ಕುಮಾರಸ್ವಾಮಿ ಭೇಟಿ ಮಾಡಲು ವಿತ್ತ ಸಚಿವರೇ?: DK ಶಿವಕುಮಾರ್​ ವ್ಯಂಗ್ಯ

dk (99) (2)
Published on

ಕನಕಪುರ:ಮಿಸ್ಟರ್ ಕುಮಾರಸ್ವಾಮಿ ನಿಮಗೆ ಜವಾಬ್ದಾರಿ ಇಲ್ಲವೇ? ಸಚಿವರು ನಿಮ್ಮ ಜತೆ ಚರ್ಚೆ ಮಾಡಬೇಕೆ? ಈ ರಾಜ್ಯಕ್ಕೆ ಜವಾಬ್ದಾರಿ ನೀಡಬೇಕು ಎಂದು ನಿಮಗೆ ಜವಾಬ್ದಾರಿ ಇಲ್ಲವೇ? ನಾವು ಪ್ರಧಾನಿ ಹಾಗೂ ಹಣಕಾಸು ಸಚಿವೆ ಹಾಗೂ ನಮಗೆ ಸಂಬಂಧಿಸಿದ ಇಲಾಖೆಯ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇವೆ. ಕುಮಾರಸ್ವಾಮಿ ಭೇಟಿ ಮಾಡಲು ಅವರು ವಿತ್ತ ಸಚಿವರಲ್ಲ ಎಂದು ಡಿಸಿಎಂDK ಶಿವಕುಮಾರ್ ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದರು. ಕೇಂದ್ರದಿಂದ ಅನುದಾನ ತರಲು ರಾಜ್ಯದ ಸಚಿವರು ನಮ್ಮ ಜತೆ ಚರ್ಚೆ ಮಾಡುವುದಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ ಅವರ ಉತ್ತರ ಹೀಗಿತ್ತು.

ಎಚ್​ಡಿಕೆಗೆ ರಾಜ್ಯದ ಬಗ್ಗೆ ಆಸಕ್ತಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿ. ಅವರಿಗೆ ಅವರ ವೈಯಕ್ತಿಕ ಆಸಕ್ತಿ ಹೊರತಾಗಿ ರಾಜ್ಯದ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ರಾಜ್ಯ ಹಾಗೂ ದೇಶದ ಅಭಿವೃದ್ಧಿ ಬಗ್ಗೆ ಅವರಲ್ಲಿ ನಾನು ಆಸಕ್ತಿ ನೋಡಿಲ್ಲ ಎಂದು ತಿರುಗೇಟು ನೀಡಿದರು.

ಸಿಬಿಐ ತನಿಖೆಗೆ ಯಾಕೆ ನೀಡಬೇಕು?

ಮುಡಾ ಪ್ರಕರಣವನ್ನು ಯಾವ ಕಾರಣಕ್ಕೆ ಸಿಬಿಐ ತನಿಖೆಗೆ ನೀಡಬೇಕು? ಲೋಕಾಯುಕ್ತ ತನಿಖೆ ನಡೆಯುತ್ತಿರುವಾಗ, ಇಡಿ ಕೂಡ ತನಿಖೆ ಮಾಡುತ್ತಿದೆ. ಈ ಪರಿಸ್ಥಿತಿಯಲ್ಲಿ ಮೂರನೇ ಸಂಸ್ಥೆ ತನಿಖೆ ಮಾಡಲು ಯಾಕೆ ನೀಡುತ್ತಾರೆ? ಈ ರೀತಿ ನೀಡಲು ಅವಕಾಶ ಇಲ್ಲ. ಈ ಬಗ್ಗೆ ಅನೇಕ ನ್ಯಾಯಾಲಯದ ತೀರ್ಪುಗಳಿವೆ. ನನ್ನ ವಿರುದ್ಧವೂ ಇದೇ ರೀತಿ ಕೇಸ್ ದಾಖಲಿಸಿರುವುದರ ವಿರುದ್ಧ ನಾನು ಬಡಿದಾಡುತ್ತಿದ್ದೇನೆ. ಇದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದೇನೆ ಎಂದರು.

ಅಮೆರಿಕ ಸರ್ಕಾರದ ಕ್ರಮ ಖಂಡನೀಯ

ಅಕ್ರಮವಾಗಿ ನೆಲೆಸಿದ್ದಾರೆ ಎಂದು ಕೆಲವು ಭಾರತೀಯರನ್ನು ಅಮೆರಿಕ ಸರ್ಕಾರ ಕೈ ಕಾಲಿಗೆ ಕಬ್ಬಿಣದ ಸರಪಳಿ ಕಟ್ಟಿ ಭಾರತಕ್ಕೆ ವಾಪಸ್ ಕಳಿಸಿರುವ ಬಗ್ಗೆ ಕೇಳಿದಾಗ, ಈ ಹಿಂದೆ ಕೂಲಿ ಕಾರ್ಮಿಕರಿಗೆ ಸರಪಳಿ ಹಾಕಿ ಕಟ್ಟುತ್ತಿದ್ದದ್ದನ್ನು ನಾವು ನೋಡಿದ್ದೇವೆ. ಅದನ್ನು ತಪ್ಪಿಸಲು ಸರ್ಕಾರ ಕಾನೂನು ತಂದು ಶಿಕ್ಷೆ ನೀಡಿದೆ. ಆದರೆ ಮುಂದುವರಿದ, ಜಾಗೃತಿ ಇರುವ ದೇಶಗಳಲ್ಲಿ ಈ ರೀತಿ ನಡೆದಿರುವುದು ಖಂಡನೀಯ ಎಂದರು.

ಅಕ್ರಮವಾಗಿ ಅವರ ದೇಶದಲ್ಲಿ ನೆಲೆಸಿದ್ದರೆ, ಅದಕ್ಕೆ ಯಾವ ಶಿಕ್ಷೆ ನೀಡಬೇಕೋ ನೀಡಲಿ. ಅದನ್ನು ಬಿಟ್ಟು, ಈ ರೀತಿ ಖೈದಿಗಳಿಗೆ ಹಾಕಿದಂತೆ ಸರಪಳಿ ಹಾಕಿರುವುದನ್ನು ಯಾರಿಂದಲೂ ಒಪ್ಪಲು ಸಾಧ್ಯವಿಲ್ಲ. ಇದು ಮಾನವ ಕುಲಕ್ಕೆ ಅಗೌರವ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net