ಅಗ್ನಿ ಸುರಕ್ಷತಾ ಪ್ರಮಾಣಪತ್ರ ಷರತ್ತು ಸಡಿಲ; ಶಿಕ್ಷಣ ಇಲಾಖೆ ಸೂಚನೆ ಖಾಸಗಿ, ಅನುದಾನಿತ ಶಾಲೆಗಳು ನಿರಾಳ

School Fire
Published on

ಬೆಂಗಳೂರು: ಅನುದಾನಿತ, ಖಾಸಗಿ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ಕಟ್ಟಡ ಮತ್ತು ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ನೀಡಲು ಇದ್ದ ಕಠಿಣ ಷರತ್ತುಗಳನ್ನು ಸಡಿಲಗೊಳಿಸಿ ಶಿಕ್ಷಣ ಇಲಾಖೆ ಆದೇಶಿಸಿದೆ.

5 ವರ್ಷ ಮೇಲ್ಪಟ್ಟ ಅವಧಿಯಲ್ಲಿ ನಿರ್ವಣಗೊಂಡ ಕಟ್ಟಡಗಳಿಗೆ ದಾಖಲಾತಿ ಪ್ರಮಾಣ ಪತ್ರದಿಂದ ವಿನಾಯಿತಿ ನೀಡಲಾಗಿದೆ. ಹೀಗಾಗಿ 5 ವರ್ಷ ಮೇಲ್ಪಟ್ಟ ಹಳೆಯ ಕಟ್ಟಡಗಳಿಗೆ ಸಂಬಂಧಿಸಿ ಯಾವುದೇ ದಾಖಲೆ ಕಡ್ಡಾಯವಿರುವುದಿಲ್ಲ. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್​ಗಳು ಕನಿಷ್ಠ ಎರಡು ರೀತಿಯ ಸುರಕ್ಷತಾ ಪರಿಶೀಲನೆ ನಡೆಸಿ ಷರಾ ಬರೆದು ಪ್ರಮಾಣ ಪತ್ರ ನೀಡಬೇಕು. 5 ವರ್ಷದೊಳಗಿನ ಕಟ್ಟಡಗಳಿಗೆ ದಾಖಲೆಗಳಿದ್ದರೆ, ಸುರಕ್ಷತಾ ತಪಾಸಣೆ ಕಡ್ಡಾಯವಿಲ್ಲ. ಮೇಲ್ನೊಟಕ್ಕೆ ಕಟ್ಟಡ ಪರಿಶೀಲಿಸಿ ಯಾವುದೇ ಕೊರತೆ ಕಂಡುಬಾರದಿದ್ದರೆ ನಿರಾಕ್ಷೇಪಣಾ ಪತ್ರ ನೀಡುವುದು. ಕಟ್ಟಡಕ್ಕೆ ಯಾವುದೇ ದಾಖಲಾತಿ ನೀಡಿದ್ದಾಗ ತಪಾಸಣೆ ಮಾಡಿ ಪ್ರಮಾಣ ಪತ್ರ ನೀಡಲು ಸೂಚಿಸಲಾಗಿದೆ.

ಹಳೇ ಕಟ್ಟಡಗಳಿಗೆ ನಿರಾಪೇಕ್ಷಣಾ ಪತ್ರಗಳನ್ನು ನೀಡುವ ವೇಳೆಯಲ್ಲಿ ಕಟ್ಟಡ ಸುರಕ್ಷತೆ ಪ್ರಮಾಣ ಪತ್ರ ವಿತರಿಸಲು ಗ್ರಾಮೀಣ ಪ್ರದೇಶದ ಖಾಸಗಿ ಮತ್ತು ಅನುದಾನಿತ ಒಂದು ಶಾಲೆಗೆ 1 ಸಾವಿರ ರೂ. ನಗರ ಪ್ರದೇಶದಲ್ಲಿ 5 ಸಾವಿರ ರೂ. ಶುಲ್ಕ ನಿಗದಿ ಪಡಿಸಿದೆ.

ಶಾಲೆಗಳಿಗೆ ಅಗ್ನಿ ಶಾಮಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಸಲಹಾ ಅಥವಾ ಸಮಾಪನ ಪತ್ರ ನೀಡಬೇಕಿದೆ. ಇದಕ್ಕಾಗಿ ಅಧಿಕಾರಿಗಳ ತಂಡವನ್ನು ರೂಪಿಸಿದೆ. ಧೂಮಪಾನ ನಿಷೇಧಿತ ಫಲಕ, ಅಗ್ನಿ ನಂದಕ ಸೇರಿ ಹಲವು ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಆನಂತರ ಪ್ರಮಾಣ ಪತ್ರ ನೀಡಲಿದೆ. ಈ ಹಿಂದೆಯೂ ಕೂಡ ಈ ಕಟ್ಟಡ ಮತ್ತು ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಪಡೆಯಬೇಕೆಂಬ ನಿಯಮ ಹೆಚ್ಚು ಸದ್ದು ಮಾಡಿತ್ತು. ವಿಧಾನ ಪರಿಷತ್ತಿನಲ್ಲೂ ಈ ಸಂಬಂಧ ಚರ್ಚೆಗಳು ನಡೆದಿದ್ದವು. ಆನಂತರ ಒಂದು ವರ್ಷದ ಮಟ್ಟಿಗೆ ಇದಕ್ಕೆ ವಿನಾಯಿತಿ ನೀಡಲಾಗಿತ್ತು.

ಇದೊಂದು ವಸೂಲಿ ತಂತ್ರ: ಸರ್ಕಾರ ಈ ಪ್ರಮಾಣ ಪತ್ರಗಳನ್ನು ಪಡೆಯಬೇಕೆಂದು ಹೇಳುವ ಮೂಲಕ ವಸೂಲಿ ತಂತ್ರಕ್ಕೆ ಮುಂದಾಗಿದೆ. ಎರಡು ಪ್ರಮಾಣ ಪತ್ರಗಳನ್ನು ಒಂದು ವರ್ಷಕ್ಕೊಮ್ಮೆಪಡೆಯಬೇಕೆಂದು ಹೇಳುವುದು ತಪ್ಪು. ಅಲ್ಲದೆ, ಇದರಲ್ಲಿ ಸಾಕಷ್ಟು ಗೊಂದಲಗಳಿವೆ ಎಂದು ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್್ಸ) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net