲಿ ಇದನ್ನು ನೋಡಲು ಸಾಧ್ಯವಿಲ್ಲ. ನಸುಕಿನ 4 ಗಂಟೆಯಿಂದ ಪೂರ್ವದ ದಿಗಂತದೆಡೆಗೆ ಕಣ್ಣು ಹಾಯಿಸಿದರೆ ಈ ವಿಸ್ಮಯದ ದರ್ಶನವಾಗಲಿದೆ. ಟೆಲಿಸ್ಕೋಪ್ ನೆರವು ಇಲ್ಲದೆಯೂ ಐದೂ ಗ್ರಹಗಳು ಬರಿಗಣ್ಣಿಗೆ ಕಾಣುತ್ತವೆ. ಈಗಾಗಲೆ ಒಂದು ವಾದರಿಂದ ಈ ವಿಸ್ಮಯ ಕಾಣಸಿಗುತ್ತಿದ್ದು, ಇನ್ನೊಂದು ವಾರ ಹೀಗೆಯೇ ಮುಂದುವರಿಯಲಿದೆ.
ಪೂರ್ವದಿಂದ ಪಶ್ಚಿಮದೆಡೆಗೆ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳನ್ನು ವೀಕ್ಷಣೆ ಮಾಡಬಹುದು. ಚಂದ್ರ ಕೂಡ ಬುಧ ಮತ್ತು ಮಂಗಳ ಗ್ರಹಗಳ ನಡುಗೆ ಇರುವುದು ಕಾಣಸಿಗಲಿದೆ. ಶನಿ ಗ್ರಹದಲ್ಲಿ ಹಲವು ರಿಂಗ್ಗಳು, ಗುರು ಗ್ರಹದಲ್ಲಿ ನಾಲ್ಕು ಉಪಗ್ರಹಗಳು, ಮಂಗಳ ಗ್ರಹದಲ್ಲಿ ಬಣ್ಣ ಬಣ್ಣಗಳು, ಶುಕ್ರಗ್ರಹದಲ್ಲಿ ಕಾಣುವ ಬ್ರೖೆಟ್ನೆಸ್ ಮನಸ್ಸಿಗೆ ಮುದ ನೀಡಲಿವೆ. ಬುಧ ಗ್ರಹ ಸೂರ್ಯನಿಗೆ ಸಮೀಪ ಇರುವುದರಿಂದ ಬರಿಗಣ್ಣಿಗೆ ಗೋಚರಿಸುವುದು ಅಪರೂಪ. ಸಾಮಾನ್ಯ ಟೆಲಿಸ್ಕೋಪ್ನಲ್ಲೂ ಕಾಣಸಿಗುವುದಿಲ್ಲ. ವಿಶೇಷ ಟೆಲಿಸ್ಕೋಪ್ನಲ್ಲಿ ಬುಧನ ದರ್ಶನ ಸಾಧ್ಯ.
ಇದೊಂದು ರೀತಿ ಗ್ರಹಗಳ ಪರೇಡ್. ಆಕಾಶ ವೀಕ್ಷಕರಿಗೆ ಸಂಭ್ರಮದ ಕ್ಷಣವೇ ಸರಿ. ಈ ದೃಶ್ಯಗಳನ್ನು ಸೂರ್ಯೋ ದಯಕ್ಕೆ 45ರಿಂದ 60 ನಿಮಿಷ ಮೊದಲು ನೋಡಬಹುದು. | ಹರೋಹಳ್ಳಿ ಸ್ವಾಮಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ, ಹವ್ಯಾಸಿ ಖಗೋಳ ವೀಕ್ಷಕ, ಭದ್ರಾವತಿ
ಐದು ಅಪರೂಪ: ಎರಡು, ಮೂರು ಗ್ರಹಗಳು ಒಂದೇ ರೇಖೆಯಲ್ಲಿ (ಪರೇಡ್ ರೀತಿ) ಇರುವಂತೆ ಆಗಾಗ ಕಾಣಿಸುತ್ತವೆ. ಐದು ಗ್ರಹಗಳ ಪರೇಡ್ ದೃಶ್ಯ ಅಪರೂಪ. ನೋಡಲು ಒಂದೇ ಸರಳ ರೇಖೆಯಲ್ಲಿ ಕಾಣಿಸುತ್ತವೆ. ಆದರೆ, ವಾಸ್ತವವಾಗಿ ಆ ರೀತಿ ಇರುವುದಿಲ್ಲ.
ಮತ್ತೆ 18 ವರ್ಷ ಬೇಕು: ಐದು ಗ್ರಹಗಳ ಪರೇಡ್ ಮಾಡುತ್ತಿರುವಂತೆ ಭಾಸವಾಗುವ ಈ ದೃಶ್ಯಗಳು 2004ರಲ್ಲಿ ಕಂಡುಬಂದಿದ್ದವು. 18 ವರ್ಷಗಳ ನಂತರ ಮತ್ತೆ ಆ ದೃಶ್ಯಗಳನ್ನು ನೋಡಲು ಸಾಧ್ಯವಾಗುತ್ತಿದ್ದು, 2040ರಲ್ಲಿ ಮತ್ತೆ ಕಾಣಲು ಸಾಧ್ಯವಾಗುತ್ತದೆ.