

ವಿಜಯಪುರ: ಜಲವೇ ಜೀವನ, ಅತ್ಯಮೂಲ್ಯವಾದ ನೀರಿನ ಪ್ರಾಮುಖ್ಯತೆ ಹಾಗೂ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಸುಸ್ಥಿರ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಸಾಂಸ್ಥಿಕಗೊಳಿಸುವ ಕುರಿತು ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ಗ್ರಾಮೀಣ ಮಟ್ಟದಲ್ಲಿ ಪ್ರತಿ ಮನೆ-ಮನೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ನೀಡುವ ಯೋಜನೆಯಾದ ಜಲ ಜೀವನ ಮಿಷನ್ ಯೋಜನೆಯು ಒಂದು ಬಹುದೊಡ್ಡ ಯೋಜನೆಯಾಗಿದೆ. ಗ್ರಾಮೀಣ ಜನರಿಗೆ ಮೂಲಭೂತ ಅವಶ್ಯಕತೆಗಳಲ್ಲಿ ಬಹು ಮುಖ್ಯವಾದದ್ದು ನೀರು. ಈ ಅವಶ್ಯಕತೆಯನ್ನು ಕಾಲ-ಕಾಲಕ್ಕೆ ಅನುಗುಣವಾಗಿ ಪೂರೈಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನೀರಿನ ಪ್ರಾಮುಖ್ಯತೆ ಹಾಗೂ ನಿರ್ವಹಣೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ಫೀಡ್ ಬ್ಯಾಕ್ ಸಂಸ್ಥೆಯ ಅಜಯ್ ಸಿನ್ಹಾ ಮಾತನಾಡಿ, ನೀರಿನ ಗುಣಮಟ್ಟವನ್ನು ಕಾಯ್ದುಕೊಳ್ಳುವ ಕುರಿತು, ಗುಣಮಟ್ಟದ ನೀರನ್ನು ಪೂರೈಸುವ ಕುರಿತು ಹಾಗೂ ಗ್ರಾಮ ಪಂಚಾಯಿತಿಗಳು ಆರ್ಥಿಕವಾಗಿ ಸ್ವಾವಲಂಬನೆಯನ್ನು ಹೊಂದಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕಾರ್ಯಾಗಾರದಲ್ಲಿ ತಿಳಿಸಿದರು.
ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಬಿ.ಎಸ್. ಕುಂಬಾರ, ಸಂಜಯ್ ಶುಕ್ಲಾ, ನಿಶಾತ್ ಸಾಧಿಯಾ ಮತ್ತಿತರರಿದ್ದರು.