ವಿತ್ತ ಶಕ್ತಿಕೇಂದ್ರ

banks
Published on

ಕನ್ನಡ ಜಿಲ್ಲೆಯನ್ನು ಬ್ಯಾಂಕಿಂಗ್ ಕ್ಷೇತ್ರದ ತವರು, ಬ್ಯಾಂಕ್​ಗಳ ತೊಟ್ಟಿಲು ಎಂದು ಕರೆಯಲಾಗುತ್ತದೆ. ದೇಶದ ಪ್ರಮುಖ ಬ್ಯಾಂಕ್​ಗಳ ಪೈಕಿ ಏಳು ಬ್ಯಾಂಕ್​ಗಳು ಕರ್ನಾಟಕದಲ್ಲಿ ಹುಟ್ಟಿಕೊಂಡಿವೆ. ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾಪೋರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ವೈಶ್ಯ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು. ಇದರಲ್ಲಿ ಮೊದಲ ಐದು ಬ್ಯಾಂಕ್​ಗಳ ತವರು ಕರಾವಳಿ ಜಿಲ್ಲೆಯಾಗಿದೆ.

ವಿಜಯಾ ಬ್ಯಾಂಕ್: ವಿಜಯಾ ಬ್ಯಾಂಕ್ 1931ರ ಅಕ್ಟೋಬರ್ 23ರಂದು ಸ್ಥಾಪನೆಯಾಯಿತು. ಅತ್ತಾವರ ಬಾಲಕೃಷ್ಣ ಶೆಟ್ಟಿ (ಎ.ಬಿ.ಶೆಟ್ಟಿ) 5 ಲಕ್ಷ ರೂ. ಬಂಡವಾಳದಲ್ಲಿ ಈ ಬ್ಯಾಂಕನ್ನು ಸ್ಥಾಪಿಸಿದರು. 14 ಮಂದಿ ಬಂಟ ಸಮುದಾಯದವರು ಸೇರಿ ಸ್ಥಾಪಿಸಿದ ವಿಜಯಾ ಬ್ಯಾಂಕ್ 1958ರಲ್ಲಿ ಶೆಡ್ಯೂಲ್ಡ್ ಬ್ಯಾಂಕ್ ಆಗಿ ಪರಿವರ್ತನೆಗೊಂಡಿತು. 1963ರಲ್ಲಿ ಇತರ 9 ಸಣ್ಣ ಬ್ಯಾಂಕ್​ಗಳನ್ನು ವಿಲೀನಗೊಳಿಸಿ ಅಖಿಲ ಭಾರತ ಬ್ಯಾಂಕ್ ಆಗಿ ರೂಪುಗೊಂಡಿತು. 1965ರಲ್ಲಿ ಸಂಯುಕ್ತ ಲೋಗೋವನ್ನು ಹೊಂದಿತು. 1980ರ ಏಪ್ರಿಲ್ 15ರಂದು ಈ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕ್ ಆಯಿತು. 2019ರಲ್ಲಿ ವಿಜಯಾ ಬ್ಯಾಂಕ್​ನ್ನು ಕೇಂದ್ರ ಸರ್ಕಾರ ಬ್ಯಾಂಕ್ ಆಫ್ ಬರೋಡಾ ಮತ್ತು ದೇನಾ ಬ್ಯಾಂಕ್​ನೊಂದಿಗೆ ವಿಲೀನ ಮಾಡಿತು.

ವೈಶ್ಯ ಬ್ಯಾಂಕ್: ಖಾಸಗಿ ರಂಗದ ಬ್ಯಾಂಕ್ ಆಗಿರುವ ವೈಶ್ಯ ಬ್ಯಾಂಕ್ 1930ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು. ಬಳಿಕ ಐಎನ್​ಜಿ ಬ್ಯಾಂಕ್ ಜತೆ ವಿಲೀನಗೊಂಡು ಐಎನ್​ಜಿ ವೈಶ್ಯ ಬ್ಯಾಂಕ್ ಆಗಿ ಪರಿವರ್ತನೆಯಾಯಿತು. ಐಎನ್​ಜಿ ವೈಶ್ಯ ಬ್ಯಾಂಕ್ ಮತ್ತೆ ಕೋಟಕ್ ಮಹೀಂದ್ರಾ ಬ್ಯಾಂಕ್ ಜತೆ 2008ರಲ್ಲಿ ವಿಲೀನಗೊಂಡು ಕಾರ್ಯಾಚರಿಸುತ್ತಿದೆ.

ಎಸ್​ಬಿಎಂ: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮೈಸೂರಿನ ಮಹಾರಾಜ ನಾಲ್ಕನೇ ಕೃಷ್ಣರಾಜ ಒಡೆಯರ್ ಅವರ ಪೋಷಣೆಯಲ್ಲಿ 1931ರ ಮೇ 19ರಂದು ‘ದಿ ಬ್ಯಾಂಕ್ ಆಫ್ ಮೈಸೂರು ಲಿಮಿಟೆಡ್’ ಹೆಸರಿನಲ್ಲಿ ಆರಂಭಗೊಂಡಿತು. ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಈ ಬ್ಯಾಂಕನ್ನು ಸ್ಥಾಪಿಸಿದರು. 20 ಲಕ್ಷ ರೂ. ಬಂಡವಾಳದಲ್ಲಿ ಆರಂಭವಾದ ಈ ಬ್ಯಾಂಕ್ 1953ರಲ್ಲಿ ಮೈಸೂರು ಬ್ಯಾಂಕ್ ಆಗಿ ನಾಮಾಂಕಿತವಾಗಿ ಸಾರ್ವಜನಿಕ ರಂಗದ ಬ್ಯಾಂಕ್ ಆಗಿ ಪರಿವರ್ತನೆಗೊಂಡಿತು. ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದ ಎಸ್​ಬಿಎಂ ಇತರ ಆರು ಸಹವರ್ತಿ ಬ್ಯಾಂಕ್​ಗಳ ಜತೆಗೆ 2017ರ ಏಪ್ರಿಲ್ 1ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜತೆಗೆ ವಿಲೀನಗೊಂಡಿತು.

ಕೆನರಾ ಬ್ಯಾಂಕ್: ಅಮ್ಮೆಂಬಳ ಸುಬ್ಬಾ ರಾವ್ ಪೈ 1906ರ ಜುಲೈ 1ರಂದು ಮಂಗಳೂರಿನಲ್ಲಿ ಕೆನರಾ ಹಿಂದು ಹೆಸರಿನಲ್ಲಿ ನೋಂದಣಿ ಮಾಡಿಸಿದ್ದರು. 1920ರಲ್ಲಿ ಕೆನರಾ ಬ್ಯಾಂಕ್ ಎಂದು ಹೆಸರು ಬದಲಾವಣೆಗೊಂಡು ಪರ್ಮನೆಂಟ್ ಫಂಡ್ ಲಿ. ಆಯಿತು. 1954ರಲ್ಲಿ ಆಡಳಿತ ಕಚೇರಿ ಬೆಂಗಳೂರಿಗೆ ಸ್ಥಳಾಂತರಗೊಂಡಿತು. 1969ರಲ್ಲಿ ಬ್ಯಾಂಕ್ ರಾಷ್ಟ್ರೀಕರಣಗೊಂಡಿತು. ಪ್ರಸ್ತುತ ಲಂಡನ್, ಹಾಂಕಾಂಗ್, ಮಾಸ್ಕೋ, ಶಾಂಘೖ, ದುಬೈ, ತಾಂಜಾನಿಯಾ, ನ್ಯೂಯಾರ್ಕ್​ಗಳಲ್ಲೂ ಕಚೇರಿಗಳನ್ನು ಹೊಂದಿರುವುದು ವಿಶೇಷ. ಕೆನರಾ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕನ್ನು ತನ್ನೊಡನೆ ಸೇರಿಸಿಕೊಂಡು ಮೂಲ ಹೆಸರಲ್ಲೇ ಉಳಿದುಕೊಂಡಿದೆ. ಬ್ಯಾಂಕು 2024-25ನೇ ಹಣಕಾಸು ವರ್ಷದಲ್ಲಿ ಎರಡನೇ ತ್ರೖೆಮಾಸಿಕ ಅವಧಿಯಲ್ಲಿ 4,014 ಕೋಟಿ ರೂ. ಲಾಭ ಗಳಿಸಿದೆ.

ಕರ್ಣಾಟಕ ಬ್ಯಾಂಕ್: ಬಿ.ಆರ್.ವ್ಯಾಸರಾಯಾಚಾರ್ ಅವರ ಅಧ್ಯಕ್ಷತೆಯಲ್ಲಿ 1924 ಫೆಬ್ರವರಿ 18ರಂದು 11,580 ರೂ. ಬಂಡವಾಳದೊಂದಿಗೆ ಕರ್ಣಾಟಕ ಬ್ಯಾಂಕ್ ಸ್ಥಾಪನೆಗೊಂಡಿತು. ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಈ ಖಾಸಗಿ ಬ್ಯಾಂಕ್ ದೇಶದಲ್ಲಿ ಆರ್ಥಿಕ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ನವವಿಕ್ರಮ ಸಾಧಿಸಿದೆ. 1945ರಲ್ಲಿ ಕೆ.ಸೂರ್ಯನಾರಾಯಣ ಅಡಿಗ ನಿರ್ದೇಶಕ ಮಂಡಳಿ ಸದಸ್ಯರಾಗಿ ಬಳಿಕ ಅಧ್ಯಕ್ಷರಾಗಿ ಕರ್ಣಾಟಕ ಬ್ಯಾಂಕ್​ನ ಬೆಳವಣಿಗೆಗೆ ಕಾರಣರಾದರು. ಆ ಬಳಿಕ ಅಧ್ಯಕ್ಷರಾಗಿ ಕೆಲಸ ಮಾಡಿದ ವರೆಲ್ಲರೂ ಬ್ಯಾಂಕ್ ಪ್ರಗತಿ ಪಥದಲ್ಲಿ ಸಾಗುವಲ್ಲಿ ಅವಿರತ ಶ್ರಮಿಸಿದ್ದಾರೆ. ಪ್ರಸ್ತುತ 22 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 915 ಶಾಖೆಗಳಿವೆ.

ಕಾರ್ಪ್ ಬ್ಯಾಂಕ್: ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಶಿಂ ಸಾಹೇಬ್ ಬಹದ್ದೂರ್ ಅವರು ಉಡುಪಿಯಲ್ಲಿ ದಿ ಕೆನರಾ ಬ್ಯಾಂಕಿಂಗ್ ಕಾಪೋರೇಶನ್(ಉಡುಪಿ) ಲಿಮಿಟೆಡ್​ನ್ನು 1906ರ ಮಾರ್ಚ್ 12ರಂದು ಸ್ಥಾಪಿಸಿದರು. ಇದು 1972ರಲ್ಲಿ ಕಾಪೋರೇಶನ್ ಬ್ಯಾಂಕ್ ಎಂದು ಹೆಸರು ಬದಲಿಸಿಕೊಂಡಿತು. 2020 ಏಪ್ರಿಲ್ 1ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜತೆ ವಿಲೀನವಾಯಿತು.

ಸಿಂಡ್ ಬ್ಯಾಂಕ್: ಉಡುಪಿಯಲ್ಲಿ ಉಪೇಂದ್ರ ಅನಂತ್ ಪೈ, ವಾಮನ್ ಕುಡ್ವ ಮತ್ತು ಡಾ.ಟಿ.ಎಂ.ಎ ಪೈ ಅವರು ಕೆನರಾ ಇಂಡಸ್ಟ್ರಿಯಲ್ ಮತ್ತು ಬ್ಯಾಂಕಿಂಗ್ ಸಿಂಡಿಕೇಟ್ ಲಿಮಿಟೆಡನ್ನು 1925ರಲ್ಲಿ ಸ್ಥಾಪಿಸಿದರು. 1963ರಲ್ಲಿ ಸಿಂಡಿಕೇಟ್ ಬ್ಯಾಂಕ್ ಎಂಬ ಹೆಸರು ಬಂತು. 1969ರಲ್ಲಿ ರಾಷ್ಟ್ರೀಕರಣಗೊಂಡಿತು. ಇಂದು ಭಾರತ ಮಾತ್ರವಲ್ಲ ಲಂಡನ್, ದೋಹಾ ಸೇರಿದಂತೆ 4,000ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. ಸಿಂಡಿಕೇಟ್ ಬ್ಯಾಂಕು ಏಜೆಂಟರನ್ನು ನೇಮಿಸಿಕೊಂಡು ಅವರ ಮೂಲಕ ಪ್ರತಿದಿನ ಉಡುಪಿ-ಮಂಗಳೂರಿನ ಹಳ್ಳಿಗಳ ಜನರ ಮನೆಬಾಗಿಲಿಗೆ ಹೋಗಿ 2 ಆಣೆ ಸಂಗ್ರಹಿಸಿ, ಅವರ ಖಾತೆಗೆ ಜಮಾ ಮಾಡುವ ಪಿಗ್ಮಿ ಡೆಪಾಸಿಟ್ ಸ್ಕೀಂ ಹುಟ್ಟು ಹಾಕಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net