

ಬೆಂಗಳೂರು: ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ‘ರಿವೈಂಡ್’ ಸಿನಿಮಾ ನಿರ್ದೇಶಿಸಿ, ನಟಿಸಿ, ಬಳಿಕ ‘ರಾಮಾಚಾರಿ 2.0’ ಚಿತ್ರದಲ್ಲಿ ಮಿಂಚಿದ ನಟ ತೇಜ್. ಈಗ ಹೊಸ ಪ್ರಾಜೆಕ್ಟ್‌ಗೆ ಕೈ ಹಾಕಿದ್ದು, ‘ಡ್ಯೂಡ್’ ಎಂದು ಚಿತ್ರಕ್ಕೆ ಶೀರ್ಷಿಕೆ ಇಟ್ಟಿದ್ದಾರೆ.
ಇತ್ತಿಚೆಗಷ್ಟೆ ಇದರ ಮೊದಲ ನೋಟ ಅನಾವರಣಗೊಂಡಿದ್ದು, ಭಾನುವಾರ (ಆ. 6) ಚಿತ್ರದ ಮುಹೂರ್ತ ಕೂಡ ನೆರವೇರಿದೆ. ನಟ ರಾಘವೇಂದ್ರ ರಾಜಕುಮಾರ್ ಮುಹೂರ್ತದಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಮಹಿಳಾ ಫುಟ್‌ಬಾಲ್ ಆಟದ ಕುರಿತ ಕನ್ನಡದ ಮೊದಲ ಚಿತ್ರವಿದು ಎನ್ನಲಾಗಿದೆ. 12 ಹಿರೋಯಿನ್‌ಗಳು ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿರುವುದು ಚಿತ್ರದ ಮತ್ತೊಂದು ವಿಶೇಷತೆ.
ನಿರ್ದೇಶನದ ಜತೆ ತೇಜ್ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಪೂಜ ರಾಜು, ಚಿತ್ರಲ್ ರಂಗಸ್ವಾಮಿ, ರೋಹಿಣಿ, ಪ್ರಣವಿ ಗೌಡ, ಸಹನ ಗೌಡ, ಸಾನಿಯಾ, ಜೀವಿತಾ, ದೃತಿ, ಸೌಮ್ಯ, ರೊಸ್ಲಿಂಗ್, ಮಿಶೇಲ್ ನೊರೋನ, ರಂಗಾಯಣ ರಘು, ಸ್ಪರ್ಶ ರೇಖಾ ಪ್ರಮುಖ ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ‘ಜಿಂಕೆಮರೀನಾ…’ ಖ್ಯಾತಿಯ ಎಮಿಲ್ ಸಂಗೀತವಿರಲಿದೆ.