

ನವದೆಹಲಿ: ಬರ್ತ್ಡೇ ಪಾರ್ಟಿ ವೇಳೆ ಗನ್ನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಭಾರತ ಮೂಲದ ವಿದ್ಯಾರ್ಥಿ (Indian Student) ಮೃತಪಟ್ಟಿರುವ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ಅಟ್ಲಾಂಟಾದಲ್ಲಿ ನಡೆದಿದೆ.
ಮೃತಯುವಕನನ್ನು ತೆಲಂಗಾಣದ ಉಪ್ಪಲ್ ಮೂಲದ ಆರ್ಯನ್ ರೆಡ್ಡಿ (Aryan reddy) ಎಂದು ಗುರುತಿಸಲಾಗಿದ್ದು, ಈತ ಅಟ್ಲಾಂಟಾದ ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಎರಡನೇ ವರ್ಷದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ. ನ.13 ರಂದು ಈ ಘಟನೆ ನಡೆದಿದ್ದು, ಮೃತದೇಹ ಇಂದು (ನವೆಂಬರ್ 22) ತೆಲಂಗಾಣ ತಲುಪಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬರ್ತ್ಡೇ ಪಾರ್ಟಿ ವೇಳೆ ಆರ್ಯನ್ ತನ್ನ ಬಳಿ ಇದ್ದ ಗನ್ಅನ್ನು ತೆಗೆದು ಸ್ವಚ್ಛಗೊಳಿಸಲು ತೆಗೆದಿದ್ದಾನೆ. ಈ ವೇಳೆ ಆಕಸ್ಮಿವಾಗಿ ಎದೆಗೆ ಗುಂಡು ಹಾರಿದ್ದು, ಶಬ್ದ ಕೇಳಿದ ಸ್ನೇಹಿತರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆರ್ಯನ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಸದ್ಯ ಮೃತದೇಹವನ್ನು ಭಾರತಕ್ಕೆ ತರಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಆರ್ಯನ್ ತಂದೆ ಸುದರ್ಶನ್, ವಿದೇಶದಲ್ಲಿ ಓದುತ್ತಿರುವ ಮಕ್ಕಳು ಗನ್ ಲೈಸೆನ್ಸ್ ಪಡೆಯುವ ಬಗ್ಗೆ ಪೋಷಕರು ಎಚ್ಚರಿಕೆ ವಹಿಸಬೇಕು. ಆರ್ಯನ್ ಬೇಟೆಯಾಡುವ ಗನ್ ಪರವಾನಗಿಯನ್ನು ಪಡೆದಿದ್ದ. ವಿದ್ಯಾರ್ಥಿಗಳು ಅಲ್ಲಿ ಬಂದೂಕಿನ ಪರವಾನಗಿ ಪಡೆದುಕೊಳ್ಳಬಹುದು ಎಂದು ನಮಗೆ ತಿಳಿದಿರಲಿಲ್ಲ. ಯಾವುದೇ ಪೋಷಕರಿಗೂ ಇಂತಹ ಸ್ಥಿತಿ ಎದುರಾಗಬಾರದು ಎಂದು ಕಣ್ಣೀರಿಟ್ಟಿದ್ದಾರೆ.