

ಪ್ರಯಾಗ್ರಾಜ್: ಮಹಾಕುಂಭ ಮೇಳ (Mahakumbh Mela) ನಡೆಯುತ್ತಿರುವ ಸೆಕ್ಟರ್ 22ರಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ಹಲವು ಪೆಂಡಾಲ್ಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ. ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ.
ಮಹಾಕುಂಭ ಮೇಳ (Mahakumbh Mela) ನಡೆಯುತ್ತಿರುವ ಸೆಕ್ಟರ್ 22ರಲ್ಲಿ ಈ ಅವಘಡ ಸಂಭವಿಸಿದ್ದು, ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಪ್ರಮೋದ್ ಶರ್ಮ, ಚಟ್ನಾಗ್ ಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ 15 ಟೆಂಟ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ತಕ್ಷಣ ಕ್ರಮ ಕೈಗೊಂಡು ಬೆಂಕಿಯನ್ನು ನಂದಿಸಲಾಗಿದೆ. ಇದೊಂದು ಅನಧಿಕೃತ ಟೆಂಟ್ ಆಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಗ್ನಿ ಅವಘಡ ಉಂಟಾಗಲು ಕಾರಣವನ್ನು ಹುಡುಕಲಾಗುತ್ತಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿ ಪ್ರಮೋದ್ ಶರ್ಮ ತಿಳಿಸಿದ್ದಾರೆ.
ಹಾಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಅಗ್ನಿ ಅವಘಡ ಸಂಭವಿಸುತ್ತಿರುವುದು ಇದೇ ಮೊದಲಲ್ಲ. ಜನವರಿ 19ರಂದು ಶಾಸ್ತ್ರಿ ಬ್ರಿಡ್ಜ್ ಬಳಿ ಇರುವ ಸೆಕ್ಟರ್ 19ರಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಅಗ್ನಿ ಅವಘಡ ಸಂಭವಿಸಿತ್ತು. ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.