

Mahakumbh Mela : ವಿಶ್ವದ ಅತಿ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದೆ. ಕೋಟ್ಯಂತರ ಭಕ್ತರು ಈ ಮಹಾ ಮೇಳದಲ್ಲಿ ಭಾಗಿಯಾಗಿ ಶಾಹಿ ಸ್ನಾನ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಇನ್ನು ಈ ಉತ್ಸವದಿಂದ ಅನೇಕ ಮಂದಿ ಉತ್ತಮ ಆದಾಯ ಸಹ ಮಾಡಿಕೊಳ್ಳುತ್ತಿದ್ದಾರೆ.
ಪ್ರೇಯಸಿ ಕೊಟ್ಟ ಐಡಿಯಾದಿಂದ ಯುವಕನೊಬ್ಬ ಬೇವಿನ ಕಡ್ಡಿಯನ್ನು ಮಾರಿ ಸಾವಿರಾರು ರೂಪಾಯಿ ಗಳಿಕೆ ಮಾಡಿದ ಸುದ್ದಿ ಕೆಲವು ದಿನಗಳ ಹಿಂದೆ ಭಾರಿ ಸದ್ದು ಮಾಡಿತ್ತು. ಇದೀಗ ಮತ್ತೊಬ್ಬ ವ್ಯಕ್ತಿ ತನ್ನ ವಿನೂತನ ಐಡಿಯಾದಿಂದ ಒಂದು ದಿನಕ್ಕೆ 3 ರಿಂದ 4 ಸಾವಿರ ರೂಪಾಯಿ ಹಣವನ್ನು ಗಳಿಕೆ ಮಾಡುತ್ತಿದ್ದಾನೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ವ್ಯಕ್ತಿಯೊಬ್ಬ ಸಂಗಮದ ನೀರಿಗೆ ಅಯಸ್ಕಾಂತವನ್ನು ಎಸೆದು, ನದಿ ನೀರಿನ ಅಡಿಯಲ್ಲಿ ಶೋಧಿಸುವ ಮೂಲಕ ಹಣವನ್ನು ಸಂಪಾದಿಸುತ್ತಿದ್ದಾನೆ. ಅಲಹಾಬಾದ್ ನಿವಾಸಿ ದಿನೇಶ್ ಕುಮಾರ್ ಈ ವಿಧಾನದ ಮೂಲಕ ಒಂದೇ ದಿನದಲ್ಲಿ ಸುಮಾರು 4000 ರೂಪಾಯಿಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಝಾನ್ಸಿ ಮೂಲದ ದಿನೇಶ್, ಯಾತ್ರಿಕರು ಸಂಗಮಕ್ಕೆ ಕಾಣಿಕೆಯಾಗಿ ಎಸೆಯುವ ನಾಣ್ಯಗಳು ಮತ್ತು ಇತರ ಸಣ್ಣ ಲೋಹದ ವಸ್ತುಗಳನ್ನು ಸಂಗ್ರಹಿಸಲು ಮ್ಯಾಗ್ನೆಟ್ ಬಳಸುತ್ತಿದ್ದಾರೆ. ಜನರು ತಮ್ಮ ಆಸೆಗಳು ಈಡೇರುವ ಭರವಸೆಯಿಂದ ಹಾಗೂ ಹರಕೆಗಳ ಪ್ರಾರ್ಥನೆಯಾಗಿ ನಾಣ್ಯಗಳು ಮತ್ತು ಇತರ ಸಣ್ಣ ವಸ್ತುಗಳನ್ನು ನೀರಿಗೆ ಎಸೆಯುತ್ತಾರೆ. ಅವುಗಳನ್ನು ಮ್ಯಾಗ್ನೆಟ್ ಬಳಸಿ ಸಂಗ್ರಹಿಸುತ್ತೇನೆಂದು ದಿನೇಶ್ ಹೇಳಿದ್ದಾರೆ.
ಮಹಾಕುಂಭದ ಸಮಯದಲ್ಲಿ ಲಕ್ಷಾಂತರ ಭಕ್ತರು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಬರುತ್ತಾರೆ. ಅನೇಕ ಜನರು ತಮ್ಮ ಧಾರ್ಮಿಕ ಆಚರಣೆಗಳ ಭಾಗವಾಗಿ ನದಿಗೆ ನಾಣ್ಯಗಳನ್ನು ಎಸೆಯುತ್ತಾರೆ. ದಿನೇಶ್ ಇದನ್ನು ಹೆಚ್ಚುವರಿ ಹಣವನ್ನು ಗಳಿಸುವ ಅವಕಾಶವಾಗಿ ಇದೀಗ ಪರಿವರ್ತಿಸಿಕೊಂಡಿದ್ದಾರೆ.
ನಾನು ಕುಂಭಮೇಳಕ್ಕೆ ವರ್ಷಗಳಿಂದ ಬರುತ್ತಿದ್ದೇನೆ. ಆದರೆ, ಈ ಬಾರಿ ನಾನು ಮ್ಯಾಗ್ನೆಟ್ ಬಳಸುವ ಬಗ್ಗೆ ಯೋಚಿಸಿದೆ. ಕೇವಲ ಒಂದು ದಿನದಲ್ಲಿ ನಾನು ಎಷ್ಟು ಸಂಪಾದಿಸಬಹುದು ಎಂದು ನೋಡಿ ನನಗೆ ಆಶ್ಚರ್ಯವಾಯಿತು. ಆದಾಗ್ಯೂ, ಕೆಲ ಸವಾಲುಗಳೂ ಇವೆ. ನೀರಿನ ಹರಿವಿನಿಂದ ಕೆಲವೊಮ್ಮೆ ವಸ್ತುಗಳನ್ನು ಹಿಂಪಡೆಯಲು ಕಷ್ಟವಾಗಬಹುದು ಮತ್ತು ಅದೇ ಕೆಲಸವನ್ನು ಮಾಡುವ ಇತರ ಜನರೊಂದಿಗೆ ತಾನು ಸ್ಪರ್ಧಿಸಬೇಕಾಗುತ್ತದೆ ಎಂದು ದಿನೇಶ್ ಹೇಳಿದ್ದಾರೆ. ಇದರ ಹೊರತಾಗಿಯೂ, ಅವರು ಉತ್ಸಾಹದಿಂದ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. (ಏಜೆನ್ಸೀಸ್)