

ಚಿಕ್ಕಮಗಳೂರು: ಸರ್ಕಾರಿ ಜಾಗ ಅಕ್ರಮವಾಗಿ ಮಂಜೂರು ಮಾಡಿರುವ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೂಡಲೇ ಅವರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಒತ್ತಾಯಿಸಿದರು.
ಕಡೂರು ತಾಲೂಕಿನ ಈ ಹಿಂದಿನ ತಹಸೀಲ್ದಾರ್ ಜೆ.ಉಮೇಶ್, ನಂಜುಂಡಯ್ಯ, ಕಿರಣ್‌ಕುಮಾರ್ ವಿರುದ್ಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ತ್ವರಿತವಾಗಿ ಕ್ರಮಕೈಗೊಳ್ಳಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮೂಡಿಗೆರೆ ತಾಲೂಕಿನಲ್ಲಿ ಸುಮಾರು 2 ಸಾವಿರ ಎಕರೆ ಸರ್ಕಾರಿ ಜಾಗವನ್ನು ನಮೂನೆ 50, 53, 57ರಲ್ಲಿ ಅಕ್ರಮವಾಗಿ ಉಳ್ಳವರಿಗೆ, ಖಾಸಗಿ ಹಾಗೂ ಅರ್ಜಿ ಸಲ್ಲಿಸದವರಿಗೂ ಮಂಜೂರು ಮಾಡಲಾಗಿದೆ. ಉಳ್ಳಿನಾಗರು ಗ್ರಾಮದ ಸರ್ವೇ 43 ರ 5.4 ಎಕರೆ ಜಾಗದ ದಾಖಲಾತಿ ತಿರುಚಿ ನ್ಯಾಯಾಲಯದಲ್ಲಿ ಜಾಮೀನು ಸಿಗುವಂತೆ ಮಾಡಲು ಸಂಚು ರೂಪಿಸಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಕೆಲವರು ಬೆಳೆಗಾರರ ಹೆಸರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ತನಿಖೆ ರದ್ದುಪಡಿಸುವಂತೆ ಒತ್ತಾಯಿಸಿದ್ದಾರೆ ಎಂದು ಹೇಳಿದರು.
ಬೆಳೆಗಾರರ ಹೆಸರಿನಲ್ಲಿ ಕೆಲವರು 3ರಿಂದ 4 ಸಾಗುವಳಿ ಚೀಟಿ ಪಡೆದಿದ್ದಾರೆ. ಒತ್ತಡಕ್ಕೆ ಮಣಿದು ಜಿಲ್ಲಾ ಉಸ್ತುವಾರಿ ಸಚಿವರು ರಕ್ಷಣೆಗೆ ಮುಂದಾಗಬಾರದು. ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅರ್ಹ ರೈತರಿಗೆ ಜಮೀನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ಮೂಡಿಗೆರೆ ತಾಲೂಕು ಕಚೇರಿಯಲ್ಲಿ ನಮೂನೆ 53ರ ಕಡತ ಕಳವು ಸಬಂಧ ಕಡತ ಸಂರಕ್ಷಣಾ ಕಾಯ್ದೆ 2010 ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಕಳವಾಗಿರುವ ಕಡತಗಳು ಬೆಳೆಗಾರರ ಸಂಘದ ಅಧ್ಯಕ್ಷರೊಬ್ಬರ ಕುಟುಂಬದ ಸದಸ್ಯರ ಹೆಸರಿನಲ್ಲಿವೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್, ಮುಖಂಡರಾದ ಕೆ.ಟಿ.ಆನಂದ್, ಎಂ.ಬಿ.ಚಂದ್ರಶೇಖರ್, ಬಸವರಾಜ್, ಪರಮೇಶ್, ಲಕ್ಷ್ಮಣಗೌಡ, ಚನ್ನೇಗೌಡ ಇದ್ದರು.