

ಭಾರತದ ಗುರಿ ಈಗ ವಿಶ್ವದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗುವುದು. ಇದಕ್ಕಾಗಿ ಸರ್ಕಾರ ಹಲವು ರಂಗಗಳ ಸಬಲೀಕರಣಕ್ಕೆ ಮುಂದಾಗಿದೆ. ಹರಿದು ಬರಲಿರುವ ಬಂಡವಾಳಕ್ಕೆ ಸರ್ಕಾರ ಸೌಕರ್ಯಗಳನ್ನು ಸೃಷ್ಟಿಸುವ ಸವಾಲೂ ಇದೆ. ಆದರೆ, ಅನೇಕ ದೊಡ್ಡ ರಾಷ್ಟ್ರಗಳು ಮತ್ತು ಉದ್ಯಮಸ್ನೇಹಿ ವಾತಾವರಣ ಹೊಂದಿರುವ ದೇಶಗಳು ಭಾರತದಲ್ಲಿ ಹೂಡಿಕೆಗೆ ಮುಂದಾಗಿರುವುದು, ಉದ್ಯೋಗಸೃಷ್ಟಿ ನಿಟ್ಟಿನಲ್ಲಿಯೂ ಆಶಾವಾದ ಮೂಡಿಸಿದೆ. ಮತ್ತೊಂದೆಡೆ, ಮಧ್ಯಮವರ್ಗದವದರ ನಿರೀಕ್ಷೆ, ಆಶೋತ್ತರಗಳಿಗೂ ಸ್ಪಂದಿಸಬೇಕಿದೆ.
ರವೀಂದ್ರ ಎಸ್. ದೇಶಮುಖ್
ವೈಯಕ್ತಿಕ ಆದಾಯ ತೆರಿಗೆಯಲ್ಲಿ ಮಧ್ಯಮ ವರ್ಗಕ್ಕೆ ಒಂದಷ್ಟು ರಿಯಾಯಿತಿ ನೀಡುವ ಉದ್ದೇಶದಿಂದ ಹೊಸ ತೆರಿಗೆ ಸ್ಲ್ಯಾಬ್ಗಳನ್ನು ಪರಿಚಯಿಸಬೇಕು ಎಂಬ ಬೇಡಿಕೆ ಶ್ರೀಸಾಮಾನ್ಯರದ್ದು. ಆದಾಯ ತೆರಿಗೆಯಲ್ಲಿ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಮೂಲಕ ಹಣದುಬ್ಬರಕ್ಕೆ ಒಂದಿಷ್ಟು ಪರಿಹಾರ ಕಂಡುಕೊಳ್ಳಬಹುದು. ಆದಾಯ ತೆರಿಗೆಗೆ ಕನಿಷ್ಠ 10 ಲಕ್ಷ ರೂ. ಮಿತಿ ಅಳವಡಿಸಬೇಕು. 15 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಮಿತಿಯನ್ನು ತಗ್ಗಿಸಬೇಕು ಎಂಬ ಆಗ್ರಹಕ್ಕೆ ವಿತ್ತ ಸಚಿವರ ಸ್ಪಂದನೆ ಹೇಗಿರುತ್ತದೆ ಎಂಬುದಕ್ಕೆ ಫೆ.1ರ ಬಜೆಟ್ನಲ್ಲಿ ಉತ್ತರ ಸಿಗಲಿದೆ.
ಆರ್ಥಿಕ ಅಭಿವೃದ್ಧಿಗೆ ವೇಗ: ಆರ್ಥಿಕ ಅಭಿವೃದ್ಧಿಯ ವೇಗ ಹೆಚ್ಚಿಸುವುದು ಸರ್ಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ, ಹೆದ್ದಾರಿಗಳ ನಿರ್ವಣ, ಈಗಾಗಲೇ ಇರುವ ಹೆದ್ದಾರಿಗಳ ವಿಸ್ತರಣೆ, ರೈಲ್ವೆ ಜಾಲಗಳ ನಿರ್ವಣ, ಹೊಸ ರೈಲು ಸೇವೆಗಳಿಗೆ ಚಾಲನೆ, ದ್ವಿತೀಯ ಹಂತದ ನಗರಗಳಿಗೆ ವಾಯುಯಾನ ಸೇವೆ, ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಿಸುವುದು, ಈ ಎಲ್ಲ ಕ್ರಮಗಳ ಮೂಲಕ ಉದ್ಯೋಗಸೃಷ್ಟಿಗೆ ಆದ್ಯತೆ ನೀಡಲು ಸರ್ಕಾರ ಮೂಲಸೌಕರ್ಯ ಕ್ಷೇತ್ರಕ್ಕೆ 2025-26ರ ಬಜೆಟ್ನಲ್ಲೂ ಸೂಕ್ತ ಅನುದಾನ ನೀಡಲಿದೆ ಎನ್ನುತ್ತಾರೆ ವಿತ್ತೀಯ ತಜ್ಞರು. ಅಲ್ಲದೆ, ಭಾರತ ಜಾಗತಿಕವಾಗಿ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವುದರಿಂದ, ಈ ಸಾಧನೆ ಕಾಯ್ದುಕೊಳ್ಳಲು, ಆರ್ಥಿಕ ಚಟುವಟಿಕೆ ಹೆಚ್ಚಿಸಲು ಮೂಲಸೌಕರ್ಯ ಕ್ಷೇತ್ರಕ್ಕೆ ಆದ್ಯತೆ ನೀಡುವುದು ಅಗತ್ಯವಾಗಿದೆ. ಕಳೆದ ಬಜೆಟ್ಗಳನ್ನು ಗಮನಿಸಿದರೆ ಸರ್ಕಾರ ಇದನ್ನು ಪರಿಗಣಿಸಲಿದೆ, ಇನ್ಪ್ರಾ ಯೋಜನೆಗಳಿಗೆ ಒತ್ತು ನೀಡಲಿದೆ ಎನ್ನುತ್ತಿವೆ ಮೂಲಗಳು. ಅಲ್ಲದೆ, ಸಾಮಾಜಿಕ ಕಲ್ಯಾಣ ಯೋಜನೆಗಳಿಗೂ ಈ ಬಾರಿ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ.
ಹೆದ್ದಾರಿ ನಿರ್ವಣಕ್ಕೆ ವೇಗ: ದೇಶದಲ್ಲಿ ಈಗ ರಾಷ್ಟ್ರೀಯ ಹೆದ್ದಾರಿಯ ಉದ್ದ 57 ಲಕ್ಷ ಕಿಲೋ ಮೀಟರ್ಗಳಷ್ಟಿದೆ. ಇದನ್ನು ಇನ್ನಷ್ಟು ವಿಸ್ತರಿಸಲು ಸರ್ಕಾರ ಮುಂದಾಗಿದೆ ಮತ್ತು ದೇಶದ ಮಹಾನಗರಗಳನ್ನು ಎಲ್ಲ ದಿಕ್ಕುಗಳಿಂದ ಬೆಸೆಯುವ ಯೋಜನೆ ಪ್ರಗತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಮುಂದುವರಿಕೆಗೆ ಈ ಬಜೆಟ್ನಲ್ಲಿ ಸರ್ಕಾರ ಸೂಕ್ತ ಅನುದಾನ ನೀಡಿದರೆ ಮಾತ್ರ, ನಿಗದಿತ ಕಾಲಾವಧಿಯಲ್ಲಿ ಈ ಯೋಜನೆಗಳು ಪೂರ್ಣಗೊಳ್ಳಲು ಸಾಧ್ಯ ಎಂಬುದು ತಜ್ಞರ ಅಭಿಪ್ರಾಯ.
ಹೆಚ್ಚಾಗಬೇಕು ಶಿಕ್ಷಣ ಅನುದಾನ: ಶೈಕ್ಷಣಿಕ ಸಾಧನೆಗಳಲ್ಲಿ ಗಮನಾರ್ಹವಾದ ಬೆಳವಣಿಗೆ ಸಾಧಿಸಲು ಜಿಡಿಪಿಯ ಕನಿಷ್ಠ ಶೇಕಡ 6ರಷ್ಟು ಶಿಕ್ಷಣಕ್ಕಾಗಿ ಖರ್ಚು ಮಾಡಬೇಕೆಂದು ಶಿಕ್ಷಣ ಆಯೋಗವು 1964-66ರಲ್ಲಿಯೇ ಶಿಫಾರಸು ಮಾಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಕೂಡ ಶಿಕ್ಷಣದ ಮೇಲಿನ ಸಾರ್ವಜನಿಕ ಹೂಡಿಕೆಯನ್ನು ಜಿಡಿಪಿಯ ಶೇ.6ರಷ್ಟು ಮಾಡಬೇಕು ಎಂದು ಒತ್ತಿಹೇಳಿದೆ. ಆದರೆ, ಭಾರತದ ಶಿಕ್ಷಣ ಬಜೆಟ್ ಜಿಡಿಪಿಯ ಶೇ. 3ರ ಆಸುಪಾಸಿನಲ್ಲಿಯೇ ಇದೆ. ಯುವ ಭಾರತವನ್ನು ಬೆಳವಣಿಗೆಯ ಹಾದಿಯಲ್ಲಿ ಮುನ್ನಡೆಸಲು ಶಿಕ್ಷಣದ ಮೇಲೆ ಸಾಕಷ್ಟು ಸಾರ್ವಜನಿಕ ಹೂಡಿಕೆ ಮಾಡಬೇಕು ಎಂಬುದು ತಜ್ಞರ ನಿರೀಕ್ಷೆಯಾಗಿದೆ.
ವಾಯುಯಾನಕ್ಕೆ ಬಲ: ಮೂಲಸೌಕರ್ಯದ ವಿಷಯದಲ್ಲಿ ದೇಶವನ್ನು ಎತ್ತರಕ್ಕೇರಿಸುವ ನಿಟ್ಟಿನಲ್ಲಿ ವಾಯುಯಾನಕ್ಕೆ ಹೊಸ ರೆಕ್ಕೆ ಜೋಡಿಸಲು ಮಹತ್ವದ ಕ್ರಮಗಳು ಅನುಷ್ಠಾನಕ್ಕೆ ಬಂದಿವೆ. ಎರಡನೇ ಹಂತದ ನಗರಗಳಲ್ಲೂ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಿವೆ. ಅಲ್ಲದೆ, ಹೆಲಿಪೋರ್ಟ್, ಜಲದ ಮೇಲಿನ ವಿಮಾನನಿಲ್ದಾಣ ಹಾಗೂ ವಿಮಾನ ಲ್ಯಾಂಡಿಂಗ್ಗೆ ಅನುಕೂಲವಾಗುವಂಥ ಅತ್ಯಾಧುನಿಕ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ದೇಶದ ಪ್ರಾದೇಶಿಕ ವಾಯುಸಂರ್ಪಕವನ್ನು ಶಕ್ತಿಯುತವಾಗಿಸಲು ಸರ್ಕಾರ ಮುಂದಾಗಿದೆ. ಕಳೆದ ಕೆಲವು ವರ್ಷಗಳಿಂದ ದೇಶದ ಪ್ರಾದೇಶಿಕ ವಾಯು ಸಂಪರ್ಕವನ್ನು ಉಡಾನ್ ಯೋಜನೆ ಮೂಲಕ ಸುಧಾರಣೆಗೊಳಿಸಲಾಗುತ್ತಿದೆ. ಈ ವರ್ಷವೂ ಉಡಾನ್ ಮೂಲಕ ಸಂಪರ್ಕಜಾಲ ವಿಸ್ತರಣೆಯಾಗಲಿದೆ. 2014ರವರೆಗೆ ದೇಶದಲ್ಲಿನ ವಿಮಾನ ನಿಲ್ದಾಣಗಳ ಸಂಖ್ಯೆ 74 ಇದ್ದಿದ್ದು, 2024ರಲ್ಲಿ 150ರ ಗಡಿ ದಾಟಿದೆ. ಈ ಮೂಲಕ ಭಾರತ ಪ್ರಪಂಚದ ಮೂರನೇ ಅತಿದೊಡ್ಡ ವೈಮಾನಿಕ ಮಾರುಕಟ್ಟೆ ಎನಿಸಿಕೊಂಡಿದೆ. ಪ್ರಸಕ್ತ, ವಿಮಾನ ನಿಲ್ದಾಣಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ ಇರುವ ಕಡೆ, ಸಕಾಲದಲ್ಲಿ ಆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕಿದೆ.
ಹೂಡಿಕೆಗೆ ಅವಕಾಶ ಹೆಚ್ಚಳ: ಸಾರ್ವಜನಿಕ ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿ ರುವ ರೈಲ್ವೆ, ರಸ್ತೆಗಳು, ನಗರ ಮೂಲಸೌಕರ್ಯಗಳು ಹಾಗೂ ವಿದ್ಯುತ್ ಸೇರಿ ಮೂಲಸೌಕರ್ಯದಲ್ಲಿ ಹೆಚ್ಚಿನ ಖಾಸಗಿ ಹೂಡಿಕೆಗಾಗಿ ಎಲ್ಲ ಪಾಲುದಾರರಿಗೆ ಹೊಸದಾಗಿ ರಚಿಸಲಾಗಿ ರುವ ಮೂಲಸೌಕರ್ಯ ಹಣಕಾಸು ಸಚಿವಾಲಯ ಸಹಕಾರ ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. ಈ ಬಜೆಟ್ನಲ್ಲಿ ಖಾಸಗಿ ಹೂಡಿಕೆಯ ಅವಕಾಶವನ್ನು ಹೆಚ್ಚಿಸುವ ಮಾರ್ಗಗಳಿಗೆ ಸರ್ಕಾರ ಇನ್ನಷ್ಟು ಆದ್ಯತೆ ನೀಡಲಿದೆ.
ಇತರ ನಿರೀಕ್ಷೆಗಳು...
ಎನ್ಪಿಎಸ್ ಮಿತಿ ಹೆಚ್ಚಳ: ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಗರಿಷ್ಠ ಕಡಿತ ಮಿತಿಯನ್ನು 50 ಸಾವಿರದಿಂದ 1 ಲಕ್ಷ ರೂ.ಗೆ ಹೆಚ್ಚಿಸಬೇಕು. ಮತ್ತು ಅದಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಬೇಕು.
ಮನೆಬಾಡಿಗೆ ಭತ್ಯೆ: ಹಣದುಬ್ಬರ ಪ್ರಮಾಣ ಹೆಚ್ಚಿರುವುದರಿಂದ ದ್ವಿತೀಯ ದರ್ಜೆ ನಗರಗಳಿಗೆ ಮನೆಬಾಡಿಗೆ ಭತ್ಯೆಯನ್ನು ಹೆಚ್ಚಿಸಬೇಕು. ಬೆಂಗಳೂರು, ಹೈದರಾಬಾದ್ ಹಾಗೂ ಪುಣೆಯಂಥ ನಗರಗಳಲ್ಲಿ ವಾಸಿಸುವ ಉದ್ಯೋಗಿಗಳಿಗೆ ಮನೆಬಾಡಿಗೆ ಭತ್ಯೆಯನ್ನು ಶೇ. 50ಕ್ಕೆ ವಿಸ್ತರಿಸಬೇಕು.
ಟಿಡಿಎಸ್ಗೆ ವಿನಾಯ್ತಿ: ಭವಿಷ್ಯ ನಿಧಿ ಮೇಲಿನ ಬಡ್ಡಿಯು -ಠಿ;2.5 ಲಕ್ಷ ಮೀರಿದ್ದಲ್ಲಿ ವಿಧಿಸಲಾಗುವ ಟಿಡಿಎಸ್ ಅನ್ನು ಹಣ ಹಿಂಪಡೆಯುವವರೆಗಾದರೂ ಕಡಿತ ಮಾಡಬಾರದು.
80ಡಿ ಸೆಕ್ಷೆನ್ನಲ್ಲಿ ಬದಲಾವಣೆ: ವೈದ್ಯಕೀಯ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸೇವೆಗಳು ಕೈಗೆಟುಕುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆಗೆ ಸೆಕ್ಷನ್ 80ಡಿ ಅಡಿಯಲ್ಲಿ ತೆರಿಗೆ ಮಿತಿಯನ್ನು 25 ಸಾವಿರದಿಂದ 50 ಸಾವಿರ ರೂ.ಗೆ ಹಾಗೂ 50 ಸಾವಿರದಿಂದ 1 ಲಕ್ಷ ರೂ.ಗೆ ಹೆಚ್ಚಿಸಬೇಕು.
ಹೂಡಿಕೆ ಮಿತಿ ಹೆಚ್ಚಳ: 80ಸಿ ಸೆಕ್ಷೆನ್ನಲ್ಲಿ ಬದಲಾವಣೆ ಮಾಡಿ ಎಂಬ ಆಗ್ರಹ ಕಳೆದ ಕೆಲ ವರ್ಷಗಳಿಂದಲೂ ಮಧ್ಯಮ ವರ್ಗದವರಿಂದ ಕೇಳಿಬರುತ್ತಿದೆ. ಕಾರಣ, 1.5 ಲಕ್ಷ ರೂ. ಮಿತಿಯು 2014ರಿಂದ ಬದಲಾವಣೆ ಆಗಿಲ್ಲ. ನಿಶ್ಚಿತ ಠೇವಣಿ, ಪಿಪಿಎಫ್ ಇತ್ಯಾದಿ ಹೂಡಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಇದು ಅವಶ್ಯಕ.
ಬಜೆಟ್ ಸಾಧ್ಯತೆಗಳು
ಮೊದಲು ಬಜೆಟ್ ಮಂಡನೆಯಾಗಿದ್ದು
ಸ್ವಾರಸ್ಯಕರ ಸಂಗತಿಗಳು