100 ವರ್ಷಗಳ ಹಿಂದೆ ಅಳಿದುಹೋದ ಅಪರೂಪದ ಜೀವಿ ಮತ್ತೆ ಪತ್ತೆ: ನಿಜಕ್ಕೂ ಇದು ಪವಾಡವೇ! Tapir

Tapir
Published on

Tapir : ಸುಮಾರು 100 ವರ್ಷಗಳ ಹಿಂದೆ ಅಳಿದುಹೋಗಿದೆ ಎಂಬ ನಂಬಲಾದ ಜೀವಿಯೊಂದು ಈಗ ಮತ್ತೆ ಪತ್ತೆಯಾಗಿರುವ ಪವಾಡ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.

100 ವರ್ಷಗಳ ಹಿಂದೆ ದಕ್ಷಿಣ ಅಮೆರಿಕಾದ ದೇಶಗಳಲ್ಲಿ ಅಳಿದುಹೋಗಿದೆ ಎಂದು ಭಾವಿಸಲಾದ ನಿಗೂಢ ಪ್ರಾಣಿ ಮತ್ತೆ ಕಾಣಿಸಿಕೊಂಡಿರುವುದು ಅನೇಕರನ್ನು ಅಚ್ಚರಿಗೊಳಿಸಿದೆ. ಪ್ರಪಂಚದಾದ್ಯಂತ ವಿಕಾಸದ ಪ್ರಕ್ರಿಯೆಯಲ್ಲಿ ಅನೇಕ ಪ್ರಾಣಿಗಳು ನಾಶವಾಗುತ್ತಿದ್ದರೆ, ಅನೇಕ ಪ್ರಭೇದಗಳು ಮಾನವರಿಂದ ಬೇಟೆಯಾಡಲ್ಪಡುತ್ತಿವೆ.

ಸದ್ಯ ಹೆಚ್ಚಿನ ಪ್ರಾಣಿಗಳು ಅಳಿವಿನಂಚಿನಲ್ಲಿವೆ. ಈ ಪ್ರಾಣಿಗಳನ್ನು ಸಂರಕ್ಷಿಸಲು ಆಯಾ ಸರ್ಕಾರಗಳು ಸಾಕಷ್ಟು ಪ್ರಯತ್ನ ಮಾಡುತ್ತಿದ್ದು, ಜನರಲ್ಲಿ ಜಾಗೃತಿ ಸಹ ಮೂಡಿಸುತ್ತಿವೆ. ಆದರೆ, 100 ವರ್ಷಗಳ ಹಿಂದೆಯೇ ಅಳಿದುಹೋಗಿವೆ ಎಂದು ಭಾವಿಸಲಾದ ಟ್ಯಾಪಿರ್ ಪ್ರಭೇದವನ್ನು ಇದೀಗ ದಕ್ಷಿಣ ಅಮೆರಿಕಾದಲ್ಲಿ ಕಂಡುಹಿಡಿಯಲಾಗಿದೆ.

ಕೊನೆಯ ಬಾರಿಗೆ ರಿಯೊ ಡಿ ಜನೈರೊ ರಾಜ್ಯದಲ್ಲಿ 1914 ರಲ್ಲಿ ಸೆರ್ರಾ ಡಾಸ್ ಓರ್ಗಾವೋಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಪ್ರಾಣಿ ಕಾಣಿಸಿಕೊಂಡಿತ್ತು. ಇದಾದ ಬಳಿಕ ಆ ಪ್ರಾಣಿಗಳು ಮತ್ತೆ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಪ್ರಾಣಿ ಪ್ರಿಯರು ಹಲವು ವರ್ಷಗಳಿಂದ ಈ ಪ್ರಾಣಿಗಾಗಿ ಹುಡುಕುತ್ತಿದ್ದರೂ, ಒಮ್ಮೆಯೂ ಕಾಣಿಸಿಕೊಳ್ಳದೇ ಇದ್ದಿದ್ದರಿಂದ ಅದು ಅಳಿದು ಹೋಗಿದೆ ಎಂದು ಪರಿಗಣಿಸಲಾಗಿತ್ತು.

ನಗರೀಕರಣ, ಅರಣ್ಯನಾಶ ಮತ್ತು ಅಕ್ರಮ ಬೇಟೆಯಾಡುವಿಕೆ ಸೇರಿದಂತೆ ಇತರ ಅಂಶಗಳಿಂದ ಟ್ಯಾಪಿರ್​ಗಳಿಗೆ ಹೆಚ್ಚಿನ ಅಪಾಯ ಎದುರಾಗಿತ್ತು ಮತ್ತು ಅಂತಿಮವಾಗಿ ಈ ಪ್ರಾಣಿಗಳು ಅಳಿದು ಹೋಗಿವೆ ಎಂದು ನಂಬಲಾಗಿತ್ತು. ಆದರೆ, ಕೆಲವು ದಿನಗಳ ಹಿಂದೆ, ಈ ಪ್ರಾಣಿಯು ಬ್ರೆಜಿಲ್‌ನ ರಾಷ್ಟ್ರೀಯ ಉದ್ಯಾನವನದಲ್ಲಿ ಅನಿರೀಕ್ಷಿತವಾಗಿ ಕಾಣಿಸಿಕೊಂಡಿದೆ.

ತಾಯಿ ಟ್ಯಾಪಿರ್ ಎರಡು ಮರಿಗಳೊಂದಿಗೆ ನಡೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಕೆಲವರು ಸೆರೆಹಿಡಿದಿದ್ದಾರೆ. ಟ್ಯಾಪಿರ್ ಇನ್ನೂ ಅಳಿದುಹೋಗಿಲ್ಲ ಎಂಬುದನ್ನು ಈ ವಿಡಿಯೋ ಸಾಬೀತು ಮಾಡಿದೆ. ಕಳೆದ 100 ವರ್ಷಗಳಿಂದ ಎಲ್ಲಿಯೂ ಕಾಣಿಸಿಕೊಳ್ಳದೇ ಟ್ಯಾಪಿರ್‌ಗಳು ರಹಸ್ಯವಾಗಿದ್ದಿದ್ದನ್ನು ಕಂಡು ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಆಶ್ಚರ್ಯಚಕಿತರಾಗಿದ್ದಾರೆ. ಸದ್ಯ ಟ್ಯಾಪಿರ್‌ಗಳನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ಅವುಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಟ್ಯಾಪಿರ್​ಗಳು 700 ಪೌಂಡ್‌ಗಳಷ್ಟು ತೂಕದವರೆಗೆ ಬೆಳೆಯುತ್ತವೆ. ಮಳೆಕಾಡು ಪರಿಸರ ವ್ಯವಸ್ಥೆಗಳ ಪ್ರಮುಖ ಸದಸ್ಯ ಪ್ರಾಣಿಗಳಾಗಿವೆ. tapirs.org ಪ್ರಕಾರ, ಈ ಜೀವಿಗಳು ಸಸ್ಯಗಳನ್ನು ತಿಂದು ತಮ್ಮ ಮಲದ ಮೂಲಕ ಬೀಜಗಳನ್ನು ಹರಡುವ ಮೂಲಕ "ಅರಣ್ಯ ತೋಟಗಾರರು" ಎಂದು ಕರೆಯಲ್ಪಡುತ್ತವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net