

ನವದೆಹಲಿ: ಕರೊನಾ ಲಸಿಕೆಯಿಂದಾಗಿ ದೇಶದಲ್ಲಿ ಮೊದಲನೇ ಬಾರಿಗೆ ವ್ಯಕ್ತಿಯೊಬ್ಬ ಸಾವನ್ನಪ್ಪಿರುವುದನ್ನು ಸರ್ಕಾರ ಖಚಿತ ಪಡಿಸಿದೆ. ಲಸಿಕೆಯನ್ನು ಪಡೆದಿದ್ದ 68 ವರ್ಷದ ವೃದ್ಧ ಅಲರ್ಜಿಯಿಂದಾಗಿ ಕೊನೆಯುಸಿರೆಳೆದಿರುವುದಾಗಿ ವರದಿಯಾಗಿದೆ.
ಕರೊನಾ ಲಸಿಕೆ ಪಡೆದ ನಂತರ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಿರುವ ಎಇಎಫ್ಐ ಸಮಿತಿಯು ಈವರೆಗೆ ದೇಶದಲ್ಲಿ 31 ಸಾವಿನ ಪ್ರಕರಣಗಳಲ್ಲಿ ಲಸಿಕೆ ಪರಿಣಾಮ ಇದೆ ಎಂದು ವರದಿ ಮಾಡಿದೆ. ಆದರೆ ಸರ್ಕಾರ ಅದರಲ್ಲಿ 18 ಸಾವನ್ನು ಕಾಕತಾಳೀಯ ಎಂದು ಘೋಷಿಸಿದೆ. ಹಾಗೆಯೇ ಏಳನ್ನು ಅನಿರ್ದಿಷ್ಟ ಸಾವುಗಳು ಎಂದು, ಇನ್ನೆರೆಡನ್ನು ವರ್ಗೀಕರಿಸಲಾಗ ಸಾವು ಎಂದು ಹೇಳಲಾಗಿದೆ. ವರದಿಯ ಪ್ರಕಾರ ಮೂರು ಸಾವು ಲಸಿಕೆಯ ಅಡ್ಡ ಪರಿಣಾಮದಿಂದ ಆಗಿದೆ ಎಂದು ಎಇಎಫ್‌ಐ ಸಮಿತಿ ಹೇಳಿದೆಯಾದರೂ ಸರ್ಕಾರ ಅದರಲ್ಲಿ ಒಂದನ್ನು ಮಾತ್ರ ದೃಢಪಡಿಸಿದೆ.
"ಇದು ದೇಶದಲ್ಲಿ ಲಸಿಕೆಯಿಂದಾಗಿ ಸಂಭವಿಸಿರುವ ಮೊದಲು ಸಾವು ಎಂದು ದೃಢವಾಗಿದೆ. ಲಸಿಕೆ ಪಡೆದಿದ್ದ ವ್ಯಕ್ತಿಯಲ್ಲಿ ಅನಾಫಿಲ್ಯಾಕ್ಸಿಸ್ (ಅಲರ್ಜಿ) ಕಂಡುಬಂದಿದೆ. ಅದೇ ಕಾರಣಕ್ಕೆ ಆತ ಕೊನೆಯುಸಿರೆಳೆದಿದ್ದಾನೆ." ಎಂದು ಎಇಎಫ್ಐ ಅಧ್ಯಕ್ಷ ಡಾ.ಎನ್.ಕೆ.ಅರೋರಾ ತಿಳಿಸಿದ್ದಾರೆ. (ಏಜೆನ್ಸೀಸ್)