ಭಾರತಕ್ಕೆ ಮೊದಲ ಎಸ್-400 ಕ್ಷಿಪಣಿ ಹಸ್ತಾಂತರ; ಸೇನೆಯ ಬತ್ತಳಿಕೆಗೆ ಅತ್ಯಾಧುನಿಕ ಅಸ್ತ್ರ..

Army
Published on

ನವದೆಹಲಿ: ರಷ್ಯಾ ನಿರ್ವಿುತ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ‘ಟ್ರಯಂಫ್’ನ ಮೊದಲ ಘಟಕವನ್ನು ಭಾರತ ಸ್ವೀಕರಿಸಿದೆ. ಇದನ್ನು ಪಶ್ಚಿಮ ವಲಯದಲ್ಲಿ ಸ್ಥಾಪಿಸಲು ಸೇನೆ ಮುಂದಾಗಿದೆ. ಇದು ಭಾರತದ ವಾಯುಪಡೆಗೆ ಹೆಚ್ಚಿನ ಬಲವನ್ನು ತುಂಬಲಿದೆ. ದುಬೈ ಏರ್​ಷೋನಲ್ಲಿ ರಷ್ಯನ್ ಫೆಡರಲ್ ಸರ್ವೀಸ್ ಫಾರ್ ಮಿಲಿಟರಿ ಟೆಕ್ನಿಕಲ್ ಕೋಆಪರೇಶನ್(ಎಫ್​ಎಸ್​ಎಂಟಿಸಿ)ನ ಡೈರೆಕ್ಟರ್ ಡಿಮಿಟ್ರಿ ಶುಗೇವ್ ಈ ಕುರಿತು ಹೇಳಿಕೆ ನೀಡಿದ್ದಾರೆ. ಎಫ್​ಎಸ್​ಎಂಟಿಸಿಯು ರಷ್ಯಾ ಸರ್ಕಾರದ ಮುಖ್ಯ ರಕ್ಷಣಾ ರಫ್ತು ನಿಯಂತ್ರಣ ಸಂಘಟನೆಯಾಗಿದೆ. ಕೈಗಾರಿಕಾ ಮೂಲಗಳ ಪ್ರಕಾರ, ಸ್ಕಾ್ವಡ್ರನ್​ನ ಮೊದಲ ಭಾಗಗಳು ಈಗಾಗಲೇ ಭಾರತವನ್ನು ಸೇರಿವೆ. ಪಾಕಿಸ್ತಾನ ಮತ್ತು ಚೀನಾದ ಯಾವ ವಾಯುನೆಲೆಗಳಿಂದ ಬೆದರಿಕೆ ಇದೆಯೋ ಆ ಭಾಗದಲ್ಲಿ ಭಾರತ ಇವುಗಳನ್ನು ನಿಯೋಜಿಸಲಿದೆ. ಈ ಕ್ಷಿಪಣಿ ವ್ಯವಸ್ಥೆಯ ಬಿಡಿಭಾಗಗಳು ಈಗಾಗಲೇ ವಾಯು ಮತ್ತು ಸಮುದ್ರ ಮಾರ್ಗವಾಗಿ ಭಾರತಕ್ಕೆ ಸೇರಿದೆ. ಕ್ಷಿಪ್ರವಾಗಿ ನಿಶ್ಚಿತ ಸ್ಥಳದಲ್ಲಿ ಇದರ ಸ್ಥಾಪನೆ ನಡೆಯಲಿದೆ. ಈ ವರ್ಷದ ಕೊನೆಯೊಳಗೆ ಭಾರತದ ವಾಯುಪಡೆ ಇದನ್ನು ಪೂರ್ಣಗೊಳಿಸಲಿದೆ. ಭಾರತೀಯ ವಾಯುಪಡೆಯ ಗಮನ ಪೂರ್ತಿ ಈಗ ಪೂರ್ವ ವಲಯದ ಕಡೆಗಿದೆ.

ಚೀನಾದಿಂದ ಎಸ್-400 ನಿಯೋಜನೆ: ಭಾರತದ ಗಡಿ ಭಾಗದಲ್ಲಿ ಸಂಘರ್ಷಕ್ಕೆ ಇಳಿದಿರುವ ಚೀನಾ ಈಗಾಗಲೇ ಟಿಬೆಟ್​ನ ನಗರಿ ಗರ್ ಗುನ್ಸಾ ಮತ್ತು ನಯಿಂಗಚಿ ವಾಯುನೆಲೆಯಲ್ಲಿ ಎರಡು ಎಸ್-400 ಸ್ಕಾ್ವಡ್ರನ್ ನಿಯೋಜಿಸಿದೆ. ಲಡಾಖ್, ಅರುಣಾಚಲ ಪ್ರದೇಶಕ್ಕೆ ಸಮೀಪವಾಗಿ ಈ ಎರಡೂ ವಾಯುನೆಲೆಗಳಿವೆ.

ಸಾಮರ್ಥ್ಯ ಏನು?: 400 ಕಿ.ಮೀ. ದೂರದಲ್ಲಿರುವ ಮತ್ತು 30 ಕಿ.ಮೀ ಎತ್ತರದಿಂದ ಬರುತ್ತಿರುವ ಶತ್ರುಪಡೆಯ ಬಾಂಬರ್​ಗಳು, ಯುದ್ಧವಿಮಾನ, ಕ್ಷಿಪಣಿ, ಡ್ರೋನ್ , ಗೂಢಚರ್ಯು ವಸ್ತುಗಳನ್ನು ಹೊಡೆದುರುಳಿಸಬಲ್ಲ ಶಕ್ತಿ ಎಸ್-400ಗೆ ಇದೆ. ಜತೆಗೆ ತನ್ನ ರಕ್ಷಣೆಯನ್ನು ಕೂಡ ಮಾಡಿಕೊಳ್ಳಬಲ್ಲ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ.

ಒಪ್ಪಂದ ಏನು?: ರಷ್ಯಾದಿಂದ 5 ಟ್ರಯಂಫ್ ಎಸ್-400 ಯುದ್ಧವಿಮಾನ ಹಾಗೂ ಕ್ಷಿಪಣಿ ದಾಳಿ ನಿರೋಧಕ ವ್ಯವಸ್ಥೆ ಖರೀದಿಯ ಒಪ್ಪಂದಕ್ಕೆ 2018ರ ಅಕ್ಟೋಬರ್​ನಲ್ಲಿ ಉಭಯ ರಾಷ್ಟ್ರಗಳು ಸಹಿ ಹಾಕಿವೆ. ಇದರಂತೆ ರಷ್ಯಾವು ಐದು ವರ್ಷದೊಳಗೆ ಎಲ್ಲ 5 ವ್ಯವಸ್ಥೆಯನ್ನು ಭಾರತಕ್ಕೆ ಹಸ್ತಾಂತರಿಸಬೇಕು.

  • ಒಟ್ಟು ವೆಚ್ಚ 40,000 ಕೋಟಿ ರೂಪಾಯಿ
  • ಒಪ್ಪಂದ ಸಹಿಯಾದ 2 ವರ್ಷದೊಳಗೆ ಮೊದಲ ಎಸ್-400 ವ್ಯವಸ್ಥೆ ವಾಯುಪಡೆಗೆ ಸೇರ್ಪಡೆ, ತಪಾಸಣೆ, ಪರೀಕ್ಷೆ, ಅಭ್ಯಾಸ.
  • ಬಳಿಕ ಮುಂದಿನ 3 ವರ್ಷದೊಳಗೆ ಉಳಿದ ನಾಲ್ಕು ವಾಯುಪಡೆಗೆ ಸೇರ್ಪಡೆ.
  • ಸೆನ್ಸರ್ ಮತ್ತು ಅಸ್ತ್ರಗಳ ಜಾಲದೊಂದಿಗೆ ಭಾರತೀಯ ವಾಯುಪಡೆಯಿಂದ ಎಸ್-400 ಸಂಯೋಜನೆ.

ಅಮೆರಿಕದ ನಿರ್ಬಂಧ?: ಭಾರತ ಮತ್ತು ರಷ್ಯಾ ನಡುವಿನ ಈ ಒಪ್ಪಂದಕ್ಕೆ 2018ರ ಅಕ್ಟೋಬರ್ 5ರಂದು ಸಹಿ ಬಿದ್ದಿತ್ತು. ಆಗಲೇ ಅಮೆರಿಕ ಭಾರತದ ಮೇಲೆ 2017ರ ಕಾಟ್ಸಾ (ಕೌಂಟರಿಂಗ್ ಅಮೆರಿಕಾಸ್ ಅಡ್ವರ್ಸರೀಸ್ ಥ್ರೂ ಸ್ಯಾಂಕ್ಷನ್ಸ್ ಕಾಯ್ದೆ) ಮೂಲಕ ನಿರ್ಬಂಧ ವಿಧಿಸುವ ಎಚ್ಚರಿಕೆ ನೀಡಿತ್ತು. ಇದು ಅಮೆರಿಕದ ಹಿತಾಸಕ್ತಿ ಕಾಪಾಡುವ ಕಾಯ್ದೆಯಾಗಿದೆ. ಆದಾಗ್ಯೂ, ಭಾರತ ಮತ್ತು ರಷ್ಯಾದ ರಕ್ಷಣಾ ಕ್ಷೇತ್ರದ ನಿಪುಣರು ್ಙ ಕಾಯ್ದೆಯ ಅಂಶ ಉಲ್ಲಂಘನೆ ಆಗದ ರೀತಿಯಲ್ಲಿ ಖರೀದಿ ಒಪ್ಪಂದ ಮಾಡಿಕೊಂಡಿದ್ದರು. ಈಗ ನಿರ್ಬಂಧದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಏನೇನು ಮಾಡಬಲ್ಲದು?

  • 100 ದಾಳಿಗಳನ್ನು ಒಟ್ಟಿಗೆ ಗ್ರಹಿಸಬಲ್ಲ ರೆಡಾರ್​ಗಳು.
  • ವಿವಿಧ ಅಂತರದಲ್ಲಿರುವ (400 ಕಿ.ಮೀ, 250 ಕಿ.ಮೀ., 120 ಕಿ.ಮೀ. ಮತ್ತು 40 ಕಿ.ಮೀ. ಅಂತರದಲ್ಲಿ) ಶತ್ರುಪಡೆಯ ಗುರಿಗಳ ಮೇಲೆ ದಾಳಿಗೆ 4 ರೀತಿಯ ಕ್ಷಿಪಣಿಗಳು .
  • ಖಂಡಾಂತರ ಕ್ಷಿಪಣಿಗಳನ್ನು ಕೂಡ ಹೊಡೆದುರುಳಿಸಬಲ್ಲ ಶಕ್ತಿ.
  • ಅತ್ಯಾಧುನಿಕ ಯುದ್ಧವಿಮಾನಗಳಾದ ಅಮೆರಿಕದ ಎಫ್-35 ಜೆಟ್​ಗಳ ಚಲನವನ್ನು ಕೂಡ ರೆಡಾರ್ ಮೂಲಕ ಲಾಕ್ ಮಾಡಿ, ಕ್ಷಣ ಮಾತ್ರದಲ್ಲಿ ಉಡಾಯಿಸಬಲ್ಲ ಸಾಮರ್ಥ್ಯ.

ಉಪಯೋಗ

  • ಯುದ್ಧದ ಸಂದರ್ಭ ನಗರಗಳ ರಕ್ಷಣೆ
  • ಸೂಕ್ಷ್ಮ ಕೇಂದ್ರ ಗಳಾದ ಅಣುಸ್ಥಾವರಗಳ ನಿರ್ವಣಕಾರ್ಯ ವೇಳೆ ಭದ್ರತೆ.
  • ಮಾರಣಾಂತಿಕ ಕ್ಷಿಪಣಿಯ ಗುರಾಣಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net