

ಮುಂಬೈ: ಮುಂಬೈನ ಕಾಲೇಜೊಂದು ಬುರ್ಖಾ ಧರಿಸಿ ಆವರಣಕ್ಕೆ ಪ್ರವೇಶಿಸದಂತೆ ವಿದ್ಯಾರ್ಥಿಗಳನ್ನು ತಡೆದಿದೆ. ಆಗ ಪೋಷಕರು ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿದ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿದ್ದಾರೆ. ಚೆಂಬೂರ್ ಮೂಲದ ಕಾಲೇಜಿನ ಭದ್ರತಾ ಸಿಬ್ಬಂದಿಯು ಬುಧವಾರ ಕಾಲೇಜಿಗೆ ಪ್ರವೇಶಿಸುವ ಮೊದಲು ತಮ್ಮ ಬುರ್ಖಾಗಳನ್ನು ತೆಗೆಯುವಂತೆ ವಿದ್ಯಾರ್ಥಿಗಳಿಗೆ ಹೇಳಿದರು. ಏಕೆಂದರೆ ಕಾಲೇಜು ತನ್ನದೇ ಆದ ಸಮವಸ್ತ್ರವನ್ನು ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಸಮಯದಲ್ಲಿ ವಿದ್ಯಾರ್ಥಿಗಳ ಪಾಲಕರು ಸಹ ಕಾಲೇಜಿಗೆ ಆಗಮಿಸಿದ್ದರಿಂದ ಗಲಾಟೆಯಾಗಿದೆ. ಗೇಟ್ನ ಹೊರಗೆ ಈ ಘಟನೆ ನಡೆದ ನಂತರ ವಿಡಿಯೋಗಳು ಪ್ರಸಾರವಾಗತೊಡಗಿದೆ. ಆಗ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪೋಷಕರು ಮತ್ತು ಕಾಲೇಜು ಅಧಿಕಾರಿಗಳೊಂದಿಗೆ ಸಮಸ್ಯೆಯನ್ನು ಚರ್ಚಿಸಿದರು ಎನ್ನಲಾಗಿದೆ.
ಇದೀಗ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜು ಆವರಣದೊಳಗೆ ಬುರ್ಖಾ ತೆಗೆಯಲು ಸಿದ್ಧರಿದ್ದೇವೆ ಎಂದು ಹೇಳಿದ್ದು, ತರಗತಿಯಲ್ಲಿ ಸ್ಕಾರ್ಫ್ ಧರಿಸಲು ಅನುಮತಿ ನೀಡಲಾಗಿದೆ. ಇದಕ್ಕೆ ಕಾಲೇಜು ಆಡಳಿತ ಮಂಡಳಿ ಕೂಡ ಒಪ್ಪಿಗೆ ಸೂಚಿಸಿದ ಬಳಿಕ ಉದ್ವಿಗ್ನತೆ ಶಮನಗೊಂಡಿದೆ. ಅಂದಹಾಗೆ ತರಗತಿಗಳಿಗೆ ಹಾಜರಾಗುವ ಮೊದಲು ಹುಡುಗಿಯರು ವಾಶ್ರೂಮ್ನಲ್ಲಿ ಬುರ್ಖಾವನ್ನು ತೆಗೆಯಬೇಕು ಎಂದು ತಿಳಿಸಲಾಗಿದೆ.
ಪ್ರವೇಶ ದ್ವಾರದ ಭದ್ರತಾ ಸಿಬ್ಬಂದಿ ಕಾಲೇಜು ಪ್ರಾಂಶುಪಾಲರು ನೀಡಿದ ಸೂಚನೆಗಳನ್ನು ಅನುಸರಿಸುತ್ತಿದ್ದು, ಬುರ್ಖಾ ಧರಿಸಿದ ವಿದ್ಯಾರ್ಥಿಗಳು ತಮ್ಮ ಬುರ್ಖಾಗಳನ್ನು ತೆಗೆದುಹಾಕುವಂತೆ ಒತ್ತಾಯಿಸಲಾಗಿದೆ.