

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಸ್ವಸಹಾಯ ಗುಂಪುಗಳ ಮೂಲಕ ಜೀವನ ಕಂಡುಕೊಂಡಿರುವ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಸಂಕ್ರಾಂತಿ ಸಂದರ್ಭದಲ್ಲಿ ಸಿಹಿ ಸುದ್ದಿ ಸಿಕ್ಕಿದೆ. ಇವರೆಲ್ಲರ ಜೀವನೋಪಾಯ ವೃದ್ಧಿಗೆ ಆದಾಯ ಹೆಚ್ಚಿಸುವ ಸಂಬಂಧ ರಾಜ್ಯ ಸರ್ಕಾರ ಜಾಗತಿಕ ಮಾರುಕಟ್ಟೆ ಕಂಡುಕೊಳ್ಳುವತ್ತ ಹೆಜ್ಜೆ ಇಟ್ಟಿದೆ. ಈ ಸಂಬಂಧ ಅಧ್ಯಯನ ನಡೆಸಿ ಕೆಲ ಕ್ರಮಗಳನ್ನು ಕೈಗೊಳ್ಳುತ್ತಿದೆ.
‘ಜೀವನೋಪಾಯ ಅಭಿಯಾನ’ದ ಮೂಲಕ ಗ್ರಾಮೀಣ ಮತ್ತು ನಗರ ಸ್ವಸಹಾಯ ಗುಂಪುಗಳಲ್ಲಿರುವ ಮಹಿಳೆಯರ ಆರ್ಥಿಕ ಸ್ಥಿತಿಗತಿ ಬಗ್ಗೆ ನಡೆದ ಅಧ್ಯಯನದಲ್ಲಿ ಆತಂಕಕಾರಿ ಸಂಗತಿ ಹೊರಬಿದ್ದಿರುವುದರಿಂದ ಮಹಿಳೆಯರ ಜೀವನ ಮಟ್ಟ ವೃದ್ಧಿಸಲು ಪ್ರಮುಖವಾಗಿ ಮಾರುಕಟ್ಟೆ ಲಭ್ಯತೆ ಹೆಚ್ಚಿಸುವುದರ ಕಡೆ ಗಮನ ಹರಿಸಲಾಗುತ್ತಿದೆ. ಸಾಮಾಜಿಕ, ಆರ್ಥಿಕ ಸ್ಥಿತಿ ಬದಲಾವಣೆ ಉದ್ದೇಶದಿಂದ ಸ್ವಸಹಾಯ ಸಂಘಗಳನ್ನು ರಚಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಕೃಷಿ, ಕೃಷಿಯೇತರ ಚಟುವಟಿಕೆಗಳಿಗೆ ನೆರವು ನೀಡಲಾಗುತ್ತದೆ. ಅದರ ಜತೆಗೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವಿವಿಧ ಉತ್ಪನ್ನಗಳ ತಯಾರಿ ಮೂಲಕ ಮಾರುಕಟ್ಟೆ ಒದಗಿಸುವ ಪ್ರಯತ್ನ ನಡೆದಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯ ಸಿಕ್ಕಿಲ್ಲ.
ಜಾಗತಿಕ ಮಾರುಕಟ್ಟೆ: ದೇಶ, ವಿದೇಶದಲ್ಲಿ ಸ್ವಸಹಾಯ ಸಂಘಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶವನ್ನು ಜೀವನೋಪಾಯ ಅಭಿಯಾನ ಹೊಂದಿದೆ. ಅದಕ್ಕಾಗಿ ವಿವಿಧ ಇ-ಕಾಮರ್ಸ್ ವೇದಿಕೆಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ತಿಂಗಳ ಅಂತ್ಯದೊಳಗೆ 50 ಉತ್ಪನ್ನಗಳು ದೊರಕುವಂತೆ ಮಾಡುವ ಪ್ರಯತ್ನ ನಡೆದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪದಾರ್ಥಗಳು ಸಿಗುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಎಷ್ಟು ಗುಂಪು? ಕುಟುಂಬ?: ಗ್ರಾಮೀಣ ಭಾಗದಲ್ಲಿ 2.01 ಲಕ್ಷ ಸ್ವಸಹಾಯ ಗುಂಪುಗಳಿದ್ದು, 28 ಲಕ್ಷ ಕುಟುಂಬಗಳು ಅವಲಂಬಿತವಾಗಿವೆ. 6 ತಿಂಗಳಲ್ಲಿ ಕುಟುಂಬಗಳ ಸಂಖ್ಯೆ 32 ಲಕ್ಷಕ್ಕೆ ಏರಿಕೆಯಾಗಲಿವೆ.
ನಗರ ಪ್ರದೇಶದಲ್ಲಿ 20 ಸಾವಿರ ಗುಂಪುಗಳಿದ್ದು 2.32 ಲಕ್ಷ ಕುಟುಂಬ ಅವಲಂಬಿತವಾಗಿವೆ. ನಗರ, ಗ್ರಾಮೀಣ ಪ್ರದೇಶದಲ್ಲಿ ಇವುಗಳ ಸಂಖ್ಯೆ ಹೆಚ್ಚಿಸುವುದು ಜೀವನೋಪಾಯ ಮಿಷನ್ನ ಉದ್ದೇಶವೂ ಆಗಿದೆ. ಪರಿಶಿಷ್ಟ ಜಾತಿ, ವರ್ಗಗಳ ಗುಂಪುಗಳಿಗೆ 1.25 ಲಕ್ಷ ರೂ. ಹಾಗೂ ಇತರ ವರ್ಗಗಳಿಗೆ 75 ಸಾವಿರ ರೂ. ದುಡಿಯವ ಬಂಡವಾಳ ನೀಡಲಾಗುತ್ತದೆ. ಬ್ಯಾಂಕ್ಗಳಿಂದ ಸಾಲ ಪಡೆಯಲು ಶೇ.4ರ ಬಡ್ಡಿದರ ನಿಗದಿ ಮಾಡಲಾಗಿದೆ.
ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಇಂದಿನ ಅಗತ್ಯಕ್ಕೆ ತಕ್ಕಂತೆ ಕೌಶಲ ನೀಡಿ, ಆರ್ಥಿಕವಾಗಿ ಸಬಲರಾಗುವಂತೆ ಮಾಡಲಾಗುವುದು. ಅದಕ್ಕಾಗಿ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಇದರಿಂದ ಲಕ್ಷಾಂತರ ಕುಟುಂಬಗಳಿಗೆ ಅನುಕೂಲವಾಗುತ್ತದೆ. | ಡಾ. ಸಿ.ಎನ್. ಅಶ್ವತ್ಥನಾರಾಯಣ ಉನ್ನತ ಶಿಕ್ಷಣ ಮತ್ತು ಜೀವನೋಪಾಯ ಸಚಿವ
ಸ್ವಸಹಾಯ ಗುಂಪುಗಳ ಮಹಿಳೆಯರನ್ನು ಸಾಮಾಜಿಕ ಬದಲಾವಣೆಗೂ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಪ್ರತಿ ಗ್ರಾಪಂಗಳಿಗೆ ಇಬ್ಬರು ಸಖಿಯರನ್ನು ನೇಮಕ ಮಾಡಲಾಗುತ್ತದೆ. ಒಬ್ಬರು ಬ್ಯಾಂಕಿಂಗ್ ಕರೆಸ್ಪಾಂಡೆನ್ಸ್ ಸಖಿಯಾದರೆ, ಇನ್ನೊಬ್ಬರು ಡಿಜಿಟಲ್ ಸಖಿಯಾಗಿರುತ್ತಾರೆ. ಆ ಮೂಲಕ ಅವರಿಗೆ ಸ್ವ ಉದ್ಯೋಗ ಒದಗಿಸಿದಂತಾಗುತ್ತದೆ. ವರದಕ್ಷಿಣೆ, ಲೈಂಗಿಕ ಕಿರುಕುಳ, ಬಾಲ್ಯ ವಿವಾಹಗಳ ಬಗ್ಗೆ ಜಾಗೃತಿ ಮೂಡಿಸುವುದು, ಎಲ್ಲರನ್ನು ಆರ್ಥಿಕವಾಗಿ ಒಳಗೊಳ್ಳುವಂತೆ ಮಾಡಲು ಉಳಿತಾಯ, ಬ್ಯಾಂಕ್ ಜಾಗೃತಿ, ಸಾಲ ಪಡೆಯುವಿಕೆ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಡಿಜಿಟಲ್ ಸಖಿ ಮಾಡಲಿದ್ದಾರೆ. ಬ್ಯಾಂಕಿಂಗ್ ಕರೆಸ್ಪಾಂಡೆನ್ಸ್ ಸಖಿ ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಮೂಲಕ ಅರ್ಜಿ ಹಾಕಿಸಿ ಸಾಲ ಕೊಡಿಸುವುದು, ವಿಮೆ ಮಾಡಿಸುವುದು, ಬ್ಯಾಂಕಿನ ಸೌಲಭ್ಯಗಳನ್ನು ಪಡೆಯುವಂತೆ ಮಾಡುವ ಕಾರ್ಯ ಮಾಡಲಿದ್ದಾರೆ. ಡೈರಿಗೆ ಹಾಲು ಹಾಕಿಸಿ ಹಣ ಕೊಡಿಸುವುದು, ಆಧಾರ್ ಆಧಾರಿತ ಸೌಲಭ್ಯ ದೊರಕಿಸಿಕೊಡುವುದು, ನರೇಗಾ ಕೂಲಿ ಸಿಗುವಂತೆ ಮಾಡುವುದು ಹೀಗೆ ವಿವಿಧ ಕೆಲಸ ನಿಗದಿ ಮಾಡಲಾಗುತ್ತದೆ. ಮಾರ್ಚ್ ಅಂತ್ಯದೊಳಗೆ 3000 ಜನರನ್ನು ನೇಮಕ ಮಾಡಲಾಗುತ್ತದೆ. ಇವರು ತಮ್ಮ ಸೇವೆಗೆ ಶುಲ್ಕ ಪಡೆಯಬೇಕು. ಸರ್ಕಾರದಿಂದ ಗೌರವಧನ ಇರುವುದಿಲ್ಲ. ಆದರೆ ಸುಮಾರು 12 ಸಾವಿರಕ್ಕೂ ಹೆಚ್ಚು ಜನರಿಗೆ ಸ್ವ ಉದ್ಯೋಗ ಸಿಕ್ಕಂತೆ ಆಗುತ್ತದೆ.
ಮಹಿಳೆಯರ ಜೀವನಮಟ್ಟ ಸುಧಾರಣೆ ಮಾಡಬೇಕಾಗಿದೆ. ಅವರು ತಯಾರಿಸುವ ಉತ್ಪನ್ನಗಳಿಗೆ ಇ-ಕಾಮರ್ಸ್ ವೇದಿಕೆಯಲ್ಲದೆ, ವಿವಿಧ ಉತ್ಸವಗಳಲ್ಲೂ ಮಾರುಕಟ್ಟೆ ಒದಗಿಸುತ್ತೇವೆ. ರಾಜ್ಯ ಹೇಗಿದ್ದರೂ ಸ್ಟಾರ್ಟಪ್ ರಾಜಧಾನಿಯಾಗಿದೆ. ಅದರ ನೆರವನ್ನು ಬಳಸಿಕೊಳ್ಳುತ್ತೇವೆ. | ಎನ್. ಮಂಜುಶ್ರೀ ನಿರ್ದೇಶಕರು, ಜೀವನೋಪಾಯ ಅಭಿಯಾನ
· ಸ್ವಸಹಾಯ ಗುಂಪುಗಳ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ
· ಮಾಸಾಂತ್ಯಕ್ಕೆ 50 ಉತ್ಪನ್ನ ಇ-ಕಾಮರ್ಸ್ ವೇದಿಕೆಯಲ್ಲಿ ಲಭ್ಯ
ಕೌಶಲ ತರಬೇತಿಗೆ ಅನುದಾನ: ಸ್ವಸಹಾಯ ಗುಂಪು ಗಳಲ್ಲಿ ಸರ್ವೆ ಮಾಡಿರುವ ಪ್ರಕಾರ ಕೌಶಲ ಕಡಿಮೆ ಇದೆ. ಆದ್ದರಿಂದ ಚನ್ನಪಟ್ಟಣ ಗೊಂಬೆ, ಕಿನ್ನಾಳ ಕಲೆ, ಬಾಗಲಕೋಟೆಯ ಸೆಣಬಿನ ಚೀಲ, ಕರಕುಶಲ ವಸ್ತುಗಳ ತಯಾರಿಕೆಯ ಬಗ್ಗೆ ತರಬೇತಿ ನೀಡಿ ಸಿದ್ಧಗೊಳಿಸಲು ಸರ್ಕಾರ 5 ಕೋಟಿ ರೂ.ಗಳ ತನಕ ಅನುದಾನ ಮೀಸಲಿರಿಸಿದೆ.
ಏನಾಗಿದೆ ಪರಿಸ್ಥಿತಿ?: ಸ್ವಸಹಾಯ ಗುಂಪುಗಳಲ್ಲಿರುವ ಮಹಿಳೆಯರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟ ಸ್ಥಿತಿಯಲ್ಲಿದೆ. ಪ್ರತಿ ತಿಂಗಳಿಗೆ 3 ಸಾವಿರ ರೂ.ಗಿಂತ ಹೆಚ್ಚಿನ ಆದಾಯವಿಲ್ಲ. ಬಹುತೇಕ ಕುಟುಂಬಗಳಿಗೆ ಮಹಿಳೆಯೇ ಆಧಾರಸ್ತಂಭವಾಗಿದ್ದಾರೆ. ಅಧ್ಯಯ ನದ ಪ್ರಕಾರ ಜೀವನಮಟ್ಟ ಸುಧಾರಣೆಗೆ ಕನಿಷ್ಠ 10 ಸಾವಿರ ರೂ. ಮಾಸಿಕ ಆದಾಯವನ್ನು ನಿರೀಕ್ಷೆ ಮಾಡುತ್ತಿದ್ದಾರೆ.
ಯಾವೆಲ್ಲ ಉತ್ಪನ್ನಗಳು ಲಭ್ಯ?: ಕರಕುಶಲ ವಸ್ತು, ಆಟಿಕೆ, ಚರ್ಮದ ಉತ್ಪನ್ನ, ಸೆಣಬಿನ ಚೀಲ ಇತರ ಉತ್ಪನ್ನ, ರಾಗಿಮಾಲ್ಟ್, ವಿವಿಧ ಚಟ್ನಿಪುಡಿ, ಮಸಾಲೆ ಪದಾರ್ಥಗಳು, ತೋರಣ, ಒಳಾಂಗಣ ಅಲಂಕಾರಿಕ ವಸ್ತುಗಳು, ತಿಂಡಿ ಪದಾರ್ಥಗಳು, ನ್ಯೂಟ್ರಿಷನ್ ಮಿಕ್ಸ್ ಸೇರಿ 50ಕ್ಕೂ ಹೆಚ್ಚಿನ ಪದಾರ್ಥಗಳು ಇ-ಕಾಮರ್ಸ್ ವೇದಿಕೆಗಳಲ್ಲಿ ಲಭ್ಯವಾಗಲಿವೆ. ವಿವಿಧ ಇ-ಕಾಮರ್ಸ್ ವೇದಿಕೆಗಳಲ್ಲಿ ಸ್ವಸಹಾಯ ಗುಂಪುಗಳ ಉತ್ಪನ್ನಗಳ ನೋಂದಣಿ ಕಾರ್ಯವೂ ನಡೆದಿದೆ. ಇದರ ಜತೆಗೆ ಅಲ್ಲಲ್ಲಿ ಮೇಳಗಳ ಮೂಲಕವೂ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಪ್ರಯತ್ನ ನಡೆದಿದೆ.