ಹೊಸ ವರ್ಷದಂದೇ ಜಪಾನ್​ಗೆ ಅಪ್ಪಳಿಸಿದ ಸುನಾಮಿ! ಜೀವ ಉಳಿಸಿಕೊಳ್ಳಲು ಎತ್ತರದ ಸ್ಥಳಕ್ಕೆ ಓಡುತ್ತಿರುವ ಜನರು

Japan Tsunami
Published on

ಟೋಕಿಯೋ: ಹೊಸ ವರ್ಷದ ಸಂಭ್ರಮದಲ್ಲಿದ್ದ ಜಪಾನ್​ ಜನತೆಗೆ ಸುನಾಮಿ ಆತಂಕ ಎದುರಾಗಿದೆ. ಇಂದು 7.5 ತೀವ್ರತೆಯಲ್ಲಿ ಪ್ರಬಲ ಭೂಕಂಪನವಾಗಿದೆ. ಅಲ್ಲದೆ, ಸರಣಿ ಕಂಪನಗಳಿಂದ ಸುನಾಮಿ ಉಲ್ಬಣಗೊಂಡಿದ್ದು, ಜಪಾನ್​ನ ಟೊಯಾಮಾ ನಗರಕ್ಕೆ ಮೊದಲ ಸುನಾಮಿ ಅಲೆ ಬಂದು ಅಪ್ಪಳಿಸಿವೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಜಪಾನ್​ನ ಇಶಿಕವಾ ಪ್ರಾಂತ್ಯದ ನೋಟೋ ವಲಯದಲ್ಲಿ ಸ್ಥಳೀಯ ಕಾಲಮಾನ ಸಂಜೆ 4.10ರ ಸುಮಾರಿಗೆ ಭೂಕಂಪನ ಸಂಭವಿಸಿದೆ. ಭೂಕಂಪನದ ತೀವ್ರತೆ ರಿಕ್ಟರ್​ ಮಾಪಕದಲ್ಲಿ 7.5 ರಷ್ಟು ದಾಖಲಾಗಿದೆ. US ಭೂವೈಜ್ಞಾನಿಕ ಸಮೀಕ್ಷೆ ಮತ್ತು ಇತರ ಏಜೆನ್ಸಿಗಳು ಕೂಡ ಇದನ್ನು ಖಚಿತಪಡಿಸಿವೆ. ಅಲ್ಲದೆ, ಸರಣಿ ಕಂಪನಗಳಿಂದ ಸುನಾಮಿ ಪ್ರಚೋದನೆಗೊಂಡಿದ್ದು, ಸ್ಥಳೀಯ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಜನರನ್ನು ಎತ್ತರದ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೆ, ಜನರಿಗೂ ಕೂಡ ಎಚ್ಚರಿಕೆ ಸಂದೇಶವನ್ನು ರವಾನಿಸಲಾಗಿದೆ.

ಜಪಾನ್ ಕರಾವಳಿಯಲ್ಲಿ ಭೂಕಂಪದ ಕೇಂದ್ರಬಿಂದುವಿನಿಂದ 300 ಕಿಲೋಮೀಟರ್ (190 ಮೈಲುಗಳು) ಒಳಗೆ ಅಪಾಯಕಾರಿ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಹವಾಯಿ ಮೂಲದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ. ಈಗಾಗಲೇ ಟೊಯೋಮಾ ನಗರಕ್ಕೆ ಮೊದಲ ಸುನಾಮಿ ಅಲೆಗಳು ಅಪ್ಪಳಿಸಿವೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಹ ಹರಿದಾಡುತ್ತಿವೆ. ಆದರೆ, ವಿಡಿಯೋಗಳ ಅಧಿಕೃತತೆ ಇನ್ನೂ ಖಚಿತವಾಗಿಲ್ಲ.

ಸದ್ಯಕ್ಕೆ ಸುನಾಮಿ ಅಲೆಗಳು ತೀವ್ರತೆ ಕಡಿಮೆ ಇದೆ. ಆದರೆ, ಯಾವುದೇ ಕ್ಷಣದಲ್ಲಿ ಇದು ತೀವ್ರ ಸ್ವರೂಪವನ್ನು ಪಡೆದುಕೊಳ್ಳಬಹುದು. ಇಶಿಕವಾ ಪ್ರಾಂತ್ಯದ ವಾಜಿಮಾ ಬಂದರಿಗೆ 1.2 ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿರುವುದು ಖಚಿತವಾಗಿದೆ. ಅಲ್ಲದೆ, ಅದೇ ಪ್ರದೇಶದಲ್ಲಿ ಐದು ಮೀಟರ್‌ಗಳಷ್ಟು ಎತ್ತರದ ಸುನಾಮಿ ಬರುವ ನಿರೀಕ್ಷೆಯಿದೆ ಎಂದು ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ತಿಳಿಸಿದೆ.

ಜಪಾನ್‌ನ ಪ್ರಮುಖ ದ್ವೀಪವಾದ ಹೊನ್‌ಶುವಿನ ಜಪಾನ್ ಸಮುದ್ರದ ಭಾಗದ ನೊಟೊ ವಕಯದಲ್ಲಿ ಸರಣಿ ಭೂಕಂಪಗಳು ಸಂಭವಿಸಿವೆ. ಸ್ಥಳೀಯ ಕಾಲಮಾನ ಸಂಜೆ 4.06ಕ್ಕೆ 5.7 ತೀವ್ರತೆಯ ಕಂಪನದೊಂದಿಗೆ ಭೂಕಂಪನ ಪ್ರಾರಂಭವಾಯಿತು. ನೊಟೊ ವಲಯವನ್ನು ಭೂಕಂಪನದ ಕೇಂದ್ರ ಬಿಂದು ಎಂದು ಗುರುತಿಸಲಾಗಿದೆ. ಸಂಜೆ 4.10ಕ್ಕೆ 7.6 ತೀವ್ರತೆಯಲ್ಲಿ ಮತ್ತೆ ಪ್ರಬಲ ಕಂಪನ ಸಂಭವಿಸಿತು. ಇದಾದ ಬಳಿಕ 4.18ರಲ್ಲಿ 6.1, 4.23ರಲ್ಲಿ 4.5, 4.29ರಲ್ಲಿ 4.6 ಮತ್ತು 4.32ರಲ್ಲಿ 4.8 ತೀವ್ರತೆಯಲ್ಲಿ ಸರಣಿ ಭೂಕಂಪನ ಸಂಭವಿಸಿದ್ದು, ಅಪಾಯಕಾರಿ ಸುನಾಮಿ ಉಲ್ಬಣಗೊಳ್ಳುವ ಸಾಧ್ಯತೆ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net