

ಅಂಕಾರಾ: ಆಡಳಿತರೂಢ ಹಾಗೂ ವಿರೋಧ ಪಕ್ಷಗಳ ಸದಸ್ಯರ ಮಾರಾಮಾರಿಗೆ ಶನಿವಾರ(ಆಗಸ್ಟ್ 17) ಟರ್ಕಿ ಸಂಸತ್ತು ಸಾಕ್ಷಿಯಾಯಿತು. ಸ್ಪೀಕರ್ ನುಮನ್ ಕುರ್ತುಲ್ಮಸ್ ಎದುರೇ ಉಭಯ ಪಕ್ಷಗಳ ಸದಸ್ಯರು ಕೈ-ಕೈ ಮಿಲಾಯಿಸಿದರು. ಪರಿಸ್ಥಿತಿ ಕೈಮೀರಿ ಆಡಳಿತಾರೂಢ ಎಕೆಪಿ ಹಾಗೂ ವಿರೋಧ ಪಕ್ಷಗಳ ಸಂಸದರು ರಕ್ತ ಬರುವಂತೆ ಹೊಡೆದಾಡಿಕೊಂಡಿದ್ದಾರೆ.
ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳ ಸದಸ್ಯರು ಟರ್ಕಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲು ಶುರು ಮಾಡಿದರು. ಈ ವೇಳೆ ಆಡಳಿತರೂಢ ಪಕ್ಷದ ಎಕೆಪಿ ಸಂಸದರು ಕೂಡ ಸದನವನ್ನು ನಡೆಯಲು ಬಿಡದೆ ವಿಪಕ್ಷ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲಿ ಗದ್ದಲ, ಗಲಾಟೆ ವಿಕೋಪಕ್ಕೆ ತಿರುಗಿ ಆಡಳಿತ, ವಿಪಕ್ಷ ಸದಸ್ಯರು ಕೈ ಸಿಕ್ಕಿದನ್ನು ತೆಗೆದುಕೊಂಡು ಪರಸ್ಪರ ರಕ್ತ ಬರುವಂತೆ ಬಡಿದಾಡಿಕೊಂಡಿದ್ದಾರೆ.
ಸಂಸತ್ತಿನಿಂದ ಅಮಾನತ್ತಾಗಿರುವ ವರ್ಕರ್ಸ್ ಪಾರ್ಟಿ ಆಫ್ ಟರ್ಕಿ (WPT) ಪಕ್ಷದ ಕ್ಯಾನ್ ಅಟಲೆ ಅವರನ್ನು ಮತ್ತೆ ಸಂಸತ್ತಿಗೆ ಸೇರಿಸಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಪಟ್ಟು ಹಿಡಿದಿದ್ದಾರೆ. ಶನಿವಾರ ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ಉಪನಾಯಕ ಸ್ಪೀಕರ್ ನುಮನ್ ಕುರ್ತುಲ್ಮಸ್ ಹಾಗೂ ಟರ್ಕಿ ಸರ್ಕಾರವನ್ನು ಒತ್ತಾಯಿಸಿದರು. ಆದರೆ ವಿಪಕ್ಷ ಸದಸ್ಯರ ಮನವಿಗೆ ಸ್ಪೀಕರ್ ಒತ್ತು ನೀಡಲಿಲ್ಲ. ಬಳಿಕ ವಿರೋಧ ಪಕ್ಷದ ಉಪನಾಯಕನ ಮೇಲೆ ಆಡಳಿತಾರೂಢ ಎಕೆಪಿ ಪಕ್ಷದ ಸದಸ್ಯ ಅಹ್ಮತ್ ಸಿಕ್ ಏಕಾಏಕಿ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಇದರಿಂದ ಸಿಟ್ಟಿಗೆದ್ದ ವಿಪಕ್ಷ ಸದಸ್ಯರು ಆಡಳಿತಾರೂಢ ಪಕ್ಷದ ಸಂಸದ ಅಹ್ಮತ್ ಸಿಕ್ ಮೇಲೆ ದಾಳಿ ನಡೆಸಿದ್ದಾರೆ. ಪರಸ್ಪರ ಒಬ್ಬರನ್ನೊಬ್ಬರು ಎಳೆದಾಡುತ್ತಾ ಸ್ಪೀಕರ್ ವೇದಿಕೆ ಬಳಿ ತೆರಳಿದ ಆಡಳಿತ-ವಿಪಕ್ಷ ಸದಸ್ಯರು ಕೈಗೆ ಸಿಕ್ಕ ವಸ್ತುಗಳಿಂದ ತಲೆಯಲ್ಲಿ ರಕ್ತ ಬರುವಂತೆ ಹೊಡೆದಾಡಿಕೊಂಡಿದ್ದಾರೆ. ಸದನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಾಗಿದ್ದ ನಾಯಕರು ಸ್ಪೀಕರ್ ಎದುರೇ ಹೊಡೆದಾಡಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.(ಏಜೆನ್ಸೀಸ್)