ಫೆಂಗಲ್​ ಚಂಡಮಾರುತ ಎಫೆಕ್ಟ್​! ಈ ಎರಡು ರಾಜ್ಯಗಳಿಗೆ ಭಾರೀ ಮಳೆಯ ಮುನ್ಸೂಚನೆ ನೀಡಿದ IMD

ವಿಜಯವಾಣಿ - 2024-11-21T184326.390
Published on

ನವದೆಹಲಿ: ಹಿಂದೂ ಮಹಾಸಾಗರದ ಮೇಲೆ ಸುಮಾತ್ರಾ ಕರಾವಳಿಯಿಂದ ಮತ್ತು ಪಕ್ಕದ ದಕ್ಷಿಣ ಅಂಡಮಾನ್ ಸಮುದ್ರಕ್ಕೆ ಚಂಡಮಾರುತ ಅಪ್ಪಳಿಸುವ ಮುನ್ಸೂಚನೆ ಲಭಿಸಿದೆ. ಈ ಅಲೆಯು ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆಯಿರುವ ಹಿನ್ನಲೆ ಇದು ತಮಿಳುನಾಡು, ಆಂಧ್ರಪ್ರದೇಶ ಮತ್ತು ಶ್ರೀಲಂಕಾದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದು ಹಾಗೂ ಭಾರೀ ಮಳೆಗೆ ಕಾರಣವಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.

ನವೆಂಬರ್ 26ರಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ಗೆ ಐಎಂಡಿ ಆರೆಂಜ್ ಅಲರ್ಟ್ ನೀಡಿದ್ದು, 115.6 ಮಿಮೀ ಮತ್ತು 204.4 ಮಿಮೀ ನಡುವೆ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹೇಳಿದೆ. ಸೌದಿ ಅರೇಬಿಯಾ ಪ್ರಸ್ತಾಪಿಸಿದಂತೆ ಈ ಚಂಡಮಾರುತವನ್ನು "ಫೆಂಗಲ್" ಎಂದು ಕರೆಯಲಾಗಿದೆ. ಡಾನಾ ಸೈಕ್ಲೋನ್​ ನಂತರದ ಎರಡನೇ ಚಂಡಮಾರುತ ಇದಾಗಿದೆ. ನಿಖರವಾದ ಮಾರ್ಗವು ಅನಿಶ್ಚಿತವಾಗಿದ್ದರೂ, ಹವಾಮಾನ ತಜ್ಞರು ಚೆನ್ನೈ ಕರಾವಳಿಯನ್ನು ದಾಟುವ ಹೆಚ್ಚಿನ ಸಂಭವನೀಯತೆಯನ್ನು ವರದಿಯಲ್ಲಿ ಸೂಚಿಸಿದ್ದಾರೆ. ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಾದ್ಯಂತ ಇಂದು ಗುಡುಗು, ಮಿಂಚಿನ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನವೆಂಬರ್ 26ರ ವೇಳೆಗೆ, ಈ ಪ್ರದೇಶಗಳಲ್ಲಿ ಬಿರುಸಿನ ಮಳೆಯನ್ನು ನಿರೀಕ್ಷಿಸಲಾಗಿದೆ. ನ.26ರಿಂದ 29ರವರೆಗೆ ದಕ್ಷಿಣ ಕರಾವಳಿ, ಆಂಧ್ರಪ್ರದೇಶ ಮತ್ತು ರಾಯಲಸೀಮಾದ ಮೇಲೆ ಚಂಡಮಾರುತದ ಪರಿಣಾಮ ಬೀರುವ ಸಾಧ್ಯತೆಯಿದ್ದು, ಇಲ್ಲಿಯೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ರೈತರಿಗೆ ಸಂಗ್ರಹಿಸಲು ಸಿದ್ಧವಾಗಿರುವ ಬೆಳೆಗಳನ್ನು ಆದಷ್ಟು ಬೇಗ ಕೊಯ್ಲು ಮಾಡಲು ಸಲಹೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮೀನುಗಾರರು ಮತ್ತು ಕಡಲ ಚಟುವಟಿಕೆಗಳಲ್ಲಿ ತೊಡಗಿರುವವರು ಸಮುದ್ರಕ್ಕೆ ಇಳಿಯದಂತೆಯೂ ಎಚ್ಚರಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net