ಕಳ್ಳರ ಹುಡುಕಿದ ಫೈಂಡ್ ಮೈ ಡಿವೈಸ್

Mobile Phone
Published on

ಬೆಂಗಳೂರು: ಒಂಟಿಯಾಗಿ ಓಡಾಡುವರನ್ನು ಅಡ್ಡಗಟ್ಟಿ ಮೊಬೈಲ್ ಸುಲಿಗೆ ಮಾಡುತ್ತಿದ್ದ ಇಬ್ಬರು ಕಳ್ಳರು ಮತ್ತು ಕದ್ದ ಖರೀದಿಸುತ್ತಿದ್ದ ಮೂವರು ಸೇರಿ ಐವರನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಪೀಣ್ಯದ ಪಾರ್ವತಿನಗರದ ಮೊಹಮ್ಮದ್ ಫಾರೂಕ್ (36) ಮತ್ತು ಜಗಜೀವನ್‌ರಾಂನಗರದ ಸೈಯದ್ ಪರ್ವೀಜ್ (25) ಮತ್ತು ಕದ್ದ ಮೊಬೈಲ್ ಖರೀದಿಸುತ್ತಿದ್ದ ಸುಧಾಮನಗರದ ರೆಹಮಾನ್ (31), ಸೈಯದ್ ಜಮೀರ್ (26), ಸೈಯದ್ ಹಾಷಿಮ್ (46) ಬಂಧಿತರು. ಆರೋಪಿಗಳಿಂದ 6.31 ಲಕ್ಷ ರೂ. ಮೌಲ್ಯದ 32 ಮೊಬೈಲ್‌ಗಳನ್ನು ವಶಕ್ಕೆ ಪಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಏ.23ರಂದು ನಾಗರಬಾವಿ ಸಮೀಪದ ಸುವರ್ಣ ಲೇಔಟ್ ಪಾರ್ಕ್ ಬಳಿ ಹರ್ಷ ಎಂಬುವರನ್ನು ಮೊಹಮ್ಮದ್ ಮತ್ತು ಸೈಯದ್ ಪರ್ವೀಜ್ ಅಡ್ಡಗಟ್ಟಿ ಮಾರಕಾಸಗಳಿಂದ ಬೆದರಿಸಿ ಐ-ಪೋನ್-14 ಪ್ರೊ ಸುಲಿಗೆ ಮಾಡಿದ್ದರು. ಚಂದ್ರಾ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿದ್ದರು.ದೂರುದಾರ ಹರ್ಷ ತಮ್ಮ ಮೊಬೈಲ್‌ಗೆ ಫೈಂಡ್ ಮೈ ಡಿವೈಸ್ ಅಪ್ಲಿಕೇಷನ್ ಹಾಕಿದ್ದರು. ಇತ್ತ ಕದ್ದ ಮೊಬೈಲ್ ಅನ್ನು ಮೊಹಮ್ಮದ್ ಫಾರೂಕ್, ಶಾಂತಿನಗರದ ಸುಧಾಮನಗರದಲ್ಲಿ ಮೊಬೈಲ್ ರಿಪೇರಿ ಅಂಗಡಿ ಮಾಲೀಕ ರೆಹಮಾನ್‌ಗೆ ಮಾರಾಟ ಮಾಡಿದ್ದ. ಇ-ಸಿಮ್ ಐಫೋನ್ ಎಂಬುದು ಗೊತ್ತಾಗಿ ರೆಹಮಾನ್, ಅದರ ಬಿಡಿಭಾಗಗಳನ್ನು ಬೇರ್ಪಡಿಸಿ ಮದರ್ ಬೋರ್ಡ್ ಅನ್ನು ತನ್ನ ಕಡೆ ಇಟ್ಟುಕೊಂಡು ಡಿಸ್‌ಪ್ಲೇಯನ್ನು ಸೈಯದ್ ಜಮೀರ್‌ಗೆ ಹಾಗೂ ಬ್ಯಾಕ್‌ಕೇಸ್ ಮತ್ತು ಬ್ಯಾಟರಿಯನ್ನು ಸೈಯದ್ ಹಾಷಿಮ್‌ಗೆ ಮಾರಾಟ ಮಾಡಿದ್ದ.

ಫೈಂಡ್ ಮೈ ಡಿವೈಸ್ ಅಪ್ಲಿಕೇಷನ್ ಸಹಾಯದಿಂದ ಮೊಬೈಲ್ ಕೊನೆಯ ಬಾರಿ ಎಲ್ಲಿ ಆ್ ಆಗಿದೆ ಎಂಬುದನ್ನು ಪತ್ತೆ ಮಾಡಿ ಪೊಲೀಸರಿಗೆ ಹರ್ಷ ಮಾಹಿತಿ ನೀಡಿದ್ದರು. ಈ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಸುಧಾಮನಗರಕ್ಕೆ ಹೋಗಿ ನೋಡಿದಾಗ ಆರೋಪಿ ಪತ್ತೆಯಾಗಿಲ್ಲ. ಮಾರನೇ ದಿನ ಹೋಗಿ ನೋಡಿದಾಗ ರೆಹಮಾನ್ ಬಿಡಿಭಾಗಗಳನ್ನು ಬಿಚ್ಚಿ ಬೇರೆಯವರಿಗೆ ಮಾರಾಟ ಮಾಡಿದ್ದು ಗೊತ್ತಾಗಿದೆ. ರೆಹಮಾನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇತರ ಆರೋಪಿಗಳ ಬಗ್ಗೆ ಬಾಯ್ಬಿಟ್ಟಿದ್ದ. ಇದರ ಮೇರೆಗೆ ಎಲ್ಲ ಆರೋಪಿಗಳನ್ನು ಬಂಧಿಸಿ 32 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ದಯಾನಂದ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net