ಇನ್‌ಸ್ಪೆಕ್ಟರ್ ವಿರುದ್ಧದ ಎಫ್ಐಆರ್ ವೈರಲ್

kumar
Published on

ಬೆಂಗಳೂರು: ಸಿವಿಲ್ ವ್ಯಾಜ್ಯದಲ್ಲಿ ಮಧ್ಯ ಪ್ರವೇಶಿಸಿ ಕಡಿಮೆ ಬೆಲೆಗೆ ಮನೆ ಬರೆದುಕೊಡುವಂತೆ ಒತ್ತಾಯಿಸಿದ್ದ ಆರೋಪಕ್ಕೆ ಒಳಗಾಗಿರುವ ಅನ್ನಪೂರ್ಣೇಶ್ವರಿನಗರ ಇನ್‌ಸ್ಪೆಕ್ಟರ್ ವಿರುದ್ಧ ಲೋಕಾಯುಕ್ತ ಸಂಸ್ಥೆ ದಾಖಲಿಸಿದ್ದ ಎಫ್ಐಆರ್ ವೈರಲ್ ಆಗಿದೆ. ಏ.1ರಂದೇ ಇನ್‌ಸ್ಪೆಕ್ಟರ್ ಎ.ವಿ. ಕುಮಾರ್ ಸೇರಿ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ, ಯಾವುದೇ ಕ್ರಮವಾಗದೆ ಇರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಸಿವಿಲ್ ಗುತ್ತಿಗೆದಾರ ಕೆ.ಕೆ. ಚನ್ನೇಗೌಡ, ಏ. 1ಕ್ಕೆ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಎ.ವಿ. ಕುಮಾರ್, ಕಾನ್‌ಸ್ಟೆಬಲ್‌ಗಳಾದ ಉಮೇಶ್, ಅನಂತ್ ಖಾಸಗಿ ವ್ಯಕ್ತಿ ಸಿ.ಪಿ. ಗವಿಗೌಡ,ಸಿ.ಕೆ. ದಿವ್ಯಾ, ಸೋಮಶೇಖರ್ ಆರಾಧ್ಯ, ದಿನೇಶ್ ಮತ್ತು ನಾಲ್ವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಚನ್ನೇಗೌಡ, ತನ್ನ ಪತ್ನಿ ಅನುಷಾ, ಸರ್ಕಾರಿ ಉದ್ಯೋಗದಲ್ಲಿದ್ದು, ಈ ಹಿಂದೆ ಅವರ ವಿರುದ್ಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ‘ಬಿ’ ರಿಪೋರ್ಟ್ ಸಲ್ಲಿಸುವುದಾಗಿ ಮತ್ತು ಅದಕ್ಕೆ ಪ್ರತಿಯಾಗಿ 4 ಕೋಟಿ ರೂ. ಮೌಲ್ಯದ ಮನೆಯನ್ನು ಕಡಿಮೆ ಮೊತ್ತಕ್ಕೆ ಬರೆದುಕೊಡುವಂತೆ ಇನ್‌ಸ್ಪೆಕ್ಟರ್ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದರು.

ಅಲ್ಲದೇ ಈ ಹಿಂದೆ ನಮ್ಮ ಮನೆಗೆ ಕೆಲವರನ್ನು ನುಗ್ಗಿಸಿದ್ದರು ಎಂಬುದು ಅವರ ಆರೋಪವಾಗಿತ್ತು. ಈ ಸಂಬಂಧ ವಿಡಿಯೋ ಮಾಡಿಕೊಂಡಿದ್ದೆ. ನಂತರ ಠಾಣೆಗೆ ನನ್ನನ್ನು ಕರೆಸಿ ಒತ್ತಾಯಪೂರ್ವಕವಾಗಿ ಮನೆ ಬರೆದುಕೊಡುವ ಕರಾರು ಪತ್ರಕ್ಕೆ ಸಹಿ ಹಾಕುವಂತೆ ಒತ್ತಡ ಹೇರಿದ್ದರೆಂದು ಆರೋಪಿಸಿದ್ದಾರೆ.

ಕರಾರು ಪತ್ರಕ್ಕೆ ಪತ್ನಿ ಕಡೆಯಿಂದ ಸಹಿ ಪಡೆಯಲು ನಾಗರಬಾವಿಯ ಹೋಟೆಲ್‌ಗೆ ಏ.1ರಂದು ಕರೆಸಿದ್ದರು. ಚನ್ನೇಗೌಡರ ಪತ್ನಿ ಅನುಷಾಳ ಸಹಿ ಹಾಕಿಸಿಕೊಳ್ಳಲು ಕರೆಸಿದ್ದ ವೇಳೆ ಲೋಕಾಯುಕ್ತ ದಾಳಿ ನಡೆದಿತ್ತು. ಇಬ್ಬರು ಕಾನ್‌ಸ್ಟೆಬಲ್ಗಳು ಸೇರಿ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ದಾಳಿ ವಿಚಾರ ತಿಳಿದು ಕುಮಾರ್ ಪರಾರಿಯಾಗಿದ್ದರು ಎಂದು ಲೋಕಾಯುಕ್ತ ಮೂಲಗಳು ತಿಳಿಸಿದ್ದವು.

ಇನ್‌ಸ್ಪೆಕ್ಟರ್ ಕುಮಾರ್‌ಗೆ ಮುಖ್ಯಮಂತ್ರಿಗಳ ಪದಕ ಸಹ ಬಂದಿತ್ತು. ಆದರೆ, ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು ವಶದಲ್ಲಿ ಇದ್ದವರನ್ನು ಬಿಟ್ಟು ಕಳುಹಿಸಿದ್ದರು. ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net