

ವಾಷಿಂಗ್ಟನ್/ನವದೆಹಲಿ: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸದಾಗಿ ರಚಿಸಿರುವ ಸರ್ಕಾರ ದಕ್ಷತಾ ಇಲಾಖೆಗೆ (ಡಿಒಜಿಇ) ನೇಮಿಸಿರುವ ಅವರ ಆಪ್ತರಾದ ಖ್ಯಾತ ಉದ್ಯಮಿಗಳಾದ ಎಲನ್ ಮಸ್ಕ್ ಮತ್ತು ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ, ಒಕ್ಕೂಟ ಸರ್ಕಾರದ ಉದ್ಯೋಗಿಗಳಿಗೆ ಐದು ದಿನಗಳ ಕೆಲಸದ ವಾರ ಮತ್ತು ಉದ್ಯೋಗ ಕಡಿತ ಮುಂತಾದ ವೆಚ್ಚ ತಗ್ಗಿಸುವ ಸಲಹೆಗಳನ್ನು ಮಂಡಿಸುವ ನಿರೀಕ್ಷೆಯಿದೆ. ರಾಜೀನಾಮೆಗೆ ನೌಕರರನ್ನು ಬಲವಂತಪಡಿಸಲಾಗುತ್ತದೆ ಎಂದಿದ್ದಾರೆ.
ಈ ತಿಂಗಳು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ದೊರೆತ ಜಯದ ಬೆನ್ನಲ್ಲೇ ಟ್ರಂಪ್ರಿಂದ ನೇಮಕಗೊಂಡ 53 ವರ್ಷದ ಮಸ್ಕ್ ಹಾಗೂ 39ರ ಹರೆಯದ ರಾಮಸ್ವಾಮಿ, ತಮಗೆ ಕೊಟ್ಟ ಕಾರ್ಯ ಪಡೆಯ ಹೊಣೆಗಾರಿಕೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಭೂತಪೂರ್ವ ಸರ್ಕಾರಿ ಸುಧಾರಣಾ ಸೂತ್ರವನ್ನು ಪ್ರಖ್ಯಾತ ವಾಲ್ ಸ್ಟ್ರೀಟ್ ಜರ್ನಲ್ನ ಪ್ರಮುಖ ಲೇಖನವೊಂದರಲ್ಲಿ ಅನಾವರಣಗೊಳಿಸಿದ್ದಾರೆ. ತಾವಿಬ್ಬರೂ ಸರ್ಕಾರದಿಂದ ಹೊರಗಿನ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಲಿದ್ದೇವೆ ಎಂದು ಬುಧವಾರ ಪ್ರಕಟವಾದ ಲೇಖನದಲ್ಲಿ ಅವರು ಹೇಳಿಕೊಂಡಿದ್ದಾರೆ.
ಪಿಚ್ಚೈ ಕರೆಯಲ್ಲಿ ಮಸ್ಕ್ ಭಾಗಿ: ಟ್ರಂಪ್ ಮತ್ತು ಮಸ್ಕ್ ಎಷ್ಟು ಗಳಸ್ಯ-ಕಂಠಸ್ಯ ಆತ್ಮೀಯರು ಎನ್ನುವುದಕ್ಕೆ ಗೂಗಲ್ ಸಿಇಒ ಮಾಡಿರುವ ಫೋನ್ ಕರೆಯೊಂದರ ವೇಳೆ ಇನ್ನೊಮ್ಮೆ ಸಾಬೀತಾಗಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದಕ್ಕಾಗಿ ಅಭಿನಂದಿಸಲು ಟ್ರಂಪ್ಗೆ ಸುಂದರ್ ಪಿಚ್ಚೈ ಕರೆ ಮಾಡಿ ದಾಗ ಮಸ್ಕ್ ಕೂಡ ಸಂಭಾಷಣೆಯಲ್ಲಿ ಭಾಗವಹಿಸಿದರು ಎಂದು ‘ದಿ ಇನ್ಫಮೇಶನ್’ ತಿಳಿಸಿದೆ. ಮಸ್ಕ್ ಸದಾ ಹೆಚ್ಚು ಕಮ್ಮಿ ಟ್ರಂಪ್ರ ಹತ್ತಿರದಲ್ಲೇ ಇರುತ್ತಾರೆ ಎನ್ನುವ ಮಾತಿಗೂ ಇದು ಸಾಕ್ಷಿಯಾಗಿದೆ.
3 ಪ್ರಮುಖ ಸುಧಾರಣೆ: ನಿಯಂತ್ರಿತ ವಜಾ, ಆಡಳಿತಾತ್ಮಕ ಕಡಿತಗಳು ಮತ್ತು ವೆಚ್ಚ ಉಳಿತಾಯ -ಈ ಮೂರು ವಿಧದ ಪ್ರಮುಖ ಸುಧಾರಣೆಗಳ ಅನುಷ್ಠಾನಕ್ಕೆ ತಾವು ಡಿಒಜಿಇಗೆ ಪ್ರತಿ ಹಂತದಲ್ಲಿ ಸಲಹೆ ನೀಡುವುದಾಗಿ ಮಸ್ಕ್-ರಾಮಸ್ವಾಮಿ ಜೋಡಿ ಹೇಳಿದೆ.
ಸಂಘರ್ಷ ಸಾಧ್ಯತೆ: ಫೆಡರಲ್ ಉದ್ಯೋಗಿಗಳಿಗೆ ಮನೆ ಯಿಂದಲೇ ಕೆಲಸ ಮಾಡುವ ನೀತಿಗಳನ್ನು ರದ್ದುಪಡಿಸಲು ತಾವು ಶ್ರಮಿಸುವುದಾಗಿ ಅವರು ಹೇಳಿರುವುದು ಹೊಸ ಸರ್ಕಾರ ಮತ್ತು ಸರ್ಕಾರಿ ನೌಕರರ ಸಂಘಗಳ ನಡುವೆ ಸಂಘರ್ಷ ಸೃಷ್ಟಿಸುವ ಸಂಭವವಿದೆ.