

ಗುವಾಹಟಿ: ಕಾಡಿನಿಂದ ಆಹಾರ ಅರಸಿ ನಾಡಿನತ್ತ ಬಂದ ಹೆಣ್ಣು ಹುಲಿಯನ್ನು (Tiger) ಕಂಡು ಭಯಬೀತರಾದ ಜನರು ಕಲ್ಲು, ಇಟ್ಟಿಗೆ, ದೊಣ್ಣೆಯಿಂದ ಹೊಡೆದು ಅದರ ಕಣ್ಣು ಹಾಗೂ ಮೆದುಳಿನ ಭಾಗಕ್ಕೆ ಗಂಭೀರವಾಗಿ ಗಾಯಮಾಡಿರುವ ಘಟನೆ ಅಸ್ಸಾಂನ ನಾಗಾಂವ್ ಜಿಲ್ಲೆಯ ಕಲಿಯಾಬೋರ್‌ನಲ್ಲಿ ನಡೆದಿದೆ.
ಸದ್ಯ ಹುಲಿಯ ಸ್ಥಿತಿ ಚಿಂತಾಜನಕವಾಗಿದ್ದು, ಅದನ್ನು ರಕ್ಷಿಸಿ ಅರಣ್ಯ ಇಲಾಖೆಯ ಅಧಿಕಾರಿಗಳು ಅದಕ್ಕೆ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಹುಲಿಯು ಒಂದು ದೃಷ್ಟಿಯನ್ನು ಕಳೆದುಕೊಂಡಿದ್ದು, ಮೂಗಿನ ಭಾಗದಲ್ಲಿ ತೀವ್ರ ರಕ್ತಸ್ರಾವವಾಗುತ್ತಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾತನಾಡಿರುವ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು, ಕಲಿಯಾಬೋರ್‌ನಲ್ಲಿ ವಸತಿ ಪ್ರದೇಶದ ಬಳಿಯ ಪೊದೆಗಳಲ್ಲಿ ತಿರುಗಾಡುತ್ತಿದ್ದ ಹುಲಿಯ ಮೇಲೆ ಸ್ಥಳೀಯರು ದಾಳಿ ನಡೆಸಿದ್ದಾರೆ. ಹೆಣ್ಣು ಹುಲಿಯನ್ನು ಕಂಡು ಭಯಭೀತರಾದ ಜನರು ಅದರ ಮೇಲೆ ಕಲ್ಲು, ಇಟ್ಟಿಗೆ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ದಾಳಿಯಲ್ಲಿ ಹುಲಿ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.