ಸಂವಿಧಾನದತ್ತ ಹಕ್ಕುಗಳಿಗಾಗಿ ಹೋರಾಟ ಮಾಡಿ

bdvt uppar
ಭದ್ರಾವತಿಯಲ್ಲಿ ನೂತನ ಶ್ರೀ ಭಗೀರಥ ಸಮುದಾಯ ಭವನವನ್ನು ಹೊಸದುರ್ಗ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಉದ್ಘಾಟಿಸಿದರು. ಎಚ್.ಬಿಲ್ಲಪ್ಪ, ಬಲ್ಕಿಷ್ ಬಾನು, ಬಿ.ಕೆ.ಮೋಹನ್, ರವಿಕುಮಾರ್, ಡಾ. ರಂಗನಾಥ್ ಇತರರಿದ್ದರು.
Published on

ಭದ್ರಾವತಿ: ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ, ಸಂವಿಧಾನದತ್ತವಾದ ಹಕ್ಕುಗಳಿಗಾಗಿ ಹೋರಾಟ ಮಾಡಿದಾಗ ಮಾತ್ರ ಸಾಮಾಜಿಕ ನ್ಯಾಯ, ಸಮಾನತೆ, ಶಾಂತಿಯುತ ಜೀವನ ಕಂಡುಕೊಳ್ಳಲು ಸಾಧ್ಯ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಹೇಳಿದರು.

ಹಳೇನಗರದಲ್ಲಿ ತಾಲೂಕು ಉಪ್ಪಾರ ಸಂಘ ನಿರ್ಮಿಸಿರುವ ಶ್ರೀ ಭಗೀರಥ ಸಮುದಾಯ ಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಶ್ರೀಭಗೀರಥ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದ ಅವರು, ಸಮಾಜದ ಪ್ರತಿಯೊಬ್ಬರೂ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ಸಮಾಜದಿಂದ ಸಮುದಾಯ ಭವನ ನಿರ್ಮಾಣವಾದರೆ ಸಮುದಾಯದವರು ಹಾಗೂ ಸಾರ್ವಜನಿಕರು ಮದುವೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಮಾಡಬಹುದು. ಸಮಾಜದ ಎಲ್ಲರೂ ಸಂಘಟಿತರಾಗಿ ಸಮುದಾಯ ಭವನ ನಿರ್ಮಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಮಾತನಾಡಿ, ಸಂಪತ್ತಿನ ಸಮಾನ ಹಂಚಿಕೆಯಾಗಬೇಕು ಎಂದು ಎಲ್ಲ ಧರ್ಮಗಳೂ ಹೇಳುತ್ತವೆ. ಆದರೆ ಧರ್ಮವನ್ನು ಆಚರಿಸುವ ನಾವು ಅದನ್ನು ಪಾಲಿಸದಿರುವುದೇ ಸಮಾಜದಲ್ಲಿ ಬಡವ, ಬಲ್ಲಿದರ ನಡುವಿನ ಅಂತರಕ್ಕೆ ಕಾರಣವಾಗಿದೆ. ಸಮಾನತೆ, ಸಂಪತ್ತಿನ ಸಮಾನ ಹಂಚಿಕೆ ಆಗಬೇಕೆಂಬುದು ಬುದ್ಧ, ಬಸವ, ಅಂಬೇಡ್ಕರ್ ಎಲ್ಲರ ಆಶಯ. ನಮ್ಮ ಸರ್ಕಾರ ಅದರ ಅನುಷ್ಠಾನಕ್ಕೆ ಯೋಜನೆಗಳನ್ನು ಮಾಡುತ್ತದೆ. ಆದರೆ ಅದನ್ನು ಪಡೆಯಲು ಸರ್ಕಾರದ ಗಮನ ಸೆಳೆಯುವ ಕಾರ್ಯ ಜನರು ಮಾಡಬೇಕು ಎಂದು ಹೇಳಿದರು.

ಉಪ್ಪಾರ ಸಮಾಜದ ಅಧ್ಯಕ್ಷ ರವಿಕುಮಾರ್, ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್, ನಗರಸಭಾ ಸದಸ್ಯ ಬಿ.ಕೆ.ಮೋಹನ್, ನಿವೃತ್ತ ಕೆಎಎಸ್ ಅಧಿಕಾರಿ ಭೀಮಪ್ಪ, ರವೀಶ್‌ಕುಮಾರ್, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ಜಗನ್ನಾಥ್ ಸಗರ, ಕರ್ನಾಟಕ ರಾಜ್ಯ ಯುವ ಉಪ್ಪಾರ ಸಂಘದ ಅಧ್ಯಕ್ಷ ವೆಂಕಟೇಶ್, ನಗರಸಭಾ ಸದಸ್ಯೆ ಅನುಪಮಾ ಚನ್ನೇಶ್, ಪರಶುರಾಂ, ವಿದ್ಯಾಶ್ರೀ, ರಾಜಶೇಖರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net