ವಾಲ್ಮೀಕಿ ಹಗರಣದಲ್ಲಿ ಇಡಿ ತನಿಖಾಧಿಕಾರಿಗಳ ವಿರುದ್ಧವೇ ಎಫ್ ಐಆರ್

edit e3
Published on

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹೊಸ ತಿರುವು ಪಡೆದುಕೊಂಡಿದೆ. ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ನಾಗೇಂದ್ರ ಮತ್ತು ಹಣಕಾಸು ಇಲಾಖೆಯ ಹೆಸರು ಹೇಳುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಧಮ್ಕಿ ಹಾಕುತ್ತಿದ್ದಾರೆ ಎಂದು ಆರೋಪಿಸಿ ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಬಿ.ಕಲ್ಲೇಶ್ ದೂರು ಸಲ್ಲಿಸಿರುವ ಮೇರೆಗೆ ಇಬ್ಬರು ಇಡಿ ಅಧಿಕಾರಿಗಳ ವಿರುದ್ಧವೇ ವಿಲ್ಸನ್‌ಗಾರ್ಡನ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಇಡಿ ಐಆರ್‌ಎಸ್ ಮಿತ್ತಲ್ ಮತ್ತು ಸಹಾಯಕ ನಿರ್ದೇಶಕ ಮುರುಳಿ ಕಣ್ಣನ್ ಎಂಬುವರ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಲ್ಮೀಕಿ ಹಗರಣ ಸಂಬಂಧ ವಿಚಾರಣೆಗೆ ಬರುವಂತೆ ಇಡಿ ಅಧಿಕಾರಿಗಳು ಜು.16ರಂದು ದೂರವಾಣಿ ಕರೆ ಮಾಡಿದ್ದರು. ಅದರಂತೆ ಶಾಂತಿನಗರದ ಇಡಿ ಕಚೇರಿಗೆ ಹೋಗಿ, ಅವರು ಕೇಳಿದ 17 ಪ್ರಶ್ನೆಗಳಿಗೆ ಉತ್ತರ ನೀಡಿದ್ದೆ. ಇದರಲ್ಲಿ ಮೂರು ಪ್ರಶ್ನೆಗಳಿಗೆ ಕಡತ ನೋಡಿ ಮತ್ತು ಕೆಳಹಂತದ ಅಧಿಕಾರಿಗಳ ಮಾಹಿತಿ ಕೇಳಿ ಉತ್ತರಿಸಬೇಕೆಂದು ಎಂದಿದ್ದೆ. ಆಗ ಜು.18ರ ಮಧ್ಯಾಹ್ನ 2 ಗಂಟೆಗೆ ಬರುವಂತೆ ಹೇಳಿದರು. ನನ್ನ ಹೇಳಿಕೆಗೆ ಸಹಿ ಪಡೆದರು. ನನಗೊಂದು ಪ್ರತಿ ಕೊಡಿ ಎಂದಾಗ ಕೊಡಲಿಲ್ಲ. ಎಂ.ಜಿ.ರಸ್ತೆಯ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿರುವುದು ತಪ್ಪು ಎಂದು ಪ್ರಶ್ನಿಸಿದರು.

ಅದಕ್ಕೆ ಸರ್ಕಾರದ ಆದೇಶದಂತೆ ಮಾಡಿದೆ. ನನ್ನ ತಪ್ಪು ಇಲ್ಲವೆಂದು ಹೇಳಿದೆ. ಅದಕ್ಕೆ ಕಣ್ಣನ್, ಅರೆಸ್ಟ್ ಮಾಡುವುದಾಗಿ ಹಾಗೂ 2 ವರ್ಷ ಜಾಮೀನು ಸಿಗುವುದಿಲ್ಲ ಎಂದು ಧಮ್ಕಿ ಹಾಕಿದರು. ಅಲ್ಲಿಂದ ಐಆರ್‌ಎಸ್ ಮಿತ್ತಲ್ ಬಳಿಗೆ ಕರೆದುಕೊಂಡು ಹೋದರು. ಅವರು ನನ್ನನ್ನು ನಿಲ್ಲಿಸಿ ನಿಂದಿಸಿದರು. ನೀನೊಬ್ಬ ಅಪರಾಧಿ. ನಿನ್ನನ್ನು ಈಗಲೇ ಬಂಧಿಸುತ್ತೇನೆ. ಇಡಿ ಬಗ್ಗೆ ನಿನಗೆ ಗೊತ್ತಿಲ್ಲ. 2-3 ವರ್ಷ ಬೇಲ್ ಸಿಗುವುದಿಲ್ಲ. ನಿನ್ನ ಹೇಳಿಕೆ ಓದಿದ್ದೇನೆ. ಇದು ಪ್ರಯೋಜನಕ್ಕೆ ಬರುವುದಿಲ್ಲ. ನಿನಗೆ ಇಡಿ ಸಹಾಯ ಮಾಡಬೇಕೆಂದರೆ ನಾನು ಹೇಳಿದಂತೆ ಬರೆದುಕೊಡಬೇಕು. ಎಂ.ಜಿ.ರಸ್ತೆಯ ಖಾತೆಗೆ ಹಣ ವರ್ಗಾವಣೆ ಮಾಡಲು ಸಿಎಂ ಸರ್, ನಾಗೇಂದ್ರ ಸರ್ ಮತ್ತು ಎ್ಡಿ ನಿರ್ದೇಶನದಂತೆ ಮಾಡಿರುತ್ತೇನೆ. ಅವರ ಒತ್ತಡ ಇತ್ತು ಎಂದು ಬರೆದುಕೊಡು. ಇಲ್ಲವಾದರೆ ಏಳು ವರ್ಷ ಜೈಲು ಶಿಕ್ಷೆ ಆಗುವವರೆಗೂ ಬಿಡುವುದಿಲ್ಲ ಎಂದು ನಿಂದಿಸಿದರು.

ಸ್ವಲ್ಪ ಹೊತ್ತಿನ ನಂತರ ಮತ್ತೆ ಅವರಿಬ್ಬರು ಇದ್ದ ಚೇಂಬರ್‌ಗೆ ಕರೆದುಕೊಂಡು ಬಂದು ಬಂಧಿಸುವ ಬಗ್ಗೆ ಚರ್ಚೆ ನಡೆಸಿದ್ದರು. ಕೊನೆಗೆ ಮುರುಳಿ ಕಣ್ಣನ್, ಇವತ್ತು ಬೇಡ. ಜು.18ಕ್ಕೆ ಬಂದಾಗ ಬಂಧಿಸೋಣ ಎಂದು ಹೇಳಿದರು. ಆದ್ದರಿಂದ ತಪ್ಪು ಮಾಡದಿದ್ದರೂ ಮಿತ್ತಲ್ ಮತ್ತು ಮುರುಳಿ ಕಣ್ಣನ್ ನನಗೆ ಬೆದರಿಸಿ ಸಿಎಂ, ನಾಗೇಂದ್ರ ಮತ್ತು ಹಣಕಾಸು ಇಲಾಖೆ ಹೆಸರು ಹೇಳಿಸಲು ಪ್ರಯತ್ನಿಸಿದರು ಎಂದು ದೂರಿನಲ್ಲಿ ಕಲ್ಲೇಶ್ ಆರೋಪಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net