

ನವದೆಹಲಿ: ಕಾಂಗ್ರೆಸ್ ಎಂದಿಗೂ ಸಂವಿಧಾನಕ್ಕಿಂತ ‘ಸತ್ತಾ’(ಅಧಿಕಾರ) ಆಯ್ಕೆ ಮಾಡುತ್ತದೆ. ವಿರೋಧ ಪಕ್ಷವು ಸಂಸ್ಥೆಗಳ ಸ್ವಾಯತ್ತತೆಯನ್ನು ಎಂದಿಗೂ ಸಹಿಸುವುದಿಲ್ಲ. ಸಾಂವಿಧಾನಿಕ ತತ್ವಗಳು ಮತ್ತು ಆತ್ಮವನ್ನು ನಾಶಮಾಡಲು ಪ್ರಯತ್ನಿಸಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಕ್ರೋಶ ಹೊರಹಾಕಿದ್ದಾರೆ.
ಲೋಕಸಭೆಯಲ್ಲಿ ‘ಭಾರತದ ಸಂವಿಧಾನದ 75 ವರ್ಷಗಳ ವೈಭವಯುತ ಪ್ರಯಾಣ’ ಕುರಿತ 2 ದಿನಗಳ ಚರ್ಚೆ ಆರಂಭಿಸಿದ ಸಚಿವ ಸಿಂಗ್, ಕಾಂಗ್ರೆಸ್ ಸಂವಿಧಾನ ತನ್ನ ಕೊಡುಗೆ ಎಂದು ಬಿಂಬಿಸಲು ಪ್ರಯತ್ನಿಸಿದೆ. ಆದರೆ ಬೇರೆಯವರ ಕೊಡುಗೆಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದೆ. ಬಿಜೆಪಿ ಸದಾ ಸಂವಿಧಾನದ ಮುಂದೆ ತಲೆಬಾಗುತ್ತದೆ ಮತ್ತು ಸಂಸ್ಥೆಗಳ ಸ್ವಾತಂತ್ರ್ಯ, ಸ್ವಾಯತ್ತತೆ ಜತೆ ಎಂದಿಗೂ ಆಟವಾಡಲ್ಲ ಎಂದು ಸಿಂಗ್ ಪ್ರತಿಪಾದಿಸಿದರು. ಈ ಮಾತುಗಳನ್ನು ಕೇಳಿದಾಗ ವಿಪಕ್ಷ ಸಂಸದರು ಗೇಲಿ ಮಾಡುವ ರೀತಿಯಲ್ಲಿ ಘೊಷಣೆ ಕೂಗಿದರು.
ಕಾಂಗ್ರೆಸ್ ತನ್ನ ದಶಕಗಳ ಅಧಿಕಾರದಲ್ಲಿ, ಸಂವಿಧಾನ ಬದಲಿಸುವ ದುರುದ್ದೇಶಪೂರಿತ ಮನೋಭಾವದಿಂದ ಆಗಾಗ್ಗೆ ಸಂವಿಧಾನ ತಿದ್ದುಪಡಿ ಮಾಡಿತ್ತು. ಆದರೆ ಮೋದಿ ಸರ್ಕಾರವು ಮೂಲಭೂತ ಮೌಲ್ಯಗಳನ್ನು ಬಲಪಡಿಸಲು ಮತ್ತು ಜನರ ಸಬಲೀಕರಣಕ್ಕಾಗಿ ತಿದ್ದುಪಡಿಗಳನ್ನು ಮಾಡಿದೆ. ಆಯ್ಕೆ ಇದ್ದಾಗಲೆಲ್ಲ ಕಾಂಗ್ರೆಸ್ ಸಂವಿಧಾನದ ಮೇಲೆ ಅಧಿಕಾರ ಆರಿಸಿಕೊಂಡಿದೆ. ತುರ್ತು ಪರಿಸ್ಥಿತಿ ಹೇರಿಕೆ, ಅನೇಕ ರಾಜ್ಯ ಸರ್ಕಾರಗಳ ವಜಾ ಮತ್ತು ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಕ್ರಮ ಕೈಗೊಂಡಿದ್ದಕ್ಕಾಗಿ ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ಅಗೌರವದಿಂದ ನೋಡಿತು. ಸಂವಿಧಾನವನ್ನು ಬುಡಮೇಲು ಮಾಡಿದವರು ಈಗ ಅದರ ರಕ್ಷಣೆಗಾಗಿ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಸಿಂಗ್ ಟೀಕಿಸಿದರು.
ಸಂವಿಧಾನ ಸಂಘ ಕಾ ವಿಧಾನ ಅಲ್ಲ: ‘ಭಾರತ್ ಕಾ ಸಂವಿಧಾನ್’ ಎಂದರೆ ಅದು ‘ಸಂಘ ಕಾ ವಿಧಾನ ಅಲ್ಲ’ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅರ್ಥ ಮಾಡಿಕೊಂಡಿಲ್ಲ ಎಂದು ಕಾಂಗ್ರೆಸ್ ನಾಯಕಿ, ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಲೋಕಸಭೆಯ ತಮ್ಮ ಚೊಚ್ಚಲ ಭಾಷಣದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳದೇ ಇದ್ದಿದ್ದರೆ ಆಡಳಿತ ಪಕ್ಷ ಸಂವಿಧಾನ ಬದಲಿಸಲು ಆರಂಭಿಸುತ್ತಿತ್ತು. ಸಂವಿಧಾನವನ್ನು ನ್ಯಾಯ, ಏಕತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ‘ಸುರಕ್ಷಾ ಕವಚ’ ಎಂದ ಪ್ರಿಯಾಂಕಾ, ಬಿಜೆಪಿ ನೇತೃತ್ವದ ಸರ್ಕಾರ ಕಳೆದ 10 ವರ್ಷಗಳಲ್ಲಿ ಇವೆಲ್ಲವನ್ನೂ ಮುರಿಯಲು ಯತ್ನಿಸಿದೆ ಎಂದು ಕಿಡಿಕಾರಿದರು. ತಮ್ಮ 32 ನಿಮಿಷಗಳ ಭಾಷಣದಲ್ಲಿ, ಸಂವಿಧಾನ ಬದಲಾಯಿಸುವ ಯತ್ನ, ಅದಾನಿ ಗ್ರೂಪ್ನ ಬೆಳೆಯುತ್ತಿರುವ ಏಕಸ್ವಾಮ್ಯ, ಮಹಿಳೆಯರ ಮೇಲಿನ ದೌರ್ಜನ್ಯ, ಸಂಭಾಲ್ ಮತ್ತು ಮಣಿಪುರ ಹಿಂಸಾಚಾರ ಘಟನೆಗಳಿಗೆ ಬಿಜೆಪಿಯನ್ನು ಗುರಿಯಾಗಿಸಿದ ಪ್ರಿಯಾಂಕಾ, ರಾಷ್ಟ್ರವ್ಯಾಪಿ ಜಾತಿ ಜನಗಣತಿಯ ಬೇಡಿಕೆಯನ್ನು ಪುನರುಚ್ಚರಿಸಿದರು.
ಉಗ್ರಮುಕ್ತ ಪಾಕ್ ಜತೆಗಷ್ಟೇ ಸಂಬಂಧ: ಭಯೋತ್ಪಾದನೆ ಮುಕ್ತ ಪಾಕಿಸ್ತಾನದ ಜತೆ ನಾವು ಉತ್ತಮ ಸಂಬಂಧ ಹೊಂದಲು ಬಯಸುತ್ತೇವೆ. ತನ್ನ ಹಿಂದಿನ ವರ್ತನೆಗಳನ್ನು ಬದಲಿಸದೆ ಇದ್ದರೆ, ಪಾಕಿಸ್ತಾನದ ಜತೆಗಿನ ದ್ವಿಪಕ್ಷೀಯ ಸಂಬಂಧಕ್ಕೆ ಅರ್ಥವೇ ಇರುವುದಿಲ್ಲ ಎಂದು ಸಚಿವ ಎಸ್. ಜೈಶಂಕರ್ ಸಂಸತ್ತಿಗೆ ಸ್ಪಷ್ಟಪಡಿಸಿದ್ದಾರೆ.
ಏನು ಮಾಡಿದ್ದೀರಿ?: ಬಾಂಗ್ಲಾದೇಶದ ಹಿಂದುಗಳನ್ನು ರಕ್ಷಿಸಲು ಎನ್ಡಿಎ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಸಂಸತ್ತಿಗೆ ಪ್ರಧಾನಿ ಮೋದಿ ವಿವರಿಸಬೇಕು ಎಂದು ಶಿವಸೇನೆ ನಾಯಕ, ಮಾಜಿ ಸಿಎಂ ಉದ್ಧವ್ ಠಾಕ್ರೆ ಸವಾಲು ಹಾಕಿದ್ದಾರೆ. ಬಿಜೆಪಿಗೆ ಹಿಂದುತ್ವ ರಾಜಕೀಯ ಲಾಭಕ್ಕೆ ಮಾತ್ರ ಎಂದು ಉದ್ಧವ್ ಕಿಡಿಕಾರಿದ್ದಾರೆ.
ದೌರ್ಬಲ್ಯ ತೋರಲಾರೆ: ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ವಾಗ್ದಂಡನೆಗೆ ಒಳಪಡಿಸುವ ವಿಪಕ್ಷಗಳ ಯತ್ನ ರಾಜ್ಯಸಭೆಯಲ್ಲಿ ಕೋಲಾಹಲ ಎಬ್ಬಿಸಿದ್ದರಿಂದ ಸದನವನ್ನು ಸೋಮವಾರಕ್ಕೆ ಮುಂದೂಡಲಾಯಿತು. ಸಭಾಪತಿ ಧನಕರ್ ಕೂಡ ವಿಪಕ್ಷಗಳ ಬಗ್ಗೆ ಅಸಮಾಧಾನ ಹೊರಹಾಕಿ, ನಾನು ರೈತನ ಮಗ ಮತ್ತು ಎಂದಿಗೂ ದೌರ್ಬಲ್ಯವನ್ನು ತೋರಿಸಲಾರೆ ಎಂದು ಕಿಡಿಕಾರಿದರು.
ಆವಾಸ್ ಯೋಜನೆ ವಿಸ್ತರಣೆ: 2 ಕೋಟಿ ಹೆಚ್ಚುವರಿ ಮನೆಗಳ ನಿರ್ಮಾಣ ಗುರಿ ಜತೆ ಪಿಎಂ ಆವಾಸ್ ಯೋಜನೆ- ಗ್ರಾಮೀಣವನ್ನು ಮಾರ್ಚ್ 2029ರವರೆಗೆ ವಿಸ್ತರಿಸಲಾಗಿದ್ದು, ಯೋಜನೆಗೆ ಹಣಕಾಸು ನೆರವು ಹೆಚ್ಚಿಸಲು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.