

ಯುರೋಪಿನ ಐರ್ಲೆಂಡ್ನಲ್ಲಿ ಜನಸಂಖ್ಯೆ 50 ಲಕ್ಷಕ್ಕಿಂತಲೂ ಕಡಿಮೆ. ಇಲ್ಲಿ ಕರೋನ ಸೋಂಕಿನ ಪ್ರಥಮ ಪ್ರಕರಣ ಕಂಡುಬಂದಿದ್ದು ಫೆಬ್ರವರಿ 29ರಂದು. ಈಗ 4 ಸಾವಿರಕ್ಕೂ ಅಧಿಕ ಜನರಲ್ಲಿ ಕೋವಿಡ್-19 ರೋಗ ಕಾಣಿಸಿಕೊಂಡಿದೆ. ಆ ಪೈಕಿ ನೂರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.
ಅಲ್ಲದೆ ನೂರಾರು ಜನರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಇಲ್ಲಿ ಡಬ್ಲಿನ್ನ ಬ್ಯೂಮೌಂಟ್ ಆಸ್ಪತ್ರೆಯಲ್ಲಿನ ಕೋವಿಡ್ ರೋಗಿಗಳ ಕ್ರಿಟಿಕಲ್ ಕೇರ್ ಯುನಿಟ್ನಲ್ಲಿ ನಾನು ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಿಂತಾಜನಕ ಅಂಶ ಏನೆಂದರೆ, ಇಲ್ಲಿ ಐಸಿಯುನಲ್ಲಿ ಇರುವ ಬಹಳಷ್ಟು ರೋಗಿಗಳು ವೆಂಟಿಲೇಟರ್ನಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅಂಕಿ-ಅಂಶಗಳ ಪ್ರಕಾರ ಮುಂದಿನ ದಿನಗಳಲ್ಲಿ ಇನ್ನೂ ಬಹಳಷ್ಟು ಜನರಿಗೆ ವೆಂಟಿಲೇಟರ್ ಚಿಕಿತ್ಸೆ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ಮಾರ್ಚ್ ಮಧ್ಯಭಾಗದಲ್ಲಿ ಶಾಲಾ-ಕಾಲೇಜು, ಬಾರ್, ರೆಸೊ್ಟೕರೆಂಟ್, ಪಬ್ ಮುಂತಾದ ಸಾರ್ವಜನಿಕ ಕೇಂದ್ರಗಳನ್ನು ಮುಚ್ಚಲಾಗಿತ್ತು. ಜನರನ್ನು ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಲಾಗಿತ್ತು. ಆದರೂ ಸೋಂಕು ವ್ಯಾಪಿಸಿದ್ದರಿಂದ ಮಾ.27ರಂದು ಲಾಕ್ಡೌನ್ ಘೋಷಿಸಲಾಯಿತು. ಲಾಕ್ಡೌನ್ ಸಮಯದಲ್ಲೂ ಏರ್ಪೋರ್ಟ್ ತೆರೆದಿದೆ. ಬಸ್ಸು , ರೈಲುಗಳು ಚಲಿಸುತ್ತಿವೆ. ಏಪ್ರಿಲ್ ಮಧ್ಯಭಾಗದಲ್ಲಿ ಸೋಂಕು ತೀವ್ರಗೊಳ್ಳಲಿದೆ ಎಂದು ಅಂದಾಜು ಮಾಡಲಾಗಿದೆ. ಹಾಗೆ ನೋಡಿದರೆ, ಭಾರತ ಮುನ್ನೆಚ್ಚರಿಕೆ ಕ್ರಮವಾಗಿ ಬಹಳ ಬೇಗನೆ ಲಾಕ್ಡೌನ್ ಮಾಡಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ.
ಈ ಲಾಕ್ಡೌನ್ ನಿರ್ಧಾರ ಎಷೊ್ಟೕ ಜನರಿಗೆ ಸೋಂಕು ತಪ್ಪಿಸಿದೆ. ಕರ್ನಾಟಕ ಸರ್ಕಾರವಂತೂ ಬಹಳಷ್ಟು ಬೇಗ ಪೂರ್ವಭಾವಿಯಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ-ರಾಜ್ಯ ಸರ್ಕಾಗಳು ಕೖಗೊಂಡ ಕ್ರಮಗಳನ್ನು ನೋಡಿ ಹೆಮ್ಮೆ ಅನಿಸುತ್ತಿದೆ. ದೇಶದ ಆರ್ಥಿಕ ಪ್ರಗತಿಯನ್ನು ಬದಿಗೊತ್ತಿ ಜನರ ಜೀವನಕ್ಕೆ ಪ್ರಾಮುಖ್ಯತೆ ನೀಡಿದ್ದು ನಿಜಕ್ಕೂ ಮಹತ್ವದ ನಿರ್ಧಾರ. ಆದ್ದರಿಂದ ದಯವಿಟ್ಟು ಎಲ್ಲರೂ ಸರ್ಕಾರದ ಈ ಆದೇಶ ಪಾಲಿಸಿ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ.
| ಪ್ರಶಾಂತ್ ನಾಯಕ್ ಐರ್ಲೆಂಡ್