

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ಪ್ರಧಾನಿ ಮೋದಿ ರೋಡ್ ಶೋನಲ್ಲಿ ಕೊಂಚ ಬದಲಾವಣೆಯಾಗಿದೆ.
ಈ ಮೊದಲು ಮೇ 6ರ ಶನಿವಾರ ಮಾತ್ರ ರೋಡ್ ಶೋ ನಿಗದಿಯಾಗಿತ್ತು. ಇದೀಗ ಶನಿವಾರದ ಜೊತೆಗೆ ಭಾನುವಾರವು ಕೂಡ ರೋಡ್ ಶೋ ಇರಲಿದೆ. ಮೊದಲ ಭಾಗವಾಗಿ ಶನಿವಾರ ಬೆಳಗ್ಗೆ ರೋಡ್ ಶೋ ನಡೆಸಲು ನಿರ್ಧಾರ ಮಾಡಲಾಗಿದೆ. ಎರಡನೇ ಹಂತದಲ್ಲಿ ಭಾನುವಾರ ಬೆಳಗ್ಗೆ ರೋಡ್ ಶೋ ನಡೆಸಲು ತೀರ್ಮಾನ ಮಾಡಲಾಗಿದೆ.
ಬೆಂಗಳೂರು ಟ್ರಾಫಿಕ್ ಸಮಸ್ಯೆಯ ಕಾರಣ ಭಾನುವಾರ ಬೆಳಗ್ಗೆ ರೋಡ್ ಶೋ ನಡೆಯಲಿದೆ. ಶನಿವಾರ ಸಂಜೆ ರೋಡ್ ಶೋನಿಂದ ವೀಕೆಂಡ್ ದಿನದಲ್ಲಿ ಟ್ರಾಫಿಕ್ ಹೆಚ್ವಾಗುವ ಹಿನ್ನೆಲೆಯಲ್ಲಿ ಸ್ವತಃ ಮೋದಿಯ ಸೂಚನೆ ಮೇರೆಗೆ ಭಾನುವಾರ ಬೆಳಗ್ಗೆ ರೋಡ್ ಶೋ ನಡೆಸಲು ತೀರ್ಮಾನಿಸಲಾಗಿದೆ.
ಶನಿವಾರ ಬೆಳಗ್ಗೆ 9 ಗಂಟೆಗೆ 10.1 ಕಿ.ಮೀ ರೋಡ್ ಶೋ ನಡೆಯಲಿದೆ. ಬೆಂಗಳೂರು ಕೇಂದ್ರ ಭಾಗದಲ್ಲಿ ಬರುವ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಯಲಿದೆ. ಸಿವಿ ರಾಮನ್ ನಗರದಿಂದ, ಬ್ರಿಗೆಡ್ ರಸ್ತೆವರೆಗೂ ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಶನಿವಾರ ಸಂಜೆ ನಡೆಯಬೇಕಿದ್ದ ರೋಡ್ ಶೋ ಭಾನುವಾರ ಬೆಳಗ್ಗೆಗೆ ಶಿಫ್ಟ್ ಆಗಿದೆ. ಅಂದು ಬೆಳಗ್ಗೆ 9 ಗಂಟೆಗೆ 25.5 ಕಿ.ಮೀ ಮೆರವಣಿಗೆಯಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದವರೆಗೂ ರೋಡ್ ಶೋ ನಡೆಯಲಿದೆ.
ಮೇ 5 ರಂದೇ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಬಳ್ಳಾರಿ ಮತ್ತು ತುಮಕೂರುಗಳಲ್ಲಿ ಬೃಹತ್ ಸಾರ್ವಜನಿಕ ಸಭೆಗಳಲ್ಲಿ ಮೋದಿ ಭಾಗಿಯಾದ ನಂತರ ಅಂದು ರಾತ್ರಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದು ಮೇ 06ರಂದು ಬೆಂಗಳೂರಿನಲ್ಲಿ ಐತಿಹಾಸಿಕ ಬೃಹತ್ ರೋಡ್ ಶೋ ನಡೆಸಲಿದ್ದಾರೆ.