ಸಿಇಟಿ ಸೀಟು ಬಿಟ್ಟರೆ ಲಕ್ಷಾಂತರ ರೂಪಾಯಿ ದಂಡ; ವಿದ್ಯಾರ್ಥಿಗಳಿಗೆ ನೀಟ್ ಸಂಕಷ್ಟ..

Neet
Published on

ಬೆಂಗಳೂರು: ನೀಟ್ ಕೌನ್ಸೆಲಿಂಗ್​ಗೆ ಹಾಜರಾಗಿ ಸೀಟು ಪಡೆಯುವ ಅಭ್ಯರ್ಥಿಗಳು ನಾಳೆಯಿಂದ ಇಂಜಿನಿಯರಿಂಗ್ ಸೀಟ್ ತ್ಯಜಿಸಿದರೆ ಲಕ್ಷಾಂತರ ರೂ. ದಂಡ ಪಾವತಿಸಬೇಕಾಗುತ್ತದೆ. ಖಾಸಗಿ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಮೂಲಕ ಸೀಟು ಪಡೆದಿರುವ ವಿದ್ಯಾರ್ಥಿಗಳು 90 ಸಾವಿರ ರೂ. ಶುಲ್ಕ ಪಾವತಿಸಿದ್ದಾರೆ. ಈ ಸೀಟು ರದ್ದುಪಡಿಸಿಕೊಳ್ಳಲು ಭಾನುವಾರ ಕೊನೆಯ ದಿನವಾಗಿತ್ತು. ನಂತರ ರದ್ದು ಮಾಡಿದಲ್ಲಿ 4.50 ಲಕ್ಷ ರೂ. ದಂಡ ಪಾವತಿಸಬೇಕು. ರಾಜ್ಯ ಸರ್ಕಾರ ಸೀಟ್ ಬ್ಲಾಕಿಂಗ್ ತಡೆಯುವುದಕ್ಕಾಗಿ ಕಳೆದ ವರ್ಷದಿಂದ ಹೊಸ ನಿಯಮ ಜಾರಿಗೆ ತಂದಿದೆ. ನಿಗದಿತ ಅವಧಿಯ ನಂತರ ಸೀಟು ರದ್ದು ಮಾಡಿಕೊಂಡರೆ, ಶುಲ್ಕದ 5 ಪಟ್ಟು ಪಾವತಿಸಬೇಕೆಂದು ನಿಯಮವಿದೆ. ಕಳೆದ ವರ್ಷ 200 ವಿದ್ಯಾರ್ಥಿಗಳು ಅನಿವಾರ್ಯವಾಗಿ 5 ಪಟ್ಟು ದಂಡ ಪಾವತಿಸಿದ್ದಾರೆ.

ಈ ಮೊದಲು ಸೀಟು ಪಡೆದು, ನಿಗದಿತ ಅವಧಿಯಲ್ಲಿ ಹಿಂತಿರುಗಿಸಿ ನೀಡಿದರೆ, ಪ್ರಕ್ರಿಯಾ ಶುಲ್ಕವಾಗಿ 5 ಸಾವಿರ ರೂ. ಮಾತ್ರ ಕಡಿತ ಮಾಡಿ ಆನಂತರ ಉಳಿದ ಹಣ ಹಿಂತಿರುಗಿಸುತ್ತಿತ್ತು. ದಂಡ ಪಾವತಿಸಬೇಕಿರಲಿಲ್ಲ. ಆದರೆ, ಇದನ್ನೇ ಲಾಭ ಮಾಡಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು ಕೊನೇ ಕ್ಷಣದಲ್ಲಿ ಸೀಟು ತೊರೆಯುತ್ತಿದ್ದರು. ಇದರಿಂದ ಉತ್ತಮ ಕಾಲೇಜುಗಳಲ್ಲಿ ಬ್ಲಾಕ್ ಆಗಿದ್ದ ಸೀಟುಗಳು ವಿದ್ಯಾರ್ಥಿಗಳಿಂದ ಕೈ ತಪ್ಪುತ್ತಿದ್ದವು. ನೀಟ್ ಕೌನ್ಸೆಲಿಂಗ್ ಗೊಂದಲದಲ್ಲಿದ್ದು, ಈವರೆಗೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟವಾಗಿಲ್ಲ. ನೀಟ್ ಪರೀಕ್ಷೆ ಬರೆದು ವೈದ್ಯಕೀಯ ಸೀಟು ಹಂಚಿಕೆಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಅನಿವಾರ್ಯವಾಗಿ ಇಂಜಿನಿಯರಿಂಗ್, ಪಶುವೈದ್ಯಕೀಯ, ಕೃಷಿ ಇತ್ಯಾದಿ ಕೋರ್ಸ್​ಗಳಿಗೆ ಪ್ರವೇಶ ಪಡೆದಿದ್ದಾರೆ. ಕೆಇಎ ಎರಡು ಸುತ್ತಿನ ಸೀಟು ಹಂಚಿಕೆ ಮುಗಿಸಿದೆ. ಅಲ್ಲದೆ, ಇಂಜಿನಿಯರಿಂಗ್ ಕೋರ್ಸ್​ಗಳಿಗೆ ಪ್ರವೇಶ ಪಡೆಯಲು ಡಿ.31 ಕೊನೆಯ ದಿನವೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಮಾಪ್​ಅಪ್ ರೌಂಡ್: ದಂಡ ಶುಲ್ಕದಿಂದ ತಪ್ಪಿಸಿಕೊಳ್ಳಬೇಕಾದರೆ, ಕೇಂದ್ರ ಸರ್ಕಾರ ಇಂಜಿನಿಯರಿಂಗ್ ಪ್ರವೇಶಕ್ಕೆ ನಿಗದಿ ಪಡಿಸಿರುವ ಕೊನೆಯ ದಿನ ವಿಸ್ತರಿಸಬೇಕು. ಅಲ್ಲದೆ ಮಾಪ್​ಅಪ್ ರೌಂಡ್ ನೆಡಸಲು ಅನುಮತಿ ನೀಡಬೇಕು. ಕೆಇಎ ಈಗಾಗಲೇ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಅನುಮತಿ ಕೇಳಿತ್ತು. ಸುಪ್ರೀಂಕೋರ್ಟ್ ನೀಡಿರುವ ದಿನಾಂಕ ವಿಸ್ತರಣೆ ಮಾಡದ ಹೊರತು ಮಾಪ್​ಅಪ್ ರೌಂಡ್ ನೀಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅನುಮತಿಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ, ಈವರೆಗೆ ಪ್ರತಿಕ್ರಿಯೆ ಸಿಕ್ಕಿಲ್ಲ.

ನಿಗದಿತ ಸಮಯದಲ್ಲಿ ಸೀಟು ಸಲ್ಲಿಕೆ ಮಾಡದಿದ್ದರೆ, 5 ಪಟ್ಟು ಹೆಚ್ಚಿನ ಶುಲ್ಕ ಪಾವತಿಸಬೇಕು. ಮಾಪ್​ಅಪ್​ಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಅನುಮತಿ ನೀಡಿದರೆ, ಪಾವತಿಸುವ ಅವಶ್ಯಕತೆ ಇರುವುದಿಲ್ಲ. | ಎಸ್.ರಮ್ಯಾ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net