

Gold : ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಕಾರ್ಯಾಚರಣೆ ಆರಂಭಿಸಲಿದೆ. ಚಿನ್ನದ ಬೆಲೆ ದಿನೇ ದಿನೇ ವೇಗವಾಗಿ ಏರುತ್ತಿದ್ದರೂ, ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಖರೀದಿ ಮಾಡುವವರು ಭಾರತೀಯರೇ. ಸದ್ಯ ಭಾರತದಲ್ಲಿರುವ ಎಲ್ಲ ಚಿನ್ನದ ಗಣಿಗಳು ಸರ್ಕಾರದ ನಿಯಂತ್ರಣದಲ್ಲಿದ್ದು, ಸರ್ಕಾರಿ ಕಂಪನಿಗಳಿಂದ ಗಣಿಗಾರಿಕೆ ಮಾಡಲ್ಪಡುತ್ತಿವೆ. ಇದರ ನಡುವೆ ಮೊದಲ ಖಾಸಗಿ ಚಿನ್ನದ ಗಣಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಜೊನ್ನಗಿರಿಯಲ್ಲಿ ಸ್ಥಾಪನೆಯಾಗಲಿದೆ.
1994ರಲ್ಲಿ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯು ಕರ್ನೂಲ್ ಪ್ರದೇಶದಲ್ಲಿ ಚಿನ್ನ ನಿಕ್ಷೇಪ ಇರುವುದನ್ನು ಪತ್ತೆ ಮಾಡಿತು. ಹೆಚ್ಚಿನ ಪರಿಶೋಧನಾ ಕಾರ್ಯವನ್ನು ಕೈಗೊಳ್ಳಲು ಖಾಸಗಿ ಕಂಪನಿಗಳನ್ನು ಆಹ್ವಾನಿಸಲಾಗಿದ್ದರೂ, ದೊಡ್ಡ ಹೂಡಿಕೆಯ ಅಗತ್ಯವಿರುವುದರಿಂದ ಯಾವುದೇ ಕಂಪನಿಯು ಪರಿಶೋಧನೆಯನ್ನು ಕೈಗೊಳ್ಳಲು ಮುಂದೆ ಬರಲಿಲ್ಲ.
2005ರಲ್ಲಿ ಕೇಂದ್ರ ಸರ್ಕಾರವು ಗಣಿಗಾರಿಕೆ ಗುತ್ತಿಗೆ ಪ್ರಕ್ರಿಯೆ ಕಾನೂನುಗಳಲ್ಲಿ ಕೆಲವು ಸಡಿಲಿಕೆಗಳನ್ನು ತಂದಿತು. ಇದರಿಂದಾಗಿ ವಿದೇಶಿ ಕಂಪನಿಗಳು ಹೂಡಿಕೆ ಮಾಡಲು ಅವಕಾಶ ದೊರೆಯಿತು. ಇದಾದ ನಂತರ, ಬೆಂಗಳೂರು ಮೂಲದ ಜಿಯೋಮೈಸೂರು ಸರ್ವೀಸಸ್ ಲಿಮಿಟೆಡ್, ಜೊನ್ನಗಿರಿ ವಲಯದಲ್ಲಿ ಅನ್ವೇಷಿಸಲು ಪರವಾನಗಿಯನ್ನು ಪಡೆಯಿತು.
2013ರಲ್ಲಿ, ಪ್ರಾಥಮಿಕ ಚಿನ್ನದ ಗಣಿಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಲು ಅನುಮತಿಯನ್ನು ಪಡೆಯಿತು ಮತ್ತು 2023ರಲ್ಲಿ ಯೋಜನೆಯ ಅನುಮೋದನೆಯನ್ನು ಪಡೆಯಿತು. ಇದೇ ಸಂದರ್ಭದಲ್ಲಿ ಡೆಕ್ಕನ್ ಗೋಲ್ಡ್ ಮೈನ್ಸ್ ಜಿಯೋಮೈಸೂರಿನ ಶೇ.40 ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಂಡಿತು. ಪ್ರಾಥಮಿಕ ಪರಿಶೋಧನೆಗಾಗಿ ತುಕ್ಕಲಿ ಮತ್ತು ಮತಿಗೇರಾ ವಲಯಗಳಲ್ಲಿ 750 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು ಮತ್ತು 1500 ಎಕರೆಗಳನ್ನು ಗುತ್ತಿಗೆಗೆ ತೆಗೆದುಕೊಂಡಿತು.
ಈ ಬಗ್ಗೆ ಮಾತನಾಡಿರುವ ಜಿಯೋಮೈಸೂರಿನ ವ್ಯವಸ್ಥಾಪಕ ನಿರ್ದೇಶಕ ಮೊದಲಿ ಹನುಮ ಪ್ರಸಾದ್, ನಾವು ಇಲ್ಲಿ ಸುಮಾರು 30,000 ಬೋರ್‌ಹೋಲ್‌ಗಳ ಮೂಲಕ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ಎರಡು ವರ್ಷಗಳ ಭರವಸೆಯ ಫಲಿತಾಂಶಗಳ ನಂತರ, ನಾವು ಇಲ್ಲಿ ಚಿನ್ನವನ್ನು ಗಣಿಗಾರಿಕೆ ಮಾಡಲು ನಿರ್ಧರಿಸಿದ್ದೇವೆ. ಕಳೆದ ಡಿಸೆಂಬರ್‌ನಲ್ಲಿ ನಾವು ಕೆಲಸವನ್ನು ಪ್ರಾರಂಭಿಸಲು ಬಯಸಿದ್ದರೂ, ಕೆಲವು ಅಧ್ಯಯನ ಫಲಿತಾಂಶಗಳನ್ನು ಪಡೆಯುವಲ್ಲಿ ವಿಳಂಬವಾಯಿತು ಎಂದು ಹೇಳಿದರು.
ಜೊನ್ನಗಿರಿ ಪ್ರದೇಶದಲ್ಲಿ ಸುಮಾರು 320 ಕೋಟಿ ರೂ. ಹೂಡಿಕೆ ಮಾಡಿ ದೊಡ್ಡ ಪ್ರಮಾಣದ ಸಂಸ್ಕರಣಾ ಯಂತ್ರೋಪಕರಣಗಳನ್ನು ಸ್ಥಾಪಿಸಲಾಗಿದೆ. ಕಂಪನಿಯು ಮುಂದಿನ 25 ವರ್ಷಗಳ ಕಾಲ ಇಲ್ಲಿ ಚಿನ್ನದ ಗಣಿಗಾರಿಕೆ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಳ್ಳಲಿದೆ. 20 ಟನ್ ಬಂಡೆಗಳಿಂದ 40 ರಿಂದ 50 ಗ್ರಾಂ ಚಿನ್ನವನ್ನು ಹೊರತೆಗೆಯಲಾಗಿದ್ದರೂ, ಪೂರ್ಣ ಸಂಸ್ಕರಣಾ ಕಾರ್ಯಾಚರಣೆಗಳು ಪ್ರಾರಂಭವಾದ ನಂತರ ವರ್ಷಕ್ಕೆ 750 ಕೆಜಿ ಚಿನ್ನವನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ.
ಆದರೆ, ಭಾರತವು ಇತರ ದೇಶಗಳಿಂದ ಆಮದು ಮಾಡಿಕೊಳ್ಳುವ ಚಿನ್ನದ ಪ್ರಮಾಣ ಬಹಳ ಕಡಿಮೆ ಇರುವುದರಿಂದ, ಚಿನ್ನದ ಬೆಲೆ ಕಡಿಮೆಯಾಗುವ ಸಾಧ್ಯತೆಯಿಲ್ಲ. (ಏಜೆನ್ಸೀಸ್)