

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಶಾಸಕ ಆಗಿದ್ದ ವಾಸು ಅವರ ಪುತ್ರ ಕವೀಶ್ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಶಾಸಕನ ಮನೆಯಲ್ಲಿ ಬಿಜೆಪಿ ಚಿಂತನೆ ಅರಳಿದೆ. ನಾಳೆ ಸಿದ್ದರಾಮಯ್ಯ ಅವರ ಮಗ, ಡಿಕೆ ಶಿವಕುಮಾರ್ ಅವರ ಕುಟುಂಬ ಕೂಡಾ ಬಿಜೆಪಿಗೆ ಸೇರಲಿದ್ದಾರೆ. ಈ ಮೂಲಕ ದೇಶದಾದ್ಯಂತ ಬಿಜೆಪಿಮಯ ಅಭಿವೃದ್ಧಿ ಮಾಡಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾತನಾಡುತ್ತಾ,ಕಾಂಗ್ರೆಸ್ ನವರ ಬಸ್ ಹೊರಟಿದೆ. ಹೋಗ್ತಾ, ಹೋಗ್ತಾ ಬ್ರೇಕ್ ಫೇಲ್ ಆಗಲಿದೆ. ಜೆಡಿಎಸ್ ಪಂಚರತ್ನ ಯಾತ್ರೆಯೂ ಪಂಕ್ಚರ್ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವ್ಯಂಗ್ಯವಾಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಮೈಸೂರಿನ ಮಾಜಿ ಶಾಸಕ ವಾಸು ಅವರ ಪುತ್ರ ಕವೀಶ್ ಗೌಡ ಸೇರಿ ಹಳೇ ಮೈಸೂರು ಭಾಗದ ಕಾಂಗ್ರೆಸ್, ಜೆಡಿಎಸ್ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡ ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ನಿಶ್ಚಿತವೆಂಬ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಮನೆತನ ಅಥವಾ ಕುಟುಂಬ ರಾಜಕಾರಣ ಮಾಡುವುದಿಲ್ಲ. ಇದರಿಂದಾಗಿ ಚಹಾ ಮಾರುವವರು ದೇಶದ ಪ್ರಧಾನಿಯಾಗುತ್ತಾರೆ. ಹಳ್ಳಿಗಳಲ್ಲಿ ಪಕ್ಷದ ಭಿತ್ತಿ ಪತ್ರ ಅಂಟಿಸಿದವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುತ್ತಾರೆ. ಕುಟುಂಬ, ಪರಿವಾರ ವಾದಕ್ಕೆ ರೋಸಿ ಹೋದವರು ರಾಷ್ಟ್ರೀಯ ವಾದದ ಪಕ್ಷಕ್ಕೆ ಸೇರಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದರು.
ಸಚಿವ ಕೆ.ಗೋಪಾಲಯ್ಯ ಮಾತನಾಡಿ ಸ್ವ ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದೆ. 2013ರಲ್ಲಿ ಬಿಜೆಪಿ ವಿಭಜನೆಯಾಗಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಇಲ್ಲವಾದರೆ ಆ ಪಕ್ಷಕ್ಕೆ ಅವಕಾಶವೇ ಇರುತ್ತಿದ್ದಿಲ್ಲ. ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷವಾಗಿದ್ದು, ಉಜ್ವಲ ಭವಿಷ್ಯವಿದೆ ಎಂದರು.
ಮೈಸೂರು, ಹಾಸನ, ಬೆಂಗಳೂರಿನ ಕಾಂಗ್ರೆಸ್, ಜೆಡಿಎಸ್ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸಿ ಜಯಭೇರಿ ಬಾರಿಸಲಿದ್ದೇವೆ ಎಂದು ಹೇಳಿದರು.
ಮೋದಿ ಕರೋನಾ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಿದರು. ಒಂದು ವೇಳೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ಮೊದಲ ಡೋಸ್ ಸೋನಿಯಾ, ಎರಡನೇ ಡೋಸ್ ರಾಹುಲ್ ಗಾಂಧಿ, ಮೂರನೇ ಡೋಸ್ ಪ್ರಿಯಾಂಕ ಗಾಂಧಿ ತೆಗೆದುಕೊಳ್ಳುತ್ತಿದ್ದರು. ಕೊನೆಯಲ್ಲಿ ಇದ್ರೆ ಖರ್ಗೆ ಲಸಿಕೆ ಹಾಕಿಸಿಕೊಳ್ಳುತ್ತಿದ್ದರು ಎಂದು ಕಾಂಗ್ರೆಸ್ ಬಗ್ಗೆ ಕಟೀಲ್ ವ್ಯಂಗ್ಯವಾಡಿದರು.