

ಉಡುಪಿ: ಕರವಾಳಿ ಭಾಗದಲ್ಲಿ ಸರ್ಕಾರಿ ಬಸ್ ಮತ್ತು ಖಾಸಗಿ ಬಸ್ ಸಿಬ್ಬಂದಿಗಳ ನಡುವೆ ಆವಾಗಾವಾಗ ಜಗಳ ಏರ್ಪಡುತ್ತಲೇ ಇರುತ್ತದೆ. ಇದೀಗ ಉಡುಪಿ - ಕಾರ್ಕಳ ರಸ್ತೆಯಲ್ಲಿ ಸರಕಾರಿ ಬಸ್ ಚಾಲಕ ಮೊಹಮ್ಮದ್ ಸೈಯದ್ ಮತ್ತು ಖಾಸಗಿ ಬಸ್ ಕಂಡಕ್ಟರ್ ನಡುವೆ ರಸ್ತೆಯಲ್ಲೇ ಜಗಳ ನಡೆದಿದೆ.
ರಸ್ತೆ ಮಧ್ಯೆಯೇ ಬಸ್ ನಿಲ್ಲಿ ಸರ್ಕಾರಿ ಬಸ್ ಚಾಲಕ ಹಾಗೂ ಖಾಸಗಿ ಬಸ್ನ ನಿರ್ವಾಹಕ ಕೈಕೈ ಮಿಲಾಯಿಸಿಕೊಂಡಿದ್ದಾರೆ. ಬಸ್ಗೆ ಸೈಡ್ ಕೊಡುವ ವಿಚಾರದಲ್ಲಿ ಪ್ರಾರಂಭವಾದ ಜಗಳ ತಾರಕಕ್ಕೇರಿದೆ. ಈ ವೇಳೆ ಖಾಸಗಿ ಬಸ್ಸಿನ ನಿರ್ವಾಹಕ ಅವಾಚ್ಯ ಶಬ್ದಗಳಿಂದ ಸರ್ಕಾರಿ ಬಸ್ಸಿನ ಚಾಲಕನಿಗೆ ನಿಂದಿಸಿದ್ದಾನೆ. ಇದರಿಂದ ಕೋಪಗೊಂಡ ಚಾಲಕ ಸೈಯದ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದಾನೆ.
ಸದ್ಯ ಚಾಲಕ ಮತ್ತು ನಿರ್ವಾಹಕನ ಗಲಾಟೆಯನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ. ಸಿಟ್ಟಿನಲ್ಲಿ ಚಾಲಕ ತನ್ನ ಚಪ್ಪಲಿ ತೆಗೆದುಕೊಂಡು ಖಾಸಗಿ ಬಸ್ಸಿನ ನಿರ್ವಾಹಕನಿಗೆ ಹೊಡೆದಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಹಿಂದೆಯೂ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಸರ್ಕಾರಿ ಬಸ್ ಹಾಗೂ ಖಾಸಗಿ ಬಸ್ಸಿನ ಸಿಬ್ಬಂದಿಗಳ ನಡುವೆ ಜಗಳ ನಡೆದಿದೆ.