

ಕನ್ನಡ ಚಿತ್ರರಂಗಕ್ಕೆ 2024ಅರ್ಧ ಚಂದ್ರದಂತಿತ್ತು. ವರ್ಷದ ಮೊದಲ ಆರು ತಿಂಗಳಲ್ಲಿ ಕೇವಲ ಎರಡು-ಮೂರು ಸಿನಿಮಾಗಳು ಹೊರತುಪಡಿಸಿ, ಬೇರೆ ಚಿತ್ರಗಳು ಸದ್ದು ಮಾಡಲಿಲ್ಲ. ಥಿಯೇಟರ್ಗಳು ಪ್ರೇಕ್ಷಕರ ಕೊರತೆ ಎದುರಿಸಿದವು. ಜೂನ್ ಬಳಿಕ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೊಂಡು ಮತ್ತೆ ಚಟುವಟಿಕೆಗಳು ಬಿರುಸುಗೊಂಡವು. ಈ ಮಧ್ಯೆ, ಖ್ಯಾತ ನಟನ ಬಂಧನದಿಂದ ಕನ್ನಡ ಚಿತ್ರರಂಗವೂ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತಾಯಿತು. ಹಾಗೇ ಕನ್ನಡ ಚಿತ್ರರಂಗವನ್ನು ಆವರಿಸಿರುವ ಕರಿಮೋಡ ಸರಿಯಲಿ ಎಂದು ಕಲಾವಿದರ ಸಂಘದಲ್ಲಿ ವಿಶೇಷ ಹೋಮ- ಹವನಗಳನ್ನೂ ಮಾಡಲಾಯಿತು. ಸಿಹಿ-ಕಹಿಗಳ ಸಮ್ಮಿಶ್ರಣವಾಗಿದ್ದ ಈ ವರ್ಷದ ಹಿನ್ನೋಟ ಇಲ್ಲಿದೆ.
ಜ.5ರಂದು ಆರಂಭ ಡಿ.27ಕ್ಕೆ ಸಂಪನ್ನ: ಈ ವರ್ಷದ ಕನ್ನಡ ಚಿತ್ರರಂಗದ ಓಟವು ಜ.5ರಿಂದ ಆರಂಭವಾಯಿತು. ಮೊದಲ ವಾರ ‘ಆದರ್ಶ ರೈತ’, ‘ಆನ್ಲೈನ್ ಮದುವೆ, ಆಫ್ಲೈನ್ ಶೋಭನ’ ಮತ್ತು ‘ಒಂಟಿ ಬಂಟಿ ಲವ್ಸ್ಟೋರಿ’ ಮೂರು ಚಿತ್ರಗಳು ಬಿಡುಗಡೆ ಯಾದವು. ಇಲ್ಲಿಂದ ಆರಂಭವಾದ ವರ್ಷದ ಬೆಳೆಯು ಡಿ.27ಕ್ಕೆ ಸಂಪನ್ನಗೊಂಡಿತು. ಕೊನೆಯ ವಾರ ‘ಔಟ್ ಆಫ್ ಸಿಲಬೆಸ್’ ಚಿತ್ರ ತೆರೆಕಂಡು, ಸಿನಿ ರಸಿಕರನ್ನು ರಂಜಿಸಿತು. ಈ ವರ್ಷ 220ಕ್ಕೂ ಅಧಿಕ ಚಿತ್ರಗಳು ಬಿಡುಗಡೆಯಾದವು, ಆದರೆ, ಅದರಲ್ಲಿ ದೊಡ್ಡ ಮಟ್ಟದ ಸಕ್ಸಸ್ ಕಂಡಿದ್ದು ಬೆರಳಣಿಕೆಯಷ್ಟು ಮಾತ್ರ. 2023ರಲ್ಲಿ 241 ಸಿನಿಮಾಗಳು ಬಿಡುಗಡೆಯಾಗಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸಿನಿಮಾ ಬೆಳೆ ಕಡಿಮೆ ಎನ್ನಬಹುದು.
ಎರಡು ಶೂನ್ಯವಾರ: 2024ರಲ್ಲಿ ಪ್ರತಿ ವಾರ ಕನ್ನಡದ ಕನಿಷ್ಠ ಮೂರರಿಂದ ಒಂಬತ್ತು ಸಿನಿಮಾಗಳವರೆಗೆ ಬಿಡುಗಡೆಯಾಗಿವೆ. ಆದರೆ, ಇದರಲ್ಲಿ ಎರಡು ವಾರ ಮಾತ್ರ ಯಾವುದೇ ಚಿತ್ರಗಳು ಬಿಡುಗಡೆಯಾಗಲಿಲ್ಲ. ವರ್ಷದ ಆರಂಭದ 2ನೇ ಶುಕ್ರವಾರ (ಜ.12) ಹಾಗೂ ವರ್ಷಾಂತ್ಯ ಡಿಸೆಂಬರ್ 2ನೇ ಶುಕ್ರವಾರ (ಡಿ.13) ಯಾವುದೇ ಸಿನಿಮಾಗಳು ಬಿಡುಗಡೆಯಾಗದೆ, ಪ್ರೇಕ್ಷಕರಿಗೆ ‘ಶೂನ್ಯವಾರ’ವಾದವು.
ಕೆಎಫ್ಸಿಸಿಗೆ ನೂತನ ಅಧ್ಯಕ್ಷ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ 2024-25ರ ಅವಧಿಗೆ ನಡೆದ ಚುನಾವಣೆಯಲ್ಲಿ ಪ್ರದರ್ಶಕರ ವಿಭಾಗದ ಎಂ.ನರಸಿಂಹಲು ಅಧ್ಯಕ್ಷರಾಗಿ ಡಿ.19ರಂದು ಅಧಿಕಾರ ಸ್ವೀಕರಿಸಿದರು. ಇನ್ನು ಉಪಾಧ್ಯಕ್ಷರಾಗಿ ಕೆ.ವಿ. ವೆಂಕಟೇಶ್, ಶಿಲ್ಪಾ ಶ್ರೀನಿವಾಸ್, ರಂಗಪ್ಪ ಕೆ.ಒ. ಆಯ್ಕೆಯಾಗಿದ್ದಾರೆ.
ಬಲ ತಂದ ಭೀಮ, ಕೃಷ್ಣ...: ಮೊದಲ ಆರು ತಿಂಗಳಲ್ಲಿ ಶಿವರಾಜಕುಮಾರ್, ಪ್ರಭುದೇವ ನಟನೆಯ ‘ಕರಟಕ ದಮನಕ’ ಬಿಟ್ಟರೆ, ಬೇರೆ ಸ್ಟಾರ್ ಸಿನಿಮಾಗಳು ರಿಲೀಸ್ ಆಗಿರಲಿಲ್ಲ. ಹಾಗೆಯೇ ಒಟಿಟಿ ಪ್ರಭಾವ, ಲೋಕಸಭಾ ಎಲೆಕ್ಷನ್ ಇನ್ನಿತರ ಕಾರಣಗಳಿಂದ ಥಿಯೇಟರ್ಗಳು ಖಾಲಿ ಹೊಡೆದವು. ಜುಲೈ ಬಳಿಕ ಒಂದು ರೀತಿಯ ಭರವಸೆಯ ಮಳೆ ಸುರಿಯಿತು. ಡಾಲಿ ಧನಂಜಯ ನಟನೆಯ ‘ಕೋಟಿ’ ಹಾಗೂ ವಶಿಷ್ಠ ಸಿಂಹ ನಟನೆಯ ‘ಲವ್ಲಿ’ ಚಿತ್ರಗಳು ತಕ್ಕಮಟ್ಟಿಗೆ ಪ್ರೇಕ್ಷಕರನ್ನು ಸೆಳೆದವು. ಆದರೆ, ಆ. 9ರಂದು ಬಿಡುಗಡೆಯಾದ ವಿಜಯಕುಮಾರ್ ನಟಿಸಿ, ನಿರ್ದೇಶಿಸಿದ್ದ ‘ಭೀಮ’ ಕನ್ನಡದ ಚಿತ್ರರಂಗಕ್ಕೆ ಭೀಮಬಲ ತಂದುಕೊಟ್ಟಿತು. ಅಲ್ಲಿಂದ ಕನ್ನಡ ಚಿತ್ರರಂಗಕ್ಕೆ ವೇಗ ಸಿಕ್ಕಿತ್ತು. ನಂತರ ಅ.15ರಂದು ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಕೂಡ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಅ. 31ರಂದು ರಿಲೀಸ್ ಆದ ಶ್ರೀಮುರಳಿ ಅಭಿನಯದ ‘ಬಘೀರ’, ನ.15ಕ್ಕೆ ತೆರೆಗೆ ಬಂದ ಶಿವರಾಜಕುಮಾರ್ ಅವರ ‘ಭೈರತಿ ರಣಗಲ್’, ಡಿ. 20ರಂದು ರಿಲೀಸ್ ಆದ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಯುಐ’, ಡಿ. 25ರಂದು ತೆರೆಗೆ ಬಂದ ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರಗಳಿಗೆ ಪ್ರೇಕ್ಷಕ ಪ್ರಭು ಜೈ ಎಂದರು.
ದಾಸನ ಜೈಲುವಾಸ: ನಟ ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರಿದ್ದು, ಈ ವರ್ಷ ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಲು ಕಾರಣವಾಯಿತು. ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಅವರನ್ನು ಜೂ.11ರಂದು ಮೈಸೂರಿನಲ್ಲಿ ಬಂಧಿಸಲಾಯಿತು. ಕೆಲ ದಿನಗಳ ಬಳಿಕ ಜೈಲಿನಲ್ಲಿ ದರ್ಶನ್ ಸಿಗರೇಟ್ ಸೇದುತ್ತಿರುವ ಹಾಗೂ ಅಭಿಮಾನಿಗಳ ಜತೆ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿರುವ ಫೋಟೋಗಳು ವೈರಲ್ ಆದ ಬಳಿಕ ಆ. 29ರಂದು ಬಳ್ಳಾರಿ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಯಿತು. ಇದೀಗ ದರ್ಶನ್ ಬೇಲ್ನಲ್ಲಿದ್ದಾರೆ.
ಕಾಂತಾರ, ಕೆಜಿಎಫ್ಗೆ ರಾಷ್ಟ್ರ ಪ್ರಶಸ್ತಿ: ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗವನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದ ಕೀರ್ತಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಹಾಗೂ ಯಶ್ ಅಭಿನಯದ ‘ಕೆಜಿಎಫ್’ ಸರಣಿಗೆ ಸಲ್ಲುತ್ತದೆ. ಈ ಎರಡು ಸಿನಿಮಾಗಳು ಈ ಬಾರಿಯ 70ನೇ ರಾಷ್ಟ್ರಪ್ರಶಸ್ತಿಗೆ ಭಾಜನರಾದವು ಎಂಬುದು ಹೆಮ್ಮೆಯ ಸಂಗತಿ. ‘ಕಾಂತಾರ’ ‘ಅತ್ಯುತ್ತಮ ಮನರಂಜನಾ ಚಿತ್ರ’ ಹಾಗೂ ‘ಅತ್ಯುತ್ತಮ ನಟನೆ’ ಎರಡು ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು. ಇನ್ನು ಕನ್ನಡ ವಿಭಾಗದ ‘ಅತ್ಯುತ್ತಮ ಚಿತ್ರ’ ಪ್ರಶಸ್ತಿಗೆ ‘ಕೆಜಿಎಫ್-2’ ಚಿತ್ರ ಭಾಜನವಾಯಿತು. ಅತ್ಯುತ್ತಮ ಕಲೆ, ಸಂಸ್ಕೃತಿಯ ವಿಭಾಗದಲ್ಲಿ ಸಾಗರ್ ಪುರಾಣಿಕ್ ನಿರ್ದೇಶನದ ‘ರಂಗವೈಭವ’, ನಾನ್ ಫೀಚರ್ ವಿಭಾಗದ ಅತ್ಯುತ್ತಮ ನಿರ್ದೇಶನಕ್ಕೆ ದಿನೇಶ್ ಶೆಣೈ (ಮಧ್ಯಂತರ), ಸಂಕಲನಕ್ಕೆ ಸುರೇಶ್ ಅರಸ್ (ಮಧ್ಯಂತರ) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಅ.8ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುಮು ಪ್ರಶಸ್ತಿ ಪ್ರದಾನ ಮಾಡಿದರು.
ಗೋವಾದಲ್ಲಿ ನಿರ್ವಪಕರ ರಂಪಾಟ: ಕನ್ನಡ ಚಿತ್ರರಂಗದ ಸಮಸ್ಯೆಗಳ ಸಂಬಂಧಿಸಿದಂತೆ ಹಾಗೂ ಕನ್ನಡ ಚಿತ್ರರಂಗದ 90ನೇ ವರ್ಷಾಚರಣೆಯ ಬಗ್ಗೆ ರ್ಚಚಿಸಲು ಕರ್ನಾಟಕ ವಾಣಿಜ್ಯ ಮಂಡಳಿಯ ಸದಸ್ಯರು, ನಿರ್ವಪಕರ ಸಂಘ ಹಾಗೂ ನಿರ್ದೇಶಕರ ಸಂಘದ ಪದಾಧಿಕಾರಿಗಳು ಗೋವಾ ಪ್ರವಾಸ ಮಾಡಿದ್ದರು. ಮೇ 27ರಂದು ಗೋವಾದ ಖಾಸಗಿ ಹೋಟೆಲ್ನಲ್ಲಿ ನಡೆಸಿದ್ದ ಸಭೆಯಲ್ಲಿ ಮಾತಿಗೆ ಮಾತು ಬೆಳೆದು ನಿರ್ವಪಕರಾದ ರಥಾವರ ಮಂಜುನಾಥ್, ಎ.ಗಣೇಶ್ ಹಾಗೂ ಸತೀಶ್ ಆರ್ಯ ಈ ಮೂವರು ರಂಪಾಟ ಮಾಡಿಕೊಂಡಿದ್ದರು. ಸಮಸ್ಯೆ ಪರಿಹಾರಕ್ಕೆಂದು ಪ್ರವಾಸ ತೆರಳಿದ್ದವರೇ ಗಲಾಟೆ ಮಾಡಿರುವುದು ನಗೆಪಾಟಲಿಗೆ ಕಾರಣವಾಗಿತ್ತು. ಬಳಿಕ ಇವರನ್ನು ಸಮಾಧಾನಪಡಿಸಿ, ಈ ಮೂವರನ್ನು ಪ್ರತ್ಯೇಕವಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಈ ಬಗ್ಗೆ ಗೋವಾದಲ್ಲಿ ಪರಸ್ಪರ ಪೊಲೀಸ್ ದೂರು ಕೂಡ ದಾಖಲಿಸಿದ್ದರು.
ಇಬ್ಬರು ನಿರ್ದೇಶಕರು, ಒಬ್ಬ ನಿರ್ವಪಕ ಆತ್ಮಹತ್ಯೆ: ಕನ್ನಡದ ಇಬ್ಬರು ಪ್ರತಿಭಾನ್ವಿತ ನಿರ್ದೇಶಕರು ಹಾಗೂ ಓರ್ವ ನಿರ್ವಪಕ ಆತ್ಮಹತ್ಯೆಗೆ ಶರಣಾದರು. ಆರ್ಥಿಕ ಸಂಕಷ್ಟವೇ ಇವರ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ನಿರ್ವಪಕ ಸೌಂದರ್ಯ ಜಗದೀಶ್ ಏ. 14ರಂದು ಮಹಾಲಕ್ಷ್ಮೀ ಲೇಔಟ್ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಇನ್ನು, ‘ಅಶೋಕ ಬ್ಲೇಡ್’ ನಿರ್ದೇಶಕ ವಿನೋದ್ ದೊಂಡೋಲೆ ಜು.23ರಂದು ನಾಗರಬಾವಿಯ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು. ‘ಮಠ’ ಗುರುಪ್ರಸಾದ್ ನ.3ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಮೂವರ ಸಾವು ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಚಂದನವನದಲ್ಲಿ ಲಾಲಿಹಾಡು: ಈ ವರ್ಷದ ಚಂದನವನದಲ್ಲಿ ಲಾಲಿಹಾಡು ಕೇಳಿಬಂತು. ‘ರಾಧಾ ರಮಣ’ ಧಾರಾವಾಹಿ ಖ್ಯಾತಿಯ ಕಾವ್ಯಾಗೌಡ ಜ.22ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಸೆ.5ರಂದು ತಾರಾ ಜೋಡಿ ಮಿಲನಾ ನಾಗರಾಜ್ -ಡಾರ್ಲಿಂಗ್ ಕೃಷ್ಣ ಹೆಣ್ಣು ಮಗುವನ್ನು ಬರಮಾಡಿಕೊಂಡರು. ನಟಿ ಪ್ರಣೀತಾ ಸುಭಾಷ್ ಗಂಡು ಮಗುಗೆ ಜನ್ಮ ನೀಡಿದರು. ಕವಿತಾ ಗೌಡ - ಚಂದನ್ ಸೆ.19ರಂದು ಗಂಡು ಮಗುವನ್ನು ಬರಮಾಡಿಕೊಂಡರು. ಹರ್ಷಿಕಾ ಪೂಣಚ್ಚ -ಭುವನ್ ಪೊನ್ನಣ್ಣ ಜೋಡಿ ಅ.3ರಂದು, ನೇಹಾ ಗೌಡ- ಚಂದನ್ ದಂಪತಿ ಅ.29ರಂದು ಹೆಣ್ಣು ಮಗುವನ್ನು ಸ್ವಾಗತಿಸಿದರು.
ಗೋವಾ ಫಿಲಂ ಫೆಸ್ಟಿವಲ್ನಲ್ಲಿ ಕನ್ನಡ ಕಲರವ: ನ.20ರಿಂದ 28ರವರೆಗೆ ಗೋವಾದಲ್ಲಿ ಆಯೋಜಿಸಿದ್ದ 55ನೇ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ನಲ್ಲಿ ಕನ್ನಡದ 2ಚಿತ್ರಗಳು ಪ್ರದ್ರರ್ಶನಗೊಂಡು, ಜನ ಮೆಚ್ಚುಗೆ ಪಡೆದವು. ನ.23ರಂದು ಚಿದಾನಂದ ನಾಯಕ್ ನಿರ್ದೇಶನದ ‘ಸನ್ಫ್ಲವರ್ಸ್ ವರ್ ದ ಫಸ್ಟ್ ಒನ್ಸ್ ಟು ನೋ’ (ಸೂರ್ಯಕಾಂತಿ ಹೂಗೆ ಮೊದಲೇ ಗೊತ್ತಿತ್ತು) ಪ್ರದರ್ಶನ ಕಂಡಿತ್ತು. ಬಳಿಕ ನ.26ರಂದು ಗುರುರಾಜ್ ನಿರ್ದೇಶನದ ಗೌರಿಶಂಕರ್, ಬಿಂದು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ‘ಕೆರೆಬೇಟೆ’, ಸಾಗರ್ ಪುರಾಣಿಕ್ ನಿರ್ದೇಶಿಸಿದ್ದ ‘ವೆಂಕ್ಯಾ’ ಚಿತ್ರಗಳು ಪ್ರದರ್ಶನ ಕಂಡವು. 28ರಂದು ಮನೋಹರ ನಿರ್ದೇಶನದ ‘ಮಿಕ್ಕ ಬಣ್ಣದ ಹಕ್ಕಿ’ ಪ್ರದರ್ಶನಗೊಂಡಿತು.
ವಿಚ್ಛೇದನ ಪಡೆದವರು: ಕನ್ನಡ ಚಿತ್ರರಂಗದ ಇಬ್ಬರು ಸೆಲೆಬ್ರಿಟಿಗಳ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿ ದೂರವಾದರು. ಮೊದಲು ನಟ, ಗಾಯಕ ಚಂದನ್ ಶೆಟ್ಟಿ ಹಾಗೂ ‘ಬಿಗ್ಬಾಸ್ ಕನ್ನಡ-5’ರ ಸ್ಪರ್ಧಿ’ ನಿವೇದಿತಾ ಗೌಡ ಜೂ.8ರಂದು ಅಧಿಕೃತವಾಗಿ ವಿಚ್ಛೇದನ ಘೋಷಿಸಿದರು. ಮತ್ತೊಂದೆಡೆ ನಟ ಯುವರಾಜಕುಮಾರ್ ಪತ್ನಿ ಶ್ರೀದೇವಿ ಬೈರಪ್ಪಗೆ ವಿಚ್ಛೇದನ ಬಯಸಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಗಮನಸೆಳೆದ ಹೊಸಬರ ಸಿನಿಮಾಗಳು
ದಾಂಪತ್ಯ ಜೀವನಕ್ಕೆ ಕಾಲಿಟ್ಟವರು