ಮಹಿಳಾ ಥೆರೆಪಿಸ್ಟ್‌ಗೆ 20 ವರ್ಷ ಜೈಲು ಸಜೆ

court
Published on

ಬೆಂಗಳೂರು: ಕ್ಲಿನಿಕ್‌ಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಹಿಳಾ ಥೆರಪಿಸ್ಟ್‌ಗೆ 20 ವರ್ಷ ಕಠಿಣ ಜೈಲುಶಿಕ್ಷೆ ವಿಧಿಸಿ FTSC 1ನೇ ನ್ಯಾಯಾಲಯ ತೀರ್ಪು ನೀಡಿದೆ.

ಬಾಣಸವಾಡಿ ಎಚ್‌ಆರ್‌ಬಿಆರ್ ಲೇಔಟ್ 1ನೇ ಹಂತದ ಸಾಂಡ್ರಾ ಉರ್ಸಿಲ್ (26) ಅಪರಾಧಿ. ಜೈಲು ಶಿಕ್ಷೆ ಜತೆಗೆ 60 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶ ಎನ್.ಎಂ. ರಮೇಶ್ ತೀರ್ಪು ನೀಡಿದ್ದಾರೆ. ಅಲ್ಲದೆ, ನೊಂದ ಬಾಲಕಿಗೆ ಅಪರಾಧಿಗೆ ವಿಧಿಸಿದ 60 ಸಾವಿರ ರೂ. ದಂಡದ ಮೊತ್ತ ಮತ್ತು ಡಿಎಲ್‌ಎಸ್‌ಎಯಿಂದ 1.50 ಲಕ್ಷ ರೂ. ಪರಿಹಾರ ನೀಡುವಂತೆ ಸೂಚಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ ವಾದ ಮಂಡಿಸಿದ್ದರು.

ಸಂತ್ರಸ್ತ 4 ವರ್ಷ 10 ತಿಂಗಳ ಬಾಲಕಿಗೆ ಮಾತನಾಡುವ ಸಮಸ್ಯೆಯಿತ್ತು. ಆದರಿಂದ ಸಾಂಡ್ರಾ ಉರ್ಸಿಲ್ ಅವರ ಹಲೋ ವಲ್ಡ್‌ರ್ಸ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಕ್ಲಿನಿಕ್‌ನಲ್ಲಿ 2022ರ ಮೇನಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ವಾರದಲ್ಲಿ 3 ದಿನಗಳ ಕಾಲ ಥೆರಪಿಗೆ ಬಾಲಕಿಯನ್ನು ಕರೆದುಕೊಂಡು ಹೋಗುತ್ತಿದ್ದರು. ರೂಮ್ ಒಳಗೆ ಕರೆದುಕೊಂಡು ಹೋಗುತ್ತಿದ್ದ ಸಾಂಡ್ರಾ, ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಳು.

ನೊಂದ ಬಾಲಕಿ, ಪಾಲಕರ ಬಳಿ ನೋವು ತೋಡಿಕೊಂಡಿದ್ದಳು. ಈ ಬಗ್ಗೆ ಪಾಲಕರು ಕೊಟ್ಟ ದೂರಿನ ಮೇರೆಗೆ ಗೋವಿಂದಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಾಂಡ್ರಾಳನ್ನು ಬಂಧಿಸಿದ್ದರು. ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net