

ಭಯೋತ್ಪಾದನೆಯ ಬೇರುಗಳು ವ್ಯಾಪಕವಾಗಿ ಹರಡುತ್ತಿವೆ ಎಂಬ ಕಳವಳಕ್ಕೆ ಮತ್ತೊಂದು ಪುಷ್ಟಿ ದೊರೆತಿದೆ. ಕರ್ನಾಟಕದಲ್ಲಿ ಈ ಹಿಂದೆಯೂ ಭಯೋತ್ಪಾದಕ ಚಟುವಟಿಕೆಗಳು ಕಾಣಿಸಿಕೊಂಡಿದ್ದವು. ಆದರೆ, ಉಗ್ರ ಸಂಘಟನೆಗಳ ಷಡ್ಯಂತ್ರಗಳನ್ನು ಬಯಲಿಗೆಳೆದು, ಸಂಚುಗಳನ್ನು ವಿಫಲಗೊಳಿಸುವಲ್ಲಿ ಭದ್ರತಾ ಪಡೆಗಳು, ಪೊಲೀಸ್ ವ್ಯವಸ್ಥೆ ಸಫಲವಾಗಿದ್ದವು. ಆದರೆ, ಕುಖ್ಯಾತ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಕರ್ನಾಟಕ ಹಾಗೂ ಕೇರಳದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ದಕ್ಷಿಣ ಭಾರತವನ್ನೇ ನೆಲೆ ಮಾಡಿಕೊಂಡಿರುವ ಆತಂಕಕಾರಿ ಮಾಹಿತಿಯನ್ನು ವಿಶ್ವಸಂಸ್ಥೆಯ ವರದಿಯೊಂದು ಹೊರಗೆಡವಿದೆ. ‘ಹಿಂದ್ ವಿಲಾಯ್’ ಸಂಘಟನೆ ಹೆಸರಿನಲ್ಲಿ ಭಾರತದಲ್ಲಿ ಸಕ್ರಿಯವಾಗಿರುವ ಐಸಿಸ್ನಲ್ಲಿ 180ರಿಂದ 200 ಭಯೋತ್ಪಾದಕರಿದ್ದಾರೆ. ಈ ಪೈಕಿ ಕೇರಳ ಮತ್ತು ಕರ್ನಾಟಕದಲ್ಲಿ ಹೆಚ್ಚು ಉಗ್ರರಿದ್ದಾರೆ ಎಂದು ವರದಿ ವಿವರಿಸಿದೆ. 2019ರ ಮೇನಲ್ಲಿ ಭಾರತದಲ್ಲಿ ತನ್ನ ಹೊಸ ಪ್ರಾಂತ್ಯ ಸ್ಥಾಪಿಸಿದ್ದಾಗಿ ಐಸಿಸ್ ಹೇಳಿಕೊಂಡಿತ್ತು. ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಈ ಸಂಘಟನೆ ವಿಧ್ವಂಸಕ ಕೃತ್ಯಗಳನ್ನು ಎಸಗಿ, ಅಮಾಯಕರ ಸಾವು-ನೋವಿಗೆ ಕಾರಣವಾಗಿರುವುದು ಗೊತ್ತೇ ಇದೆ.
ದಕ್ಷಿಣ ಭಾರತ ಅದರಲ್ಲೂ ಕರ್ನಾಟಕವನ್ನು ಉಗ್ರರು ಆಯ್ಕೆ ಮಾಡಿಕೊಂಡಿರುವುದಾದರೂ ಏಕೆ ಎಂಬ ಪ್ರಶ್ನೆಗೆ ನಿಖರ ಉತ್ತರ ಕೊಡುವುದು ಕಷ್ಟವೇ. ಆದರೂ, ಕೆಲ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಉತ್ತರ ಭಾರತ ಸೇರಿ ಹೊರ ರಾಜ್ಯ, ಹೊರ ದೇಶಗಳ ನಿವಾಸಿಗಳ ವಾಸಕ್ಕೆ ಅವಕಾಶ ಇರುವುದರಿಂದ ಆ ಪರಿಸ್ಥಿತಿಯ ದುರ್ಲಾಭ ಪಡೆಯುವ ಉಗ್ರರು. ಎಲ್ಲ ಭಾಷೆಯ ಜನರು ಇರುವುದರಿಂದ ಚಲನವಲನಗಳನ್ನು ಗುರುತಿಸುವುದು ಕಷ್ಟ ಎಂಬ ಗ್ರಹಿಕೆ ಹೊಂದಿದ್ದಾರೆ. ವಿದೇಶಿ ರಾಯಭಾರ ಕಚೇರಿಗಳು, ಪ್ರತಿಷ್ಠಿತ ಐಟಿ-ಬಿಟಿ ಕಂಪನಿಗಳು ಇರುವುದರಿಂದ ಅವುಗಳನ್ನು ದಾಳಿಗೆ ಗುರಿಯಾಗಿಸುವ ಷಡ್ಯಂತ್ರ. 2014 ಡಿಸೆಂಬರ್ 28ರಂದು ನಡೆದ ಬೆಂಗಳೂರಿನ ಚರ್ಚ್ಸಿ್ಟ್ರಟ್ ಬಾಂಬ್ ಸ್ಫೋಟ ಪ್ರಕರಣ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಆಗಿನಿಂದಲೇ ರಾಜ್ಯದಲ್ಲಿ ಐಸಿಸ್ ಜಾಲ ಸಕ್ರಿಯವಾಗಿದೆ. ಅದೀಗ ಇನ್ನಷ್ಟು ವಿಸ್ತರಿಸಿಕೊಂಡು ಸ್ಥಳೀಯ ಯುವಕರನ್ನು ಭಯೋತ್ಪಾದನೆಗೆ ಪ್ರಚೋದಿಸುತ್ತಿರುವುದು ಗಂಭೀರ ಸಂಗತಿ. ಕರ್ನಾಟಕ ಶಾಂತಿಪ್ರಿಯ ರಾಜ್ಯ. ಆದರೆ, ತನ್ನ ಭದ್ರತೆಗೆ ಅಪಾಯವಿದೆ ಎಂದಾದಾಗ ದುಷ್ಟಶಕ್ತಿಗಳನ್ನು ಹಣಿಯಲು ಹಿಂದೆಮುಂದೆ ನೋಡುವುದಿಲ್ಲ. ಉಗ್ರಜಾಲಗಳು ಸಕ್ರಿಯವಾಗಿರುವ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಐಸಿಸ್ ಮತ್ತು ಇತರ ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲು ಕೆಲಸ ಮಾಡುತ್ತಿದ್ದೇವೆ. ಈ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್ ಐಎ)ದೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸಲಿದ್ದೇವೆ’ ಎಂದಿದ್ದಾರೆ. ಅಲ್ಲದೆ, ‘ಕೇರಳ, ತಮಿಳುನಾಡು, ತೆಲಂಗಾಣ ಪೊಲೀಸರ ಜತೆಗೂ ಸಂಪರ್ಕದಲ್ಲಿದ್ದೇವೆ. ಕರ್ನಾಟಕದಲ್ಲಿ ಯಾವುದೇ ಉಗ್ರ ಚಟುವಟಿಕೆಗೆ ಅವಕಾಶ ಕೊಟ್ಟಿಲ್ಲ, ಕೊಡುವುದೂ ಇಲ್ಲ’ ಎಂದು ಸ್ಪಷ್ಟವಾಗಿ ನುಡಿದಿದ್ದಾರೆ. ಬೇಹುಗಾರಿಕಾ ಮೂಲಗಳನ್ನು ಇನ್ನಷ್ಟು ಸಶಕ್ತಗೊಳಿಸುವ ಜತೆಗೆ, ಉಗ್ರರ ಬೇರುಗಳನ್ನು ಕತ್ತರಿಸಿ ಹಾಕಲು ಅವಶ್ಯವಿರುವ ಎಲ್ಲ ಕ್ರಮಗಳನ್ನೂ ಸರ್ಕಾರ ಕೈಗೊಳ್ಳಲಿ.