ಜುಲೈ 1ರಿಂದ ಹಲವು ಬದಲಾವಣೆ: ತತ್ಕಾಲ್, ಆಧಾರ್, ವಾಟ್ಸ್​ಆ್ಯಪ್​, ಕ್ರೆಡಿಟ್ ಕಾರ್ಡ್, ಜಿಎಸ್​ಟಿ, ಐಟಿ, ರೈಲುಯಾನಕ್ಕೆ ಅನ್ವಯ! Financial changes

Financial changes
Published on

Financial changes : ಭಾರತೀಯ ಗ್ರಾಹಕರು, ಅದರಲ್ಲೂ ವಿಶೇಷವಾಗಿ ರೈಲು ಪ್ರಯಾಣಿಕರು ಮತ್ತು ಬ್ಯಾಂಕ್ ಖಾತೆದಾರರು, 2025ರ ಜುಲೈ ತಿಂಗಳ ಆರಂಭದಿಂದ ಮಹತ್ವದ ಆರ್ಥಿಕ ಮತ್ತು ಸೇವಾ ಸಂಬಂಧಿ ಬದಲಾವಣೆಗಳಿಗೆ ಸಾಕ್ಷಿಯಾಗಲಿದ್ದಾರೆ. ಆಧಾರ್ ಆಧಾರಿತ ತತ್ಕಾಲ್ ಟಿಕೆಟ್ ಬುಕಿಂಗ್​ನಿಂದ ಹಿಡಿದು ಹೊಸ ಬ್ಯಾಂಕಿಂಗ್ ಶುಲ್ಕಗಳವರೆಗಿನ ಈ ಬದಲಾವಣೆಗಳು ಜನರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಬಹುದು.

ಆನ್​ಲೈನ್ ತತ್ಕಾಲ್ ಬುಕಿಂಗ್​ಗೆ ಆಧಾರ್ ಕಡ್ಡಾಯ

ಭಾರತೀಯ ರೈಲ್ವೆಯ ಐಆರ್​ಸಿಟಿಸಿ ವೆಬ್​ಸೈಟ್ ಮತ್ತು ಮೊಬೈಲ್ ಆಪ್ ಮೂಲಕ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡುವುದಕ್ಕೆ ಜುಲೈ 1ರಿಂದ ಆಧಾರ್ ದೃಢೀಕರಣ ಕಡ್ಡಾಯವಾಗಲಿದೆ. ಪ್ರಯಾಣಿಕರು ತಮ್ಮ ಐಆರ್​ಸಿಟಿಸಿ ಪೊ›ಫೈಲ್​ಗೆ ಆಧಾರ್ ಲಿಂಕ್ ಮಾಡಿ ದೃಢೀಕರಿಸಬೇಕು. ಜು. 15ರಿಂದ ಆನ್​ಲೈನ್​ನಲ್ಲಿ ಬುಕ್ ಮಾಡಲಾದ ಎಲ್ಲ ತತ್ಕಾಲ್ ಟಿಕೆಟ್​ಗಳಿಗೆ ಕಟ್ಟುನಿಟ್ಟಾಗಿ ಆಧಾರ್ ಆಧಾರಿತ ಒಟಿಪಿ ದೃಢೀಕರಣ ವ್ಯವಸ್ಥೆ ಜಾರಿಗೆ ಬರಲಿದೆ. ಇದರ ಜೊತೆಗೆ, ಬುಕಿಂಗ್ ವಿಂಡೋ ಆರಂಭವಾದ ಮೊದಲ 30 ನಿಮಿಷಗಳಲ್ಲಿ ಅಧಿಕೃತ ಏಜೆಂಟ್​ಗಳು ತತ್ಕಾಲ್ ಟಿಕೆಟ್ ಬುಕ್ ಮಾಡುವುದನ್ನು ನಿಷೇಧಿಸಲಾಗುವುದು. ಪಿಆರ್​ಎಸ್ ಕೌಂಟರ್​ಗಳಲ್ಲಿ ಮತ್ತು ಏಜೆಂಟ್​ಗಳ ಮೂಲಕ ಬುಕ್ ಮಾಡಲಾದ ತತ್ಕಾಲ್ ಟಿಕೆಟ್​ಗಳಿಗೂ ಜುಲೈ ಮಧ್ಯ ಭಾಗದಿಂದ ಒಟಿಪಿ ದೃಢೀಕರಣ ಅಗತ್ಯವಾಗಲಿದೆ.

ರೈಲ್ವೆ ಪ್ರಯಾಣ ದರ ಅತ್ಯಲ್ಪ ಏರಿಕೆ

ದೇಶಾದ್ಯಂತ ರೈಲು ಪ್ರಯಾಣ ದರವು ಜು. 1ರಿಂದ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಪ್ರತಿ ಕಿಲೋಮೀಟರ್​ಗೆ ಸಾಮಾನ್ಯ ರೈಲುಗಳ ಎರಡನೇ ಶ್ರೇಣಿ ಬೋಗಿಗಳಲ್ಲಿ ಅರ್ಧ ಪೈಸೆ, ಮೇಲ್ ಮತ್ತು ಎಕ್ಸ್​ಪ್ರೆಸ್ ರೈಲುಗಳ ಸ್ಲೀಪರ್ ಬೋಗಿಗಳಿಗೆ ಒಂದು ಪೈಸೆ, ಹವಾನಿಯಂತ್ರಿತ ಬೋಗಿಗಳಿಗೆ ಎರಡು ಪೈಸೆ ಏರಿಕೆಯಾಗುವ ಸಾಧ್ಯತೆ ಇದೆ. ಸಬರ್ಬನ್, ಸೀಸನ್ ಟಿಕೆಟ್ ಮತ್ತು 500 ಕಿಮೀ ಒಳಗಿನ ಪ್ರಯಾಣಕ್ಕೆ ಏರಿಕೆ ಇಲ್ಲ.

ಜಿಎಸ್​ಟಿ ನಿಯಮ ಬದಲಾವಣೆ

ನಮೂನೆ 3 ಬಿ ಮೂಲಕ ಜಿಎಸ್​ಟಿಯ ಮಾಸಿಕ ರಿಟರ್ನ್ ಸಲ್ಲಿಸಿದರೆ ಈವರೆಗೆ ಅದನ್ನು ಪರಿಷ್ಕರಿಸಲು ಅವಕಾಶವಿತ್ತು. ಆದರೆ ಜುಲೈನಿಂದ ಹಾಗೆ ಮಾಡಲು ಅವಕಾಶ ಇಲ್ಲ. 3 ವರ್ಷ ಬಾಕಿ ಉಳಿಸಿಕೊಂಡಿರುವ ತೆರಿಗೆ ಪಾವತಿದಾರರು ಮಾಸಿಕ ಅಥವಾ ವಾರ್ಷಿಕ ಜಿಎಸ್​ಟಿ ರಿಟರ್ನ್ಸ್ ಸಲ್ಲಿಸುವುದಕ್ಕೂ ಜುಲೈನಿಂದ ಅವಕಾಶ ನೀಡಲಾಗುವುದಿಲ್ಲ.

ಆಕ್ಸಿಸ್ ಬ್ಯಾಂಕ್​ನಿಂದ ಎಟಿಎಂ, ಖಾತೆ ಶುಲ್ಕ ಪರಿಷ್ಕರಣೆ

ಆಕ್ಸಿಸ್ ಬ್ಯಾಂಕ್ ಜು. 1ರಿಂದ ಉಳಿತಾಯ ಖಾತೆ, ಎನ್​ಆರ್​ಐ ಮತ್ತು ಟ್ರಸ್ಟ್ ಖಾತೆಗಳಿಗೆ ಪರಿಷ್ಕೃತ ಶುಲ್ಕಗಳನ್ನು ಜಾರಿಗೊಳಿಸಲಿದೆ. ಆಕ್ಸಿಸ್ ಮತ್ತು ಆಕ್ಸಿಸ್ ಅಲ್ಲದ ಎಟಿಎಂಗಳಲ್ಲಿ ಉಚಿತ ವಹಿವಾಟಿನ ಮಿತಿಯನ್ನು ದಾಟಿದ ಗ್ರಾಹಕರಿಗೆ ಪ್ರತಿ ವಹಿವಾಟಿಗೆ 23 ರೂ. ಶುಲ್ಕ ವಿಧಿಸಲಾಗುವುದು. ಇದು ಮೊದಲು 21 ರೂ. ಇತ್ತು.

ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಹೊಸ ಶುಲ್ಕ

ಕೆಲವು ಪ್ರಮುಖ ಬ್ಯಾಂಕ್​ಗಳು ತಮ್ಮ ಕ್ರೆಡಿಟ್ ಕಾರ್ಡ್ ಸೇವಾ ಶುಲ್ಕಗಳನ್ನು ಜು. 1ರಿಂದ ಪರಿಷ್ಕರಣೆ ಮಾಡಲಿವೆ. ಕೆಲವು ಸೇವೆಗಳಿಗೆ ಶೇ. 1ರಷ್ಟು, ಮಾಸಿಕ ಗರಿಷ್ಠ 4599 ರೂ. ಶುಲ್ಕ ವಿಧಿಸಲಾಗುತ್ತದೆ. ರಿವಾರ್ಡ್ ಪಾಯಿಂಟ್ಸ್​ನಲ್ಲೂ ಬದಲಾವಣೆ ಆಗಲಿವೆ.

ವಾಟ್ಸ್​ಆ್ಯಪ್​ ನಿಯಮ ಬದಲಾವಣೆ

ವಾಟ್ಸ್ಯಾಪ್​ನಲ್ಲಿ ವ್ಯಾಪಾರ ಉದ್ದೇಶದ ಸಂದೇಶಗಳನ್ನು ಕಳಿಸಲು ಜು. 1ರಿಂದ ಶುಲ್ಕ ವಿಧಿಸಲಾಗುವುದು. ಸಾಮಾನ್ಯ ಚಾಟ್​ಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಮೆಟಾ ಸಂಸ್ಥೆ ತಿಳಿಸಿದೆ.

ಐಸಿಐಸಿಐ ಬ್ಯಾಂಕ್​ನಿಂದ ಹೊಸ ಸೇವಾ ಶುಲ್ಕ

ಜು. 1ರಿಂದ ಮೆಟ್ರೋ ನಗರಗಳ ಎಟಿಎಂ ಬಳಕೆದಾರರು ಐಸಿಐಸಿಐ ಅಲ್ಲದ ಎಟಿಎಂಗಳಲ್ಲಿ 3 ಉಚಿತ ವಹಿವಾಟುಗಳನ್ನು ನಡೆಸಬಹುದು. ಆದರೆ ಮೆಟ್ರೋ ಅಲ್ಲದ ನಗರಗಳ ಗ್ರಾಹಕರಿಗೆ 5 ಉಚಿತ ವಹಿವಾಟುಗಳು ಲಭ್ಯವಿರುತ್ತವೆ. ಇದನ್ನು ದಾಟಿದರೆ, ಪ್ರತಿಯೊಂದು ಹಣಕಾಸಿನ ವಹಿವಾಟುಗಳಿಗೆ 23 ರೂ. ಮತ್ತು ಹಣಕಾಸೇತರ ವಹಿವಾಟುಗಳಿಗೆ 8.50 ರೂ. ಶುಲ್ಕ ವಿಧಿಸಲಾಗುವುದು. ಅಂತಾರಾಷ್ಟ್ರೀಯ ಎಟಿಎಂನಲ್ಲಿನ ವಿತ್​ಡ್ರಾಗೆ 125 ರೂ. ಮತ್ತು ಐಎಂಪಿಎಸ್ ವರ್ಗಾವಣೆಗೆ ನವೀಕೃತ ಶುಲ್ಕ ಜಾರಿಗೆ ಬರಲಿವೆ. ನಗದು ವಹಿವಾಟಿಗಾಗಿ ಉಚಿತ ಶಾಖೆ/ಸಿಆರ್​ಎಂ ಬಳಕೆಯನ್ನು ತಿಂಗಳಿಗೆ 3ಕ್ಕೆ ಸೀಮಿತ ಗೊಳಿಸಲಾಗುತ್ತಿದ್ದು, ಇದರ ನಂತರ ಪ್ರತಿ ವಹಿವಾಟಿಗೆ 150 ರೂ. ವಿಧಿಸಲಾಗುತ್ತದೆ.

ಸಣ್ಣ ಉಳಿತಾಯಗಳಲ್ಲಿ ಬದಲಾವಣೆ

ಜುಲೈನಿಂದ ಸೆಪ್ಟೆಂಬರ್​ವರೆಗಿನ ತ್ರೖೆಮಾಸಿಕ ಅವಧಿಗೆ ಅನ್ವಯವಾಗುವ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಸರ್ಕಾರ ಜು. 1ರಂದು ಘೊಷಿಸುವ ಸಾಧ್ಯತೆ ಇದೆ.

ಆದಾಯ ತೆರಿಗೆ ರಿಟರ್ನ್ ಗಡುವು ವಿಸ್ತರಣೆ

ಸಿಬಿಡಿಟಿ 2025-26ನೇ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವು ಜು. 31 ಇದ್ದಿದ್ದನ್ನು ಸೆ. 15ರವರೆಗೆ ವಿಸ್ತರಿಸಿದೆ. ಈ ವಿಸ್ತರಣೆಯಿಂದ ವೇತನದಾರರಿಗೆ ರಿಟರ್ನ್ ಸಲ್ಲಿಸಲು ಹೆಚ್ಚುವರಿಯಾಗಿ 46 ದಿನಗಳು ಲಭ್ಯವಾಗಲಿವೆ. ಆದರೆ, ಆದಾಯ ತೆರಿಗೆ ಪೋರ್ಟಲ್​ನಲ್ಲಿ ಗಡುವಿನ ದಿನಾಂಕದ ಸಮೀಪದಲ್ಲಿ ಹೆಚ್ಚಿನ ಟ್ರಾಫಿಕ್​ನಿಂದ ಉಂಟಾಗುವ ತೊಂದರೆಗಳನ್ನು ತಪ್ಪಿಸಲು, ಸೆ. 15ರವರೆಗೆ ಕಾಯದೆ ಈಗಲೇ ಪ್ರಕ್ರಿಯೆಯನ್ನು ಆರಂಭಿಸಬಹುದು.

ಹೊಸ ಪ್ಯಾನ್ ಕಾರ್ಡ್​ಗೆ ಆಧಾರ್ ಕಡ್ಡಾಯ

ಹೊಸ ಪ್ಯಾನ್ ಕಾರ್ಡ್​ಗೆ ಅರ್ಜಿ ಸಲ್ಲಿಸುವಾಗ ಈವರೆಗೆ ಜನ್ಮದಿನಾಂಕ ದೃಢೀಕರಣಕ್ಕೆ ಜನ್ಮದಿನಾಂಕ ಇರುವ ಯಾವುದೇ ಒಂದು ಗುರುತಿನ ಚೀಟಿ ನೀಡಿದ್ದರೆ ಸಾಕಿತ್ತು. ಆದರೆ ಜು. 1ರಿಂದ ಈ ಕೆಲಸಕ್ಕೆ ಆಧಾರ್ ಕಡ್ಡಾಯವಾಗಲಿದೆ.

ಎಸ್​ಬಿಐ ಕಾರ್ಡ್- ವಿಮಾನ ಅಪಘಾತ ವಿಮೆ ಸ್ಥಗಿತ

ಉಚಿತ ವಿಮಾನ ಅಪಘಾತ ವಿಮೆಯ ಲಾಭ ಈಗ ಕೇವಲ ಪ್ರಾಥಮಿಕ ಕಾರ್ಡ್​ಹೋಲ್ಡರ್​ಗೆ ಮಾತ್ರ ಅನ್ವಯವಾಗುತ್ತಿದೆ. ಜು. 15ರಿಂದ, ಆಯ್ದ ಪ್ರೀಮಿಯಂ ಕಾರ್ಡ್ ಗಳಲ್ಲಿ ಈ ವಿಮೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಆದ್ದರಿಂದ, ಎಸ್​ಬಿಐ ಕಾರ್ಡ್ ಎಲೀಟ್, ಮೈಲ್ಸ್ ಎಲೀಟ್ ಮತ್ತು ಮೈಲ್ಸ್ ಪ್ರೖೆಮ್ ಕಾರ್ಡ್​ಗಳಿಗೆ 1 ಕೋಟಿ ರೂ. ಕವರ್ ಇನ್ನು ಮುಂದೆ ಲಭ್ಯವಿರುವುದಿಲ್ಲ. ಜೊತೆಗೆ, ಎಸ್​ಬಿಐ ಕಾರ್ಡ್ ಪ್ರೖೆಮ್ ಮತ್ತು ಪಲ್ಸ್​ಗೆ 50 ಲಕ್ಷ ರೂ. ಕವರ್ ಕೂಡ ರದ್ದಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net